Liquor Sale: ದರ ಏರಿಕೆಗೂ ಡೋಂಟ್ ಕೇರ್: ಚಳಿಗಾಲದಲ್ಲಿ ಭರ್ಜರಿ ಮದ್ಯ ಮಾರಾಟ
ಬೆಂಗಳೂರು, ಡಿಸೆಂಬರ್ 06: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಹೀಗಾಗಿ ಸರ್ಕಾರದ ಬೊಕ್ಕಸ ಖಾಲಿಯಾಗದಂತೆ ಆದಾಯ ಸರಿದೂಗಿಸಲು ಸರ್ಕಾರ ನೀಡಿದ್ದ ಟಾಸ್ಕ್‌ನಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ.
ಗ್ಯಾರಂಟಿಗಳನ್ನು ಸರಿದೂಗಿಸಲು ಆದಾಯಕ್ಕಾಗಿ ಹರಸಾಹಸ ಪಡುತ್ತಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಹೆಗಲು ನೀಡಿದ್ದಾರೆ. ಬೆಲೆ ಏರಿಕೆಗೂ ನಡುವೆಯೂ ರಾಜ್ಯದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಏಪ್ರಿಲ್‌ನಿಂದ ನವೆಂಬರ್‌ವರೆಗೆ ಅಂದರೆ ಕೇವಲ ಎಂಟು ತಿಂಗಳಿನಲ್ಲಿ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಳವಾಗಿದ್ದು, 22,157 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2,500 ಕೋಟಿ ರೂಪಾಯಿ ಹೆಚ್ಚು ಆದಾಯ ಬಂದಿದೆ.

ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದ ರಾಜ್ಯ ಸರ್ಕಾರ ತನ್ನ ಬೊಕ್ಕಸದ ಆದಾಯ ಹೆಚ್ಚಳಕ್ಕೆ ಬೇರೆ ಆದಾಯದ ಮೂಲಗಳ ಬಗ್ಗೆ ಗಮನಹರಿಸಿತ್ತು. ಹೀಗಾಗಿ 2023ರ ಬಜೆಟ್‌ನಲ್ಲಿ ಸರ್ಕಾರದ ಬಹುದೊಡ್ಡ ಆದಾಯದ ಮೂಲವಾದ ಅಬಕಾರಿ ಸುಂಕವನ್ನು ಶೇಕಡ 10 ರಿಂದ 20 ರಷ್ಟು ಹೆಚ್ಚಳ ಮಾಡಿತ್ತು.
ಮೊದಮೊದಲು ಸರ್ಕಾರದ ಈ ಪ್ಲಾನ್ ಉಪಯೋಗಕ್ಕೆ ಬಂದಿರಲಿಲ್ಲ. ಯಾಕೆಂದರೆ ಆಗಸ್ಟ್ ತಿಂಗಳ ಹೊತ್ತಿಗೆ ರಾಜ್ಯದಲ್ಲಿ ಮದ್ಯ ಮಾರಾಟ ಕುಸಿದಿತ್ತು. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ.10ರಿಂದ 15ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿತ್ತು. ಇದಕ್ಕೆ ಬೆಲೆ ಏರಿಕೆಯೇ ಮುಖ್ಯ ಕಾರಣವಾಗಿತ್ತು. ಸ್ಕಾಚ್ ಮದ್ಯ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರ್ಯಾಂಡ್‌ಗೆ ಹಾಗೂ ಪ್ರೀಮಿಯಂ ಬ್ರ್ಯಾಂಡ್ ಸೇವಿಸುತ್ತಿರುವವರು ಅದಕ್ಕಿಂತ ಕೆಳಗಿನ ಬ್ರ್ಯಾಂಡ್ ಖರೀದಿಸುತ್ತಿದ್ದರು. ಇದರ ಮಧ್ಯೆ ನಕಲಿ ಮದ್ಯದ ಹಾವಳಿ ಕೂಡ ಹೆಚ್ಚಾಗಿತ್ತು.

ಬಳಿಕ ಮದ್ಯ ಮಾರಾಟದಲ್ಲಿ ಸುಧಾರಣೆ ಕಂಡಿದ್ದು, ಇದೀಗ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಇನ್ನು ಚಳಿಗಾಲ ಆರಂಭವಾಗುತ್ತಿದ್ದಂತೆ ಅಬಕಾರಿ ಇಲಾಖೆಗೆ ಸುಗ್ಗಿ ಕಾಲದಂತಾಗಿದ್ದು, ನವೆಂಬರ್ ತಿಂಗಳಿನಲ್ಲಿ ಮದ್ಯ ಮಾರಾಟ ಅದರಲ್ಲೂ ಬೀಯರ್ ಮಾರಾಟ ಜೋರಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್‌ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಮಾರಾಟ ಹೆಚ್ಚಳವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟ ಆಗಿತ್ತು. ಆದರೆ, ಈ ವರ್ಷ ನವೆಂಬರ್‌ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ ಎಂದು ವರದಿಯಾಗಿದೆ.












Click it and Unblock the Notifications