BJP President: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ: ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಪಟ್ಟ?
ಬೆಂಗಳೂರು, ಜನವರಿ 03: ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ಕುರ್ಚಿ ಅಲುಗಾಡುತ್ತಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇದೆ. ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಕರ್ನಾಟಕಕ್ಕೆ ಚುನಾವಣಾಧಿಕಾರಿಯಾಗಿ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ, ಕರ್ನಾಟಕದಲ್ಲಿ ಹೊಸ ಅಧ್ಯಕ್ಷರ ನೇಮಕವಾಗುವ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದ್ದು, ಇತ್ತ ಹಲವು ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಬಿ.ವೈ. ವಿಜಯೇಂದ್ರ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಸಿ ಟಿ ರವಿ, ಅಶ್ವತ್ ನಾರಾಯಣ್, ಆರ್ ಅಶೋಕ್, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕನ ಹೆಸರು ಕೂಡ ಕೇಳಿಬರುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಸುದ್ದಿಗಳು ಹರಿದಾಡುತ್ತಿದ್ದಂತೆ ಹೊಸ ವರ್ಷದಂದು ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ್ದರು. ಈ ಭೇಟಿಯ ವೇಳೆ ಕರ್ನಾಟಕದ ಭಿನ್ನಮತಕ್ಕೆ ಬ್ರೇಕ್ ಹಾಕುವಂತೆ ಅಮಿತ್ ಶಾ ಅವರಿಗೆ ವಿಜಯೇಂದ್ರ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಬಿಜೆಪಿ ಪಾಳಯದಲ್ಲಿಯೇ ಯಡಿಯೂರಪ್ಪ ಅವರ ವಿರೋಧಿ ಬಣ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿತ್ತು. ನಿರಂತರವಾಗಿ ಬಿಜೆಪಿ ಹೋರಾಟ ಹಾಗೂ ಬಿಜೆಪಿ ಕಾರ್ಯಕ್ರಮಗಳಿಂದ ದೂರವಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಮ್ ರಾಜ್ಯಾಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿಯುವ ಮೂಲಕ ಹೈಕಮಾಂಡ್ ನಾಯಕರ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದರು.
ಮೊದಲಿನಿಂದಲೂ ಉತ್ತರ ಕರ್ನಾಟಕದ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಹೀಗಾಗಿ ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಅರವಿಂದ್ ಬೆಲ್ಲದ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡುವ ಕುರಿತು ಚರ್ಚೆಯಾಗುತ್ತಿದೆ. ಅರವಿಂದ್ ಬೆಲ್ಲದ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡಿದ್ರೆ ಯಡಿಯೂರಪ್ಪ ಅವರ ವಿರೋಧಿ ಬಣ ಫುಲ್ ಸೈಲೆಂಟ್ ಆಗಲಿದೆ ಎಂದು ಹೇಳಲಾಗಿದೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ ಎಂದು ನಾನು ಎಂದು ಹೇಳುವುದಿಲ್ಲ. ಆದರೆ, ಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ ಎಂದು ಹೇಳಿದರು.












Click it and Unblock the Notifications