LHB: ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಮೈಸೂರು, ಶಿವಮೊಗ್ಗ, ತಾಳಗುಪ್ಪ, ತಿರುಪತಿ ಲೈನ್ ರೈಲುಗಳ ಹಳೇ ಬೋಗಿಗಳಿಗೆ ಗುಡ್ಬೈ
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಮತ್ತಷ್ಟು ರೈಲುಗಳು ಹಳೇಯ ಸಾಂಪ್ರದಾಯಿಕ ಐಸಿಎಫ್ ಬೋಗಿಗಳಿಂದ ಅತ್ಯಾಧುನಿಕ, ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನದ ಎಲ್ಎಚ್ಬಿ ಬೋಗಿಗಳಿಗೆ ಪರಿವರ್ತನೆಗೊಂಡಿವೆ. ಈ ಮಾರ್ಗದ ವಿಶೇಷ, ಎಕ್ಸ್ಪ್ರೆಸ್ ರೈಲುಗಳಿಗೆ ಲಿಂಕೆ ಹಾಫ್ ಮನ್ ಬುಷ್ (LHB) ಬೋಗಿಗಳನ್ನು ಅಳವಡಿಸಲು ರೈಲ್ವೆ ನಿರ್ಧರಿಸಿದೆ.
ಮೈಸೂರು, ಶಿವಮೊಗ್ಗ, ತಾಳಗುಪ್ಪ, ಚಾಮರಾಜಗರ ಮತ್ತು ತಿರುಪತಿ ಸೇರಿದಂತೆ ವಿವಿಧ ಮಾರ್ಗಗಳ ರೈಲುಗಳಿಗೆ ಈ ನೂತನ ಬೋಗಿಗಳನ್ನು ಅಳವಡಿಸಲಾಗುತ್ತದೆ. ಈ ಮೂಲಕ ರೈಲ್ವೆ ಜಾಲ, ವಿದ್ಯುದೀಕರಣ ಜೊತೆಗೆ ರೈಲುಗಳ ಮೂಲಸೌಕರ್ಯ ಸುಧಾರಣೆಗೂ ಇಲಾಖೆ ಮುಂದಾಗಿದೆ. ಅದರ ಭಾಗವಾಗಿ ಈ ಕೆಳಗಿನ ಪ್ರಮುಖ ರೈಲುಗಳು ಅತ್ಯಾಧುನಿಕ ಹೊಸ ಬೋಗಿಗಳೊಂದಿಗೆ ಸಂಚಾರ ಸೇವೆ ನೀಡಲಿದೆ.

ಎಷ್ಟು ರೈಲುಗಳಿಗೆ ಹೊಸ ಬೋಗಿಗಳ ಅಳವಡಿಕೆ?
* ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲುಗಳು (16227/16228): ಮೈಸೂರಿನಿಂದ 2026 ಅಕ್ಟೋಬರ್ 20 ರಿಂದ ಹಾಗೂ ತಾಳಗುಪ್ಪದಿಂದ ಅಕ್ಟೋಬರ್ 21 ರಿಂದ ಈ ರೈಲು ಎಲ್ಎಚ್ ಬಿ ಬೋಗಿಗಳೊಂದಿಗೆ ಸಂಚಾರ ಮಾಡಲಿದೆ.
* ತಾಳಗುಪ್ಪ-ಶಿವಮೊಗ್ಗ ಟೌನ್-ತಾಳಗುಪ್ಪ ರೈಲುಗಳು (56217/56218): ಎರಡೂ ನಿಲ್ದಾಣಗಳಿಂದ ಇದೇ ಅಕ್ಟೋಬರ್ 21 ಹೊಸ ಬೋಗಿಗಳೊಂದಿಗೆ ಸಂಚರಿಸಲಿದೆ. ಅಂದಿನಿಂದಲೇ ಹಳೇಯ ಐಸಿಎಫ್ ಬೋಗಿಗಳಿಗೆ ವಿದಾಯ ಹೇಳಲಾಗುತ್ತಿದೆ.
* ನಂಜನಗೂಡು ಟೌನ್-ಮೈಸೂರು-ನಂಜನಗೂಡು ಟೌನ್ ರೈಲುಗಳು (56205/56206): ಎರಡೂ ಕಡೆಗಳಿಂದ 2026 ಅಕ್ಟೋಬರ್ 22 ರಿಂದ ರೈಲುಗಳು ಎಲ್ಎಚ್ ಬಿ ಬೋಗಿಗಳೊಂದಿಗೆ ಕಾರ್ಯಾಚರಣೆ ನಡೆಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
* ಚಾಮರಾಜನಗರ-ಮೈಸೂರು-ಚಾಮರಾಜನಗರ ರೈಲುಗಳು (56203/56204): ಮೈಸೂರಿನಿಂದ 2026 ಅಕ್ಟೋಬರ್ 22 ರಿಂದ ಮತ್ತು ಚಾಮರಾಜನಗರದಿಂದ ಅಕ್ಟೋಬರ್ 24 ರಿಂದ ನೂತನ ಬೋಗಿಗಳೊಂದಿಗೆ ಸೇವೆ ಒದಗಿಸಲಿದೆ. ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ, ವಿನೂತನ ಅನುಭವ ಸಿಗಲಿದೆ.
* ಚಾಮರಾಜನಗರ-ತಿರುಪತಿ-ಚಾಮರಾಜನಗರ ರೈಲುಗಳು (16219/16220): ಚಾಮರಾಜನಗರದಿಂದ ಅಕ್ಟೋಬರ್ 22 ಮತ್ತು ತಿರುಪತಿಯಿಂದ ಅಕ್ಟೋಬರ್ 23 ರಿಂದ ಸಂಚರಿಸುವಾಗ ಹೊಸ ಎಲ್ಎಚ್ ಬಿ ಸಹಿತ ರೈಲುಗಳು ಕಾರ್ಯಾಚರಣೆ ಮಾಡಲಿವೆ.
* ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲುಗಳು ( 16203/16204): ಈ ರೈಲುಗಳು ಎರಡು ನಿಲ್ದಾಣಗಳಿಂದ ಇದೇ ಅಕ್ಟೋಬರ್ 23ರಿಂದ ಸಂಚರಿಸುವಾಗ ಹೊಸ ತಲಾ 19 ಬೋಗಿಗಳೊಂದಿಗೆ ಸಂಚರಿಸಲಿದೆ.
ಪ್ರಸ್ತುತ ಈ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿವೆ. ಅವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್-ಕಮ್-ಬ್ರೇಕ್ ವ್ಯಾನ್ ಸೇರಿದ್ದವು.
ಈಗ ಹೊಸ ವ್ಯವಸ್ಥೆಯಡಿ ಈ ರೈಲುಗಳು ಒಟ್ಟು 19 ಎಲ್ಎಚ್ ಬಿ ಬೋಗಿಗಳನ್ನು ಹೊಂದಿರಲಿವೆ. ಇದರಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್, 01 ದಿವ್ಯಾಂಗ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ 01 ಲಗೇಜ್ ಮತ್ತು ಬ್ರೇಕ್ ವ್ಯಾನ್-ಕಮ್-ಜನರೇಟರ್ ಕಾರ್ ಸೇರಿರಲಿವೆ.
ವಿಶೇಷ ಸೂಚನೆ: ರೈಲು ಸಂಖ್ಯೆ 56217/56218, 56205/56206, ಮತ್ತು 56203/56204ರ ಎಸಿ ಬೋಗಿಗಳನ್ನು ಲಾಕ್ ಮಾಡಲಾಗಿರುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
