Gay: "ಗೇ" ಕುರಿತು ಬರೆಯುವುದ್ಯಾಕೆ ಇದೇನು ರಾಷ್ಟ್ರೀಯ ಸಮಸ್ಯೆಯೇ ಎಂದ ಕುಂ. ವೀರಭದ್ರಪ್ಪ, ವಸುಧೇಂದ್ರ ಹೇಳಿದಿಷ್ಟು

LGBT: ಸಲಿಂಗಕಾಮಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಇದೀಗ "ಗೇ" ಕುರಿತು ಬರೆಯುವುದ್ಯಾಕೆ ಇದೇನು ರಾಷ್ಟ್ರೀಯ ಸಮಸ್ಯೆಯೇ ಎಂದು ಕನ್ನಡದ ಪ್ರಸಿದ್ಧ ಲೇಖಕ, ಕಾದಂಬರಿಕಾರ ಮತ್ತು ವಿಮರ್ಶಕ ಕುಂ. ವೀರಭದ್ರಪ್ಪ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬರಹಗಾರರು ಹಾಗೂ ಪ್ರಕಾಶಕರಾದ ವಸುಧೇಂದ್ರ ಅವರು ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ. ಈ ಬರಹವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಕುಂ. ವೀರಭದ್ರಪ್ಪ ಅವರು, ಒಳ್ಳೆಯ ಸೃಜನಶೀಲ ಲೇಖಕರಾದ ನಮ್ಮ ವಸುಧೇಂದ್ರ ಈ ಗೇ ಕುರಿತು ಬರೆಯುವುದ್ಯಾಕೆ!, ಇದೇನು ರಾಷ್ಟ್ರೀಯ ಸಮಸ್ಯೇನಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಸುಧೇಂದ್ರ ಅವರು, ಕ್ಷಮಿಸಿ ಸರ್ ನಿಮ್ಮಂತಹ ಹಿರಿಯರು, ಎಡಪಂಥೀಯ ಲೇಖಕರು ಇಂತಹ ಕ್ಷುಲ್ಲಕ ಪ್ರಶ್ನೆ ಕೇಳಿದ್ದಕ್ಕೆ ದುಃಖವಾಗುತ್ತಿದೆ. ಕ್ವೀರ್ ಸಮಸ್ಯೆ ಅಷ್ಟೇ ಅಲ್ಲ, ಅದು ಅಂತರರಾಷ್ಟ್ರೀಯ ಸಮಸ್ಯೆ. ಅಲ್ಪಸಂಖ್ಯಾತರ ಜೀವನ್ಮರಣದ ಸವಾಲಿನ ಪ್ರಶ್ನೆಯನ್ನು ಇಷ್ಟು ಲಘುವಾಗಿ ಪರಿಗಣಿಸಿದಿರಲ್ಲಾ! ಇಂತಹ ಮನೋಭಾವಕ್ಕೆ ನನ್ನ ಧಿಕ್ಕಾರವಿದೆ ಅಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂದುವರಿದು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹ ಹಂಚಿಕೊಂಡಿದ್ದಾರೆ.

LGBT

ಕನ್ನಡ ಸಾಹಿತ್ಯ ಲೋಕದಲ್ಲಿ ಕ್ವೀರ್ ಜಗತ್ತು

ಹಿರಿಯ ಲೇಖಕರಾದ ಕುಂವೀ ನಾನು ಅತೀವವಾಗಿ ಗೌರವಿಸುವವರಲ್ಲಿ ಒಬ್ಬರು. ಅವರ ಕತೆಗಳನ್ನು, ಆತ್ಮಕತೆಯನ್ನು ಇನ್ನಿಲ್ಲದ ಪ್ರೀತಿಯಿಂದ ಓದಿಕೊಂಡಿದ್ದೇನೆ. ಅವರು ನಮ್ಮ ಜಿಲ್ಲೆಯವರು ಎಂಬ ಗೌರವ ಒಂದಾದರೆ, ನಮ್ಮ ಜಿಲ್ಲೆಯ ಬದುಕು ಮತ್ತು ಭಾಷೆಯನ್ನು ಅತ್ಯಂತ ವಿಶೇಷವಾಗಿ, ವಿನೋದಾತ್ಮಕವಾಗಿ ಮತ್ತು ನಿಖರವಾಗಿ ಇಡೀ ಕನ್ನಡ ಲೋಕಕ್ಕೆ ಪರಿಚಯಿಸಿದ್ದಾರೆ ಎನ್ನುವುದು ಮತ್ತೊಂದು. ಅವರ 'ಅರಮನೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಬೆಂಗಳೂರಿನಲ್ಲಿ ಛಂದ ಪುಸ್ತಕದ ವತಿಯಿಂದ ಒಂದೊಳ್ಳೆಯ ಸಮಾರಂಭ ಏರ್ಪಡಿಸಿ, ಕಿ.ರಂ. ನಾಗರಾಜ್, ಓಎಲ್ಲೆನ್ ಮತ್ತು ವಿಕ್ರಮ ವಿಸಾಜಿ ಅವರ ಜೊತೆ ಮಾತಾಡಿಸಿ ಅವರನ್ನು ಗೌರವಿಸಿ ಸಂಭ್ರಮಿಸಿದ್ದೆ.

ಛಂದ ಪುಸ್ತಕ ಸ್ಪರ್ಧೆಯ ಆರಂಭದ ವರ್ಷಗಳಲ್ಲೇ ಅವರನ್ನು ನಿರ್ಣಾಯಕರಾಗಿ ಮಾಡಿ, ಹಸ್ತಪ್ರತಿ ಆಯ್ಕೆ ಮಾಡಿಸಿ ಮುನ್ನುಡಿ ಬರೆಸಿದ್ದೆ. ಆ ಜವಾಬ್ದಾರಿಯನ್ನವರು ಅತ್ಯಂತ ಪ್ರೀತಿಯಿಂದ ಮಾಡಿಕೊಟ್ಟಿದ್ದಾರೆ. ಅಷ್ಟೇ ಏಕೆ, ಛಂದ ಪುಸ್ತಕ ಪ್ರಕಾಶನ ಸಂಸ್ಥೆಯ ಉದ್ಘಾಟನೆಯನ್ನೂ ಅವರೇ ಮಾಡಿಕೊಟ್ಟಿದ್ದು. ಅವರಿಗೆ ಯಾವತ್ತೂ ನಾನು ಋಣಿ.

ಆದರೆ ನಿನ್ನೆ ಅವರು ನನ್ನ ಗೇ ಸಂಬಂಧಿತ ಲೇಖನಗಳ ಮಾಲೆಗೆ ಹಾಕಿದ ಕಾಮೆಂಟ್ ಒಂದು ನನ್ನನ್ನು ಕಂಗೆಡಿಸಿತು. 'ಸೃಜನಶೀಲ ಲೇಖಕನಾದ ವಸುಧೇಂದ್ರ ಇಂತಹ ಕ್ಷುಲ್ಲಕ ಸಂಗತಿಗಳ ಬಗ್ಗೆ ಏಕೆ ಬರೆಯುತ್ತಿದ್ದಾರೆ. ಇದೇನು ರಾಷ್ಟ್ರೀಯ ಸಮಸ್ಯೆಯೆ?' ಎಂಬ ಅವರ ಅಂತರಾಳದ ಧ್ವನಿ ನಿಜಕ್ಕೂ ಭಯ ಹುಟ್ಟಿಸಿತು. ನಂಬಿದ ದೇವರೇ ಮೋಸ ಮಾಡಿದಂತಹ ಭಾವದಿಂದ ತಲ್ಲಣಿಸಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಕ್ವೀರ್ ಜಗತ್ತು ಕುರಿತ ಅರಿವಿನ ಕೊರತೆಯಿದೆ ಎಂಬುದು ನನಗೆ ಗೊತ್ತಿತ್ತು. ಆದರೆ ಅದು ಈ ಮಟ್ಟದಲ್ಲಿದೆ ಎಂದು ತಿಳಿದಿರಲಿಲ್ಲ. ನಾನು ಮತ್ತೆ ಮತ್ತೆ ಈ ವಿಷಯದ ಕುರಿತು ಮಾತಾಡುವುದು ತಪ್ಪಲ್ಲ ಎಂದು ತಕ್ಷಣ ಅರ್ಥವಾಯ್ತು. ಇಡೀ ರಾಷ್ಟ್ರವೊಂದೇ ಅಲ್ಲ, ಇಡೀ ಜಗತ್ತೇ ಕ್ವೀರ್ ಬದುಕಿನ ಸವಾಲುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಕೇವಲ ಲೈಂಗಿಕ ಆಯ್ಕೆಗಳು ಬೇರೆ ಎನ್ನುವ ಕಾರಣಕ್ಕಾಗಿ ಒಂದು ಅಲ್ಪಸಂಖ್ಯಾತ ಸಮುದಾಯ ಎಷ್ಟೆಲ್ಲಾ ಸಮಸ್ಯೆಗಳನ್ನು, ಜೀವನ್ಮರಣದ ಪ್ರಶ್ನೆಗಳನ್ನೂ ಎದುರಿಸುತ್ತದೆ ಎಂಬುದನ್ನು ಎಲ್ಲಾ ವಿದ್ಯಾವಂತರು, ಒಳಿತನ್ನು ಬಯಸುವವರು ಚಿಂತಿಸುತ್ತಿದ್ದಾರೆ. ಅದಕ್ಕೆ ಪರಿಹಾರಗಳನ್ನು ಹುಡುಕುತ್ತಿದ್ದಾರೆ, ಕಾನೂನುಗಳನ್ನು ಸರಳಗೊಳಿಸುತ್ತಿದ್ದಾರೆ, ಸಮಾಜವನ್ನು ತಿದ್ದುತ್ತಿದ್ದಾರೆ. ಆದರೆ ಕುಂವೀ ಯಾವತ್ತಿನಂತೆ ಸಜ್ಜನರು.

ನಾನು ಮತ್ತು ಕೆಲವು ಗೆಳೆಯರು ಈ ವಿಷಯವಾಗಿ ಮಾಹಿತಿಯನ್ನು ನೀಡಿದ ತಕ್ಷಣ ತಮ್ಮ ಕಾಮೆಂಟ್‌ ಅನ್ನು ಡಿಲೀಟ್ ಮಾಡಿ, ಅದನ್ನು ಉಪಸಂಹಾರ ಮಾಡಿಕೊಂಡರು. ಅದರ ಕುರಿತು ಹೆಚ್ಚಿನ ಅಧ್ಯಯನ ಮಾಡುವುದಾಗಿ ಹೇಳಿದರು. ಅದು ಅವರ ಹಿರಿಯತನ. ಅಂತಹ ಉತ್ತಮ ಗುಣವಿಲ್ಲದೆ ಕುಂವೀ ಅವರು ಈ ಎತ್ತರಕ್ಕೆ ಸಾಹಿತ್ಯ ಲೋಕದಲ್ಲಿ ಬೆಳೆಯುತ್ತಿರಲಿಲ್ಲ. ಈ ಸನ್ನಿವೇಶದಿಂದ ಅವರ ಮೇಲಿನ ನನ್ನ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ಬಿನ್ನಹಕೆ ಕರಗುವ ಹಿರಿಯರ ಬಗ್ಗೆ ಯಾವತ್ತೂ ನನಗೆ ಪ್ರೀತಿ-ಗೌರವಗಳು ಹೆಚ್ಚುತ್ತವೆ.

ಆದರೂ ಅವರ ಕಾಮೆಂಟ್ ಮತ್ತು ಅದಕ್ಕೆ ನಾನು ನೀಡಿದ ಉತ್ತರದ ಸ್ಕ್ರೀನ್‌ಶಾಟ್‌ ಅನ್ನು ಇಲ್ಲಿ ನೀಡುತ್ತಿರುವೆ. ನಮ್ಮ ಸಾಹಿತ್ಯ ಲೋಕದಲ್ಲಿ ಇಂತಹದೇ ಅಭಿಪ್ರಾಯ ಇರುವ ಹಲವಾರು ಹಿರಿಯರು ಇದ್ದಾರೆ. ಅವರೆಲ್ಲಾ ಈ ನಿದರ್ಶನದಿಂದ ಕ್ವೀರ್ ಸಮಸ್ಯೆಗಳ ಪ್ರಾಮುಖ್ಯತೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಉದ್ದೇಶ.

ನಾವು ಎಡಪಂಥೀಯರು, ಪ್ರಗತಿಪರರು, ಬಂಡಾಯದವರು ಎಂದೆಲ್ಲಾ ಹೇಳಿಕೊಳ್ಳುವಾಗ ನಮ್ಮ ನಡೆ-ನುಡಿಗಳು ಅದರ ಆದರ್ಶಕ್ಕೆ ತಕ್ಕುದಾಗಿ ಇರಬೇಕು. ನುಡಿದಂತೆ ನಡೆಯುವ ಜನರು ಸಾಹಿತ್ಯ ಲೋಕದಲ್ಲಿ ಬೆರಳೆಣಿಕೆಯಷ್ಟೂ ಕಾಣುವುದಿಲ್ಲ ಎನ್ನುವುದು ಅಂಗೈ ಹುಣ್ಣಿನಂತೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಹಿಂದೊಮ್ಮೆ ನಮ್ಮ ಹಿರಿಯ ಸಾಹಿತಿಗಳೊಬ್ಬರು ಬಾಬರಿ ಮಸೀದಿಯ ಧ್ವಂಸದ ಉದ್ದೇಶದ ಪತ್ರಕ್ಕೆ ಸಹಿ ಹಾಕಿದ್ದು ಅವರು ತೀರಿಕೊಂಡ ನಂತರವೂ ಅವರಿಗೆ ಕಳಂಕವಾಗಿಯೇ ಮುಂದುವರೆಯುತ್ತಿದೆ. ಈಗಿನ ಕ್ವೀರ್ ಜಗತ್ತಿನ ಬಗ್ಗೆ ಈ ತರಹದ ಮನೋಭಾವವೂ ಅಂತಹದೇ ದೊಡ್ಡ ಪ್ರಮಾದವಾಗಿ ಮುಂದಿನ ತಲೆಮಾರು ಕಾಣುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಅದು ಹಾಗಾಗಬಾರದು ಎನ್ನುವುದೇ ಈ ಪೋಸ್ಟಿನ ಉದ್ದೇಶ ಎಂದು ವಸುಧೇಂದ್ರ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+