ಚೆಲುವರಾಯಸ್ವಾಮಿ ವಿರುದ್ಧ ತನಿಖೆಗೆ KPCC ನಿಯೋಗದ ಆಗ್ರಹ! ಗೃಹ ಸಚಿವರಿಗೆ ನೀಡಿದ ಪತ್ರದಲ್ಲಿ ಏನಿದೆ?
ಬೆಂಗಳೂರು, ಆಗಸ್ಟ್ 08: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಸರ್ಕಾರ ಹಾಗೂ ಸಚಿವರ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನು ತನಿಖೆಗೆ ಕೆಪಿಸಿಸಿ ನಿಯೋಗದ ಆಗ್ರಹ ಮಾಡಿದೆ.
ಈ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ರನ್ನ ವಿಧಾನಸೌಧದಲ್ಲಿ ಕೆಪಿಸಿಸಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರ ವಿರುದ್ಧ ಲಂಚದ ಸುಳ್ಳು ಆರೋಪ ಮಾಡಿ ಅವರ ಹಾಗೂ ಕಾಂಗ್ರೆಸ್ ಪಕ್ಷದ ತೇಜೋವಧೆಗೆ ಕೆಲವರು ಪ್ರಯತ್ನ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷರು, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಶಾಸಕರಾದ ದಿನೇಶ್ ಗೂಳಿಗೌಡ ಅವರು ಗೃಹ ಸಚಿವರಾದ ಡಾ. ಜಿ. ಪರಮೇಶವರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ಏನಿದೆ?
ಕೃಷಿ ಇಲಾಖೆ ಸಚಿವ ಸ್ಥಾನ ಅಂದರೆ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಈ ಇಲಾಖೆಯ ಜವಾಬ್ದಾರಿಯನ್ನು ಮಾನ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
ನಮ್ಮ ಜಿಲ್ಲೆಯವರಾದ ಅವರು ರೈತಪರವಾಗಿ ಅವಿರತವಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಅಲ್ಲದೆ ಯಾವುದೇ ರಾಗ ದ್ವೇಷ ಇಲ್ಲದೆ ಪ್ರಾಮಾಣಿಕವಾಗಿ ಅವರು ಇಲಾಖೆಯ ಹೊಣೆಯನ್ನು ಬಹಳ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಇದು ರೈತರಿಗೆ ನೇರವಾಗಿ ಸಂಬಂಧಪಟ್ಟ ಇಲಾಖೆಯಾಗಿದೆ. ರೈತರೆಂದರೆ ನನ್ನ ಕುಟುಂಬ ಎಂದು ಅವರು ಆಗಾಗ ಹೇಳಿಕೊಳ್ಳುತ್ತಾ ಬಂದಿದ್ದಾರೆ. ಅಲ್ಲದೆ ನಮ್ಮ ಕಾಂಗ್ರೆಸ್ ಸರ್ಕಾರ ಸಹ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಮುಂದೆಯೂ ಸಹ ಇಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುವ ಕನಸನ್ನು ಸಚಿವರು ಹೊಂದಿದ್ದಾರೆ, ಆದರೆ ಅವರ ಜನಪ್ರಿಯತೆ, ಏಳಿಗೆಯನ್ನು ಸಹಿಸದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಪಿತೂರಿ ಕೆಲಸವನ್ನು ಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಲೆಂದ ಮಾಡಿರುವುದಾಗಿ ಗೊತ್ತಾಗಿದೆ.
ಅಲ್ಲದ ಯಾವೊಬ್ಬ ಕೃಷಿ ಅಧಿಕಾರಿಯು ಸಹ ಅವರ ವಿರುದ್ಧ ಈ ರೀತಿಯ ಪತ್ರ ಬರೆದಿಲ್ಲವೆಂದು ಸ್ಪಷ್ಟಪಡಿಸಿರುತ್ತಾರೆ. ಸಹಿ ಸಹ ತಾವು ಮಾಡಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿರುತ್ತಾರೆ. ಇಲ್ಲಿ ಸಚಿವರ ಮೇಲೆ ವೃಥಾ ಲಂಚದ ಆರೋಪ ಮಾಡಿ ಆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿ ಅವರ ನಕಲಿ ಸಹಿಯನ್ನು ಮಾಡಿ ರಾಜ್ಯಪಾಲರಿಗೆ ದೂರು ಕೊಟ್ಟಿರುತ್ತಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲವೇ ಇವರ ವಿರುದ್ಧ ಇಂತಹ ಹತ್ತಾರು ಷಡ್ಯಂತ್ರಗಳು ನಡೆಯುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿದೆ.
ಈ ಪತ್ರವನ್ನು ರಾಜ್ಯಪಾಲರಿಗೆ ಮಾತ್ರವಲ್ಲದೆ ಇನ್ನಿತರ ಸಾಂವಿಧಾನಿಕ ಸಂಸ್ಥೆಗಳಿಗೆ ಸಲ್ಲಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಸಚಿವ ಚಲುವರಾಯಸ್ವಾಮಿ, ಅವರ ತೇಜೋವಧೆಗೆ ಯತ್ನಿಸಲಾಗಿದೆ. ಅಲ್ಲದೆ ಕಳಂಕ ತರುವ ಪ್ರಯತ್ನವನ್ನು ಮಾಡಲಾಗಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗಿ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ.
ಈ ಪತ್ರದ ಮೂಲಕ ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೋರಿದ್ದು, ಇಂತಹ ನಕಲಿ ಪತ್ರಗಳನ್ನು ಬರೆಯುವ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತಿದ್ದೇವೆ. ಮುಂದೆ ಎಂದೂ ಸಹ ಇಂತಹ ಕೆಲಸಗಳಿಗೆ ಯಾರು ಸಹ ಕೈ ಹಾಕಬಾರದು. ಆ ನಿಟ್ಟಿನಲ್ಲಿ ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.












Click it and Unblock the Notifications