ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಸದ್ದು; ಮಹಿಳೆಯರ ರಕ್ಷಣೆಗೆ ಮುಂದಾಗ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು, ಸೆಪ್ಟೆಂಬರ್ 16: : ಕೆಲವು ವರ್ಷಗಳ ಹಿಂದೆ ಬಾರೀ ಸುದ್ದಿ ಆಗಿದ್ದ ಮೀಟೂ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಹಲವು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದು, ಇದೀಗ ಕನ್ನಡ ಚಿತ್ರರಂಗದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದ್ದು, ಇದಕ್ಕೊಂದು ಸಮಿತಿ ರಚನೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಚಿತ್ರರಂಗದ ಕಲಾವಿದೆಯರ ಜೊತೆ ಮಹಿಳಾ ಆಯೋಗ ಸಭೆ ಆಯೋಜಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಖಂಡಿತಾ ಸಮಿತಿ ರಚನೆ ಆಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಅಂತ ಹೇಳುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ ಎಂದು ಸಚಿವರು ಹೇಳಿದರು.

ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ. ನಾನು ಈಗಾಗಲೆ ಹಲವು ಬಾರಿ ಗೃಹಲಕ್ಷ್ಮಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರ. ಕಳೆರಡು ತಿಂಗಳಿಂದ ಬರದಿರುವ ಹಣ ಒಂದೇ ಬಾರಿ ಅಕೌಂಟ್‌ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂರು ತಿಂಗಳ ಹಿಂದಷ್ಟೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಕೂಡ ಅಷ್ಟು ಬಾಕಿ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಅಂಗನವಾಡಿಗಳಲ್ಲಿ ಮುಂದಿನ ತಿಂಗಳಿಂದ ಗಟ್ಟಿಬೆಲ್ಲ ವಿತರಣೆ
ಪಾಲಕರು ನಿರಾಕರಿಸಿದ ಕಾರಣ ಆರ್ಗ್ಯಾನಿಕ್ ಬೆಲ್ಲದ ಬದಲಿಗೆ ಗಟ್ಟಿ ಬೆಲ್ಲವನ್ನೇ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಸಚಿವರು ಹೇಳಿದರು. ಒಂದೂವರೆ ವರ್ಷದ ಹಿಂದಿನಿಂದಲೇ ಅಂಗನವಾಡಿ ಕೇಂದ್ರಗಳಲ್ಲಿ ಆರ್ಗ್ಯಾನಿಕ್ ಬೆಲ್ಲ ನೀಡಲಾಗುತ್ತಿತ್ತು. ಆದರೆ, ಪಾಲಕರು ವಿರೋಧಿಸಿದ ಕಾರಣ, ಅಕ್ಟೋಬರ್ 1 ರಿಂದಲೇ ಗಟ್ಟಿ ಬೆಲ್ಲ ನೀಡುವುದಾಗಿ ಹೇಳಿದರು.
ಕರ್ನಾಟಕದಲ್ಲಿರುವ 139 ಎಂಎಸ್‌ಪಿಟಿಸಿಗಳನ್ನು ಉನ್ನತೀಕರಿಸಲು ಹೊರಟ್ಟಿದ್ದೇವೆ. ಉತ್ತಮ ಲ್ಯಾಬ್ ಸೌಲಭ್ಯಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸುಪ್ರೀಕೋರ್ಟ್ ನಿರ್ದೇಶನದ ಮೇರೆಗೆ ಚೆನ್ನೈ ಮೂಲದ ಸಂಸ್ಥೆಯಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆಯಾಗುತ್ತಿದೆ. 15 ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಇನ್ಮುಂದೆ ಜಿಲ್ಲಾ ಮಟ್ಟದಲ್ಲೇ ಪೌಡರ್ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ 200 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಹೇಳಿದರು.
ಚಲುವರಾಜು ಕುಟುಂಬದೊಂದಿಗೆ ಸರ್ಕಾರವಿದೆ
ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು. ಕಳೆದ ಎರಡು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಸರ್ಕಾರ ಗಮನಿಸುತ್ತಿದೆ. ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡ್ವೇಕು ಅಂತಾ ಬಂದಿರುವೆ. ಆಡಿಯೋ ಕೇಳಿಸಿಕೊಡಿಲ್ಲ, ಅಸಹ್ಯವಾಗಿ ಇದೆ ಅಂತ ಕೇಳಿದವರು ಹೇಳುತ್ತಾರೆ. ಗುತ್ತಿಗೆದಾರ ಚಲುವರಾಜು ಜೊತೆ ಸರ್ಕಾರ ಇರುತ್ತದೆ. ಅವರ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗುತ್ತಿಗೆದಾರನ ಮೇಳೆ ಮಾಜಿ ಮಂತ್ರಿಗಳು ಜಾತಿ ನಿಂದನೆ ಮಾಡುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮುನಿರತ್ನ ಅವರ ಮಾತುಗಳಿಂದ ಚಲುವರಾಜು ಕುಟುಂಬ ಖಿನ್ನತೆಗೆ ಒಳಪಟ್ಟಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಧೈರ್ಯ ಹೇಳುವುದಕ್ಕೆ ಅವರ ಮನೆಗೆ ಭೇಟಿ ನೀಡಿರುವೆ ಎಂದು ಸಚಿವರು ಹೇಳಿದರು.
ಎಫ್‌ಎಪ್‌ಎಲ್ ವರದಿ ಬರುವುದಕ್ಕಿಂತ ಮುಂಚೆಯೇ ಮುನಿರತ್ನ ಅವರನ್ನು ಬಂಧಿಸಿರುವ ಬಗ್ಗೆ ಆಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣದ ನಿಜಾಂಶ ಅವರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿರುವ ಕಾರಣ ಅವರು ಸರ್ಕಾರವನ್ನು ದೂರುವುದು, ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯ ಎಂದು ಸಚಿವರು ಹೇಳಿದರು.












Click it and Unblock the Notifications