ಸುವರ್ಣ ವಿಧಾನಸೌಧ ಒಳಹೊಕ್ಕುವ ಮುನ್ನ ಓದಿ

ಬೆಳಗಾವಿ, ನ.24 : ಇಲ್ಲಿನ ಸುವರ್ಣವಿಧಾನಸೌಧದಲ್ಲಿ ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಎರಡನೇ ಅಧಿವೇಶನ ಒಂದೆಡೆಯಾದರೆ ಬೆಳಗಾವಿಯಲ್ಲಿ ಸುವರ್ಣಸೌಧ ಉದ್ಘಾಟನೆಗೊಂಡ ಬಳಿಕ ನಡೆಯುವ ಎರಡನೇ ಅಧಿವೇಶನ ಇದಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸಹಜವಾಗಿ ಉತ್ತರ ಕರ್ನಾಟಕ ಜನತೆಯಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ.

ಈ ನಡುವೆ ಕಬ್ಬಿಗೆ ಬೆಂಬಲ ಬೆಲೆ ಸಿಗದ ಕಾರಣ ಸುವರ್ಣ ಸೌಧ ಮುತ್ತಿಗೆ ಹಾಕಲು ರೈತರು ಸಜ್ಜುಗೊಳ್ಳುತ್ತಿದ್ದಾರೆ. ನಾಳೆ ಬೆಳಗಾವಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಇನ್ನು ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ, ಅನ್ನಭಾಗ್ಯ, ಅಹಿಂದ ಮಕ್ಕಳಿಗೆ ಕರ್ನಾಟಕ ಪ್ರವಾಸ, ಕಬ್ಬು, ತೆಂಗು, ಭತ್ತ, ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಸಜ್ಜಾಗಿದೆ. ಮೂಢನಂಬಿಕೆ ಪ್ರತಿಬಂಧಕ ವಿಧೇಯಕ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ, ಹಿಂದುಳಿದ ವರ್ಗಗಳ ಮಕ್ಕಳಿಗೆ ಕರ್ನಾಟಕ ಪ್ರವಾಸದ ಯೋಜನೆಗಳು ಪ್ರತಿಪಕ್ಷಗಳಿಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಉತ್ತರ ಕರ್ನಾಟಕದ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಆಶಯದಿಂದ ಸರ್ಕಾರ ವರ್ಷಕ್ಕೆ ಒಂದು ಬಾರಿ ಅಧಿವೇಶನ ನಡೆಸುತ್ತಾ ಬಂದಿದೆ. 10ಕ್ಕೂ ಹೆಚ್ಚು ಮಸೂದೆಗಳ ಮಂಡನೆ, 2000ಕ್ಕೂ ಪ್ರಶ್ನೆಗಳ ಸುರಿಮಳೆ, ಪ್ರತಿ ವಿಪಕ್ಷ ನಾಯಕರ ಕೆಸೆರೆರಚಾಟ, ಕೆಜೆಪಿಯ ಮುಂದುವರೆದ ಪ್ರತಿಭಟನೆ, ಜೋಳದ ರೊಟ್ಟಿ, ಕುಂದಾ ಸವಿಯೂಟದ ನಡುವೆ ಅಧಿವೇಶನ ಯಶಸ್ವಿಯಾಗಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಬೆಳಗಾವಿ ಬೆಳಗಾವಿ ಚಳಿಗಾಲದ ಅಧಿವೇಶನ ಮುನ್ನೋಟ ಇಲ್ಲಿದೆ ಓದಿ...[ವಿಧಾನಸೌಧದ ಸುತ್ತ ಸುತ್ತಾಡಿ ಬನ್ನಿ]

10 ಮಸೂದೆ ಮಂಡನೆ?

10 ಮಸೂದೆ ಮಂಡನೆ?

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿಯ ರೆವಿನ್ಯೂ ಮತ್ತು ಖಾಸಗಿ ನಿವೇಶನ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಭೂ ಕಂದಾಯ ಕಾಯಿದೆ 2012(ಅಕ್ರಮ ಸಕ್ರಮ) ರ 94 (ಸಿ) (ಸಿ) ಎರಡನೇ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದಾರೆ. ಈ ಮಸೂದೆಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರ್ಯಾಲೋಚನೆಗೆ ಮರು ಮಂಡಿಸಲಾಗುವುದು.

ಮೂಡನಂಬಿಕೆ ನಿಷೇಧ ಕರಡು ವಿಧೇಯಕ, ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕ-2013, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2013 ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ತಿದ್ದುಪಡಿ ವಿಧೇಯಕ-2013 ಸೇರಿದಂತೆ 10 ಮಸೂದೆ ಮಂಡನೆ ಸಾಧ್ಯತೆಯಿದೆ.

ಮೊದಲ ದಿನದ ಕಲಾಪ !

ಮೊದಲ ದಿನದ ಕಲಾಪ !

ಮೊದಲನೆ ದಿನವಾದ ನವೆಂಬರ್ 25 ರಂದು ವಂದೇ ಮಾತರಂ ಗೀತೆಯೊಂದಿಗೆ ಕಲಾಪ ಪ್ರಾರಂಭವಾಗಲಿದೆ.

ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಕುವರ, ರಸಾಯನಿಕ ಶಾಸ್ತ್ರಜ್ಞ, ಮತ್ತು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹೆಗಾರ ಪ್ರೊ ಸಿ. ಎನ್. ಆರ್. ರಾವ್ ಹಾಗೂ ಖ್ಯಾತ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರ ಗೌರವಾರ್ಥ ಅಭಿನಂದನಾ ನಿರ್ಣಯಗಳನ್ನು ಮಂಡಿಸಲಾಗುವುದು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಈ ಅಧಿವೇಶನದ ಅವಧಿಯಲ್ಲಿ ನಿಧನ ಹೊಂದಿರುವ ಎಚ್.ಶಿವಪ್ಪ,ಕೆ.ವೆಂಕಟಪ್ಪ,ಮಹಾದೇವಪ್ಪ ಶಿವಪ್ಪ ಕಟಗಿ, ಡಾ ಬಿ. ಪುಟ್ಟಕಾಯಯ್ಯ, ಆರ್. ಕೆ. ರಾಠೋಡ್,ಹೆಸರಾಂತ ಹಿನ್ನೆಲೆ ಗಾಯಕ ಡಾ ಮನ್ನಾಡೆ, ಬಹುಭಾಷಾ ಚಲನಚಿತ್ರ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಕಲಾಪವನ್ನು ಮುಂದುವರೆಸಲಾಗುವುದು.

ಸುವರ್ಣ ಸೌಧಲ್ಲಿ ಸುವರ್ಣ ಕ್ಷಣ !

ಸುವರ್ಣ ಸೌಧಲ್ಲಿ ಸುವರ್ಣ ಕ್ಷಣ !

ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಎರಡನೇ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ತಾವು ಸಭಾಧ್ಯಕ್ಷರಾಗಿ ಕಲಾಪ ನಡೆಸುವ ಸೌಭಾಗ್ಯ ತಮಗೆ ದೊರೆತಿರುವುದು.ತಮ್ಮ ಜೀವಮಾನದ ಅಪೂರ್ಣ ಸುವರ್ಣ ಕ್ಷಣಗಳು ಎಂದು ಭಾವಿಸುವುದಾಗಿ ಸಭಾಧ್ಯಕ್ಷರು ಭಾನುವಾರ ಬೆಳಗಾವಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು. ಈ ಬಾರಿಯ ವಿಧಾನ ಸಭಾ ಕಲಾಪವು ಯಶಸ್ವಿಯಾಗಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಸರ್ಕಾರ ಮೇ 13 ರಂದು ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಲಾಪನ್ನು ಪ್ರಸಕ್ತ ಸಾಲಿನಲ್ಲಿ ನಿಯಮಾವಳಿಯಂತೆ 60 ದಿನಗಳ ಅವಧಿ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂಬರುವ ವರ್ಷಗಳಲ್ಲಿ ರಾಜ್ಯ ವಿಧಾನ ಸಭೆಯ ಅಧಿವೇಶನವನ್ನು ಕನಿಷ್ಠ 100 ದಿನಗಳ ಕಾಲ ನಡೆಸಲಾಗುವುದು ಎಂದು ಸಭಾಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.

ಸುವರ್ಣ ಸೌಧ ಸುರಕ್ಷಿತವಾಗಿದೆ

ಸುವರ್ಣ ಸೌಧ ಸುರಕ್ಷಿತವಾಗಿದೆ

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಯಾವುದೇ ಉಗ್ರರ ಬೆದರಿಕೆ ಇಲ್ಲ ! ಸುವರ್ಣ ಸೌಧ ಸುರಕ್ಷಿತವಾಗಿದೆ. ಕೆಲವು ತಪ್ಪು ಗ್ರಹಿಕೆಯ ಸಂದೇಶಗಳು ಬಿತ್ತರವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಕಾಗೋಡು ತಿಮ್ಮಪ್ಪ ಅವರು ವಿವರಿಸಿದರು.

ಸುವರ್ಣ ಸೌಧದಲ್ಲಿ ತುರ್ತು ಅಪಘಾತ ಸೇವೆ ಅಥವಾ ಉಗ್ರರ ದಾಳಿ ತಡೆಗಟ್ಟಲು ಬೇಕಾದ ವ್ಯವಸ್ಥೆ ಇಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸಿಸಿಟಿವಿ ಕೆಮೆರಾ ಕಾರ್ಯನಿರ್ವಹಿಸುತ್ತಿಲ್ಲ,ಆಂತರಿಕ ಭದ್ರತಾ ಲೋಪಗಳಿವೆ ಎಂಬ ವರದಿಯನ್ನು ಕಾಗೋಡು ತಿಮ್ಮಪ್ಪ ಅಲ್ಲಗೆಳೆದರು.

ಸುವರ್ಣ ಸೌಧದಲ್ಲಿ ಶಾಸಕರ ಭವನ !

ಸುವರ್ಣ ಸೌಧದಲ್ಲಿ ಶಾಸಕರ ಭವನ !

ಸುವರ್ಣ ಸೌಧ ಪ್ರಾಂಗಣದಲ್ಲಿ ಶಾಸಕರ ಭವನ ನಿರ್ಮಾಣ ಕುರಿತಂತೆ ರಾಜ್ಯ ವಿಧಾನ ಮಂಡಲದ ಉನ್ನತಾಧಿಕಾರ ಮಂಡಳಿ ಸಭೆ ಸೇರಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದರು. ಪ್ರಸ್ತುತ ಸನ್ನಿವೇಶದಲ್ಲಿ ವಸತಿ ಕೊರತೆಯಿಂದಾಗಿ ಕಲಾಪವನ್ನು ಸುದೀರ್ಘವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಶಾಸಕರ ಭವನ ನಿರ್ಮಾಣದ ನಂತರ ವರ್ಷಕ್ಕೆ ಎರಡು ಬಾರಿ ಅಧಿವೇಶನ ನಡೆಸಲು ಚಿಂತನೆ ನಡೆಸಲಾಗುವುದು ಎಂದರು.

ಪ್ರಶ್ನೆಗಳ ಸುರಿಮಳೆ !

ಪ್ರಶ್ನೆಗಳ ಸುರಿಮಳೆ !

ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನ ಸಭೆಯ ಹತ್ತು ದಿನಗಳ ಕಾರ್ಯ ಕಲಾಪಕ್ಕೆ 2118 ಪ್ರಶ್ನೆಗಳು ಸ್ವೀಕೃತವಾಗಿವೆ. ಅವುಗಳಲ್ಲಿ 2036 ಪ್ರಶ್ನೆಗಳು ಅಂಗೀಕೃತವಾಗಿವೆ. ಇವುಗಳ ಪೈಕಿ 90 ಚುಕ್ಕೆ ಗುರುತಿನ ಪ್ರಶ್ನೆಗಳು, 1010 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ಇವುಗಳ ಜೊತೆಗೆ 35 ಗಮನ ಸೆಳೆಯುವ ಸೂಚನೆಗಳನ್ನು ಹಾಗೂ ನಿಯಮ 351 ಅಡಿಯಲ್ಲಿ 36 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂಬ ಅಂಶವನ್ನು ತಿಮ್ಮಪ್ಪ ಬಹಿರಂಗಪಡಿಸಿದರು.

ಶಾಸಕರ ವಿವೇಚನೆಯ ವಿಶೇಷ ಸಂದರ್ಭದ ಅಡಿಯಲ್ಲಿ ಐದು ಖಾಸಗಿ ನಿರ್ಣಯಗಳನ್ನು ಮಂಡಿಸಲು ಸದಸ್ಯರು ಸೂಚನೆಗಳನ್ನು ನೀಡಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಪ್ರಕಟಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+