ಪರಿಷತ್; ದಕ್ಷಿಣ ಶಿಕ್ಷಕರ ಕ್ಷೇತ್ರ, ಬಿಜೆಪಿ-ಜೆಡಿಎಸ್ ಅನಿಶ್ಚಿತತೆ
ಬೆಂಗಳೂರು, ಮೇ 16: ಕರ್ನಾಟಕದ ರಾಜಕೀಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಮುಂದುವರೆದಿದೆ. 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ.
ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ ಮತ್ತು ಆಗ್ನೇಯ ಶಿಕ್ಷಕ, ನೈಋತ್ಯ ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಸೇರಿ ಒಟ್ಟು 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಅನಿಶ್ಚಿತತೆ ಮುಂದುವರೆದಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿಯ ಡಾ. ಇ. ಸಿ. ನಿಂಗರಾಜೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ವಿವೇಕಾನಂದ ಅಭ್ಯರ್ಥಿ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಗುರುವಾರ ಕೊನೆಯ ದಿನ, ನಾಮಪತ್ರ ವಾಪಸ್ ಪಡೆಯಲು 20 ಮೇ ಕೊನೆಯ ದಿನವಾಗಿದೆ.
ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಸ್: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಎರಡು ಕ್ಷೇತ್ರ ಜೆಡಿಎಸ್‌ಗೆ, 4 ಕ್ಷೇತ್ರ ಬಿಜೆಪಿಗೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ನೈಋತ್ಯ ಶಿಕ್ಷಕ ಕ್ಷೇತ್ರವನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆದ್ದರಿಂದ ಈಗ ದಕ್ಷಿಣ ಶಿಕ್ಷಕರ ಕ್ಷೇತ್ರ ಬಿಜೆಪಿಗೋ?, ಜೆಡಿಎಸ್‌ಗೋ? ಎಂಬುದು ಪ್ರಶ್ನೆಯಾಗಿದೆ.
ಕಾಂಗ್ರೆಸ್ ದಕ್ಷಿಣ ಶಿಕ್ಷಕ ಕ್ಷೇತ್ರದಲ್ಲಿ ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಇವರನ್ನು ಎದುರಿಸಲು ಮೈತ್ರಿಕೂಟದ ಒಮ್ಮತದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.
ದಕ್ಷಿಣ ಶಿಕ್ಷಕರ ಕ್ಷೇತ್ರ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಭಾಗದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಿದೆ. ಜೆಡಿಎಸ್ ಅಭ್ಯರ್ಥಿಯಾದ ವಿವೇಕಾನಂದ ತೀವ್ರ ಪೈಪೋಟಿ ನೀಡಲಿದ್ದಾರೆ ಎಂಬುದು ಲೆಕ್ಕಾಚಾರವಾಗಿದೆ.
ಜಿ. ಟಿ. ದೇವೇಗೌಡ, ಸಾ. ರಾ. ಮಹೇಶ್, ಕೆ. ಟಿ. ಶ್ರೀಕಂಠೇಗೌಡ ಹೀಗೆ ಜೆಡಿಎಸ್‌ನ ಸಾಲು ಸಾಲು ನಾಯಕರು ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಗೆ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕ್ಕಿಳಿದಿರುವುದು ಪರಿಷತ್‌ನಲ್ಲಿಯೂ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೆ ಮರಿತಿಬ್ಬೇಗೌಡರನ್ನು ಕಣಕ್ಕಿಳಿಸಿ ಜೆಡಿಎಸ್ ಗೆದ್ದಿತ್ತು. ಈಗ ಅವರು ಕಾಂಗ್ರೆಸ್ ಅಭ್ಯರ್ಥಿ, ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 18 ಸಾವಿರ ಮತಗಳಿವೆ. ಆದ್ದರಿಂದ ಜೆಡಿಎಸ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ.
ಡಾ. ಇ. ಸಿ. ನಿಂಗರಾಜೇಗೌಡ ಬಿ-ಫಾರಂ ಇಲ್ಲದೇ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣ ಶಿಕ್ಷಕ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರು ಒಪ್ಪಿಗೆ ನೀಡಿದ್ದರು. ಆದರೆ ದಕ್ಷಿಣ ನಿಂಗರಾಜೇಗೌಡ ಬಿ. ಎಲ್. ಸಂತೋಷ್ ಆಪ್ತರು.
ಬಿ-ಫಾರಂ ಇಲ್ಲದೇ ನಾಮಪತ್ರವನ್ನು ಸಲ್ಲಿಕೆ ಮಾಡಿ ಬಂದಿರುವ ಡಾ. ಇ. ಸಿ. ನಿಂಗರಾಜೇಗೌಡ ಮೈಸೂರಿನಲ್ಲಿ ಸಂಘ ಪರಿವಾರದ ನಾಯಕರು, ಬಿಜೆಪಿ ನಾಯಕರನ್ನು ಭೇಟಿಯಾಗಿ ಸ್ಪರ್ಧೆ ಕುರಿತು ಚರ್ಚೆ ನಡೆಸಿದ್ದಾರೆ. ಅವರ ನಾಮಪತ್ರ ವಾಪಸ್ ಪಡೆದು ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ, ಎಚ್. ಡಿ. ರೇವಣ್ಣ ಬಂಧನ, ಬಿಡುಗಡೆ ಪ್ರಕರಣಗಳಿಂದ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಆಗಬಹುದು. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಅದು ಕಾಂಗ್ರೆಸ್ ಪಾಲಾದರೆ? ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಅಂತಿಮವಾಗಿ ಬಿಜೆಪಿ, ಜೆಡಿಎಸ್ ಯಾರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರ ಎಂಬ ಚಿತ್ರಣ ಲಭ್ಯವಾಗಿಲ್ಲ.












Click it and Unblock the Notifications