• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನುದಾನ ಬಿಡುಗಡೆ: ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಗರಂ ಆದ ವಿಧಾನ ಪರಿಷತ್ ಸದಸ್ಯರು!

|
Google Oneindia Kannada News

ಬೆಂಗಳೂರು, ಆ. 03: ರಾಜ್ಯ ವಿಧಾನ ಪರಿಷತ್ ಸದಸ್ಯರು ಪಕ್ಷಬೇದ ಮರೆತು ರಾಜ್ಯ ಸರ್ಕಾರದ ಮೇಲೆ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಸಭೆ ಸೇರಿದ್ದ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರೂ ಸರ್ಕಾರದ ಮೇಲೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

ಒಂದೆಡೆ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಏಕವ್ಯಕ್ತಿ ಸಂಪುಟದ ಸರ್ಕಾರ ರಾಜ್ಯದಲ್ಲಿದೆ. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳು ನಿಜಕ್ಕೂ ಆಶ್ಚರ್ಯ ಮೂಡಿಸಿವೆ. ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರಿದ ಸದಸ್ಯರು ಮಾತ್ರವಲ್ಲ, ಬಿಜೆಪಿ ಸದಸ್ಯರೂ ಅದಕ್ಕೆ ದನಿಗೂಡಿಸಿದ್ದು ಗಮನ ಸೆಳೆಯಿತು.

ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ಮಂಜೂರಾಗುವ ಅನುದಾನ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಸಿಡಿದೆದ್ದಿದ್ದಾರೆ. ಹೀಗಾಗಿ ಎಲ್ಲಾ ಪಕ್ಷಗಳ ಪರಿಷತ್ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆದಿರುವುದು ಮತ್ತೊಂದು ವಿಶೇಷ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ನಾರಾಯಣಸ್ವಾಮಿ, ಹರೀಶ್ ಕುಮಾರ್, ವೀಣಾ ಅಚ್ಚಯ್ಯ, ಪ್ರಕಾಶ್ ರಾಥೋಡ್, ಆರ್. ಬಿ. ತಿಮ್ಮಾಪೂರ, ಎಸ್. ರವಿ, ಕೆ. ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಬಿಜೆಪಿಯ ಎನ್. ರವಿಕುಮಾರ್, ಶಾಂತಾರಾಂ ಸಿದ್ದಿ, ಪ್ರಾಣೇಶ್ ಹಾಗೂ ಜೆಡಿಎಸ್ ಪಕ್ಷದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಕಾಂತರಾಜು ಸೇರಿ‌ದಂತೆ ಹಲವು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಆರೋಪಗಳ ಸುರಿಮಳೆ ಮಾಡಿದರು. ಅಷ್ಟಕ್ಕೂ ವಿಧಾನ ಪರಿಷತ್ ಸದಸ್ಯರಿಗೆ ಅನುದಾನ ತಾರತಮ್ಯ ಮಾಡಲಾಗಿದೆಯಾ? ಸಭೆಯಲ್ಲಿದ್ದವರು ಮಾಡಿದ ಆರೋಪಗಳೇನು? ಮುಂದಿದೆ ಸಂಪೂರ್ಣ ಮಾಹಿತಿ.

ನಮ್ಮ ಮಾನ ಮರ್ಯಾದೆ ಯಾಕೆ‌ ಕಳೆಯುತ್ತೀರಿ?

ನಮ್ಮ ಮಾನ ಮರ್ಯಾದೆ ಯಾಕೆ‌ ಕಳೆಯುತ್ತೀರಿ?

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಕಾಂಗ್ರೆಸ್ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿದ್ದು ನಿಜಕ್ಕೂ ಗಮನ ಸೆಳೆಯಿತು. "ನಮ್ಮ ಮಾನ ಮರ್ಯಾದೆ ಯಾಕೆ‌ ಕಳೆಯುತ್ತೀರಿ? ಉದಾಹರಣೆಗೆ ನಾನು ಒಂದು ಸ್ಮಶಾನದ ಕೆಲಸ ಮಾಡಿಸಲು ಸೂಚನೆ ಕೊಟ್ಟಿದ್ದೆ. ಕಾಮಗಾರಿ ಮಾಡಿದವರು ಹಣ ಕೇಳೋಕೆ ಬಂದಿದ್ದರು. ಅವರು ಮಾತನಾಡಿದ್ದು ಕೇಳಿದ್ರೆ ನಿಮಗೆ ಬೇಜಾರಾಗುತ್ತದೆ. ನೀವು ದೊಡ್ಡವರು ಇಂಥ ಕೆಲಸ ಮಾಡ್ತೀರಿ ಅಂತಾ ಗೊತ್ತಿರಲಿಲ್ಲ ಎಂದು ಕಾಮಗಾರಿ ಮಾಡಿದವರು ಮುಖದ ಮೇಲೆ ಹೊಡೆದಂತೆ ಹೇಳಿ ಹೋದರು. ಹೆಸರಿಗೆ ನಮಗೆ 2 ಕೋಟಿ ರೂ. ಅನುದಾನ ಕೊಡ್ತೀರಿ. ಕಾಮಗಾರಿ ಮುಗಿಸಿದರೆ ಹಣ ಬರುವುದೇ ಇಲ್ಲ ಅಂದ್ರೆ ಹೇಗೆ?" ಎಂದು ತಮ್ಮ ಅಳಲು ತೋಡಿಕೊಂಡರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿ ಕುಮಾರ್ ಅವರು, "ಅನುದಾನದ ವಿಚಾರದಲ್ಲಿ ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ತಾರತಮ್ಯವಿದೆ. ಜೊತೆಗೆ ಪರಿಷತ್ ಸದಸ್ಯರ ಅನುದಾನಕ್ಕೆ ಕತ್ತರಿ ಹಾಕುವುದು ಸರಿಯಲ್ಲ. ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿ ಬಹಳ ದೊಡ್ಡದಿರುತ್ತದೆ. ಹೀಗಾಗಿ ಅನುದಾನವನ್ನು ಪ್ರತ್ಯೇಕವಾಗಿಡಬೇಕು. ಅನುದಾನದಲ್ಲಿ ಹಣಕ್ಕೆ ಕತ್ತರಿ ಹಾಕದೆ ಸಂಪೂರ್ಣ ಹಣ ಮಂಜೂರು ಮಾಡಬೇಕು" ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಕೊಟ್ಟ ಸ್ಪಷ್ಟನೆ ಬಳಿಕ ಸದಸ್ಯರು ಮತ್ತಷ್ಟು ಗರಂ ಆದರು.

ಅನುದಾನದ ತಾರತಮ್ಯವಾಗಿಲ್ಲ: ಐಎನ್‌ಎಸ್ ಪ್ರಸಾದ್

ಅನುದಾನದ ತಾರತಮ್ಯವಾಗಿಲ್ಲ: ಐಎನ್‌ಎಸ್ ಪ್ರಸಾದ್

ಅನುದಾನದ ವಿಚಾರವಾಗಿ ನಡೆದ ವಿಧಾನ ಪರಿಷತ್ ಸದಸ್ಯರ ಸಭೆಗೆ ಆಗಮಿಸಿ ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಸ್ಪಷ್ಟನೆ ಕೊಟ್ಟರು. "ಆಯಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದೆ. ಜೊತೆಗೆ ಯಾವುದೇ ಅನುದಾನದ ತಾರತಮ್ಯವಾಗಿಲ್ಲ. ಪ್ರತಿವರ್ಷ ವಿಧಾನ ಪರಿಷತ್ ಸದಸ್ಯರಿಗಾಗಿ 6 ನೂರು ಕೋಟಿ ರೂ. ಬಜೆಟ್‌ನಲ್ಲಿ ಕಾಯ್ದಿರಿಸಲಾಗುತ್ತದೆ. 2017ರಲ್ಲಿ ಅನುದಾನ ಖರ್ಚಾಗದೆ ಹಣ ಬಾಕಿ‌ ಉಳಿದಿತ್ತು. ಅದನ್ನು ವಾಪಸ್ ಪಡೆದು ಅಂಗನವಾಡಿಗಳಿಗೆ ಕೊಟ್ಟಿದ್ದೆವು. ಸದಸ್ಯರು ಅನುದಾನದ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಹಣ ಬಳಕೆಯಾದರೆ ಕೊಡೋದಕ್ಕೆ ನಾವು ಸಿದ್ಧವಾಗಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಕೆಲಸಗಳು ಆಗುತ್ತಿಲ್ಲ. ಕೇವಲ ಪರಿಷತ್ ಸದಸ್ಯರು ಮಾತ್ರವಲ್ಲ, ಶಾಸಕರ ಪ್ರಾದೇಶಾಭಿವೃದ್ಧಿ ನಿಧಿಯಿಂದಲೂ ಕೆಲಸಗಳು ಆಗುತ್ತಿಲ್ಲ. ಹಣ ಖರ್ಚು ಮಾಡಿದರೆ ಕೊಡಬಹುದು. ಕಾಮಗಾರಿ ಮುಗಿಯಲ್ಲ, ಹಣ ಬಾಕಿ‌ ಉಳಿದಿದೆ" ಎಂದು ಐಎನ್ಎಸ್ ಪ್ರಸಾದ್ ವಿವರಣೆ ಕೊಟ್ಟರು. ಅವರ ವಿವರಣೆಯಿಂದ ವಿಧಾನ ಪರಿಷತ್ ಸದಸ್ಯರು ಮತ್ತಷ್ಟು ಗರಂ ಆದರು.

ಐಎನ್ಎಸ್ ಪ್ರಸಾದ್ ಮೇಲೆ ಪರಿಷತ್ ಸದಸ್ಯರು ಗರಂ

ಐಎನ್ಎಸ್ ಪ್ರಸಾದ್ ಮೇಲೆ ಪರಿಷತ್ ಸದಸ್ಯರು ಗರಂ

ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಅವರು ಸ್ಪಷ್ಟನೆಗೆ ಉತ್ತರಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪ್ರತ್ಯುತ್ತರ ಕೊಟ್ಟರು. "ನನಗೆ ಬಿಡುಗಡೆ ಆಗಬೇಕಿದ್ದ ಅನುದಾನ ಕಳೆದ 2018-19ರಲ್ಲಿ 39 ಲಕ್ಷ ರೂ. ಬಾಕಿ ಉಳಿದಿದೆ. 2019-20ರಲ್ಲಿ 29 ಲಕ್ಷ ರೂ. ಬಾಕಿ ಉಳಿದಿದ್ದು, 2020-21 ರಲ್ಲಿ 12 ಲಕ್ಷ ರೂ. ಬಾಕಿ‌ ಉಳಿದಿದೆ. ಈ ಬಾಕಿ ಬಿಡುಗಡೆಗೆ ಸಮಸ್ಯೆ ಏನಿತ್ತು" ಏನಿತ್ತು ಎಂದು ಎಸ್‌.ಆರ್. ಪಾಟೀಲ್ ಪ್ರಶ್ನೆ ಮಾಡಿದರು. ಜೊತೆಗೆ ಮತ್ತೊಂದು ಗಂಭೀರ ಆರೋಪವನ್ನು ಮಾಡಿದರು.

"2 ಕೋಟಿ ರೂ. ಅನುದಾನ ಮಂಜೂರು ಮಾಡಲು ಕಾಮಗಾರಿ ಪಟ್ಟಿ ಕೊಡಿ ಅಂತಾ ನಿಯಮ ಹಾಕುತ್ತೀರಿ. ಹೀಗಾಗಿ ನಾವು ಕಾಮಗಾರಿಗಳ ಪಟ್ಟಿ ಕೊಟ್ಟಿದ್ದೇವೆ. ನಮ್ಮ ಮತ ಕ್ಷೇತ್ರದಲ್ಲಿನ ಕಾಮಗಾರಿಗಳ ಪಟ್ಟಿ ಕೊಟ್ಟಿದ್ದೇನೆ. ಜೊತೆಗೆ ಜಿಲ್ಲಾಧಿಕಾರಿಗಳಿಗೂ ದಾಖಲೆ ಕೊಟ್ಟಿದ್ದೇವೆ. ಆದರೂ ನಮ್ಮ‌ ಅನುದಾನ ನಮಗೆ ಬಿಡುಗಡೆ ಆಗಲಿಲ್ಲ ಅಂದ್ರೆ ಹೇಗೆ? ಕ್ಷೇತ್ರದಲ್ಲಿ ನಮ್ಮ‌ ಮಾನ-ಮರ್ಯಾದೆ ಹಾಳಾಗಿ ಹೋಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟಿದ್ದೇವೆ. ಶಾಸಕರ ಪ್ರಾದೇಶಾಭಿವೃದ್ಧಿ ಅನುದಾನ ಬರುವುದಿಲ್ಲ ಅಂದರೆ ಹೇಗೆ? ನಾವು ಕೆಲಸ ಮಾಡೋದು ಹೇಗೆ? ಕೋವಿಡ್ ಸಂಬಂಧಿಸಿದಂತೆ ಕಾರ್ಯಕ್ರಮ ಕೊಟ್ಟಿದ್ದೇವೆ" ಎಂದು ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡಿದರು.

ಜಿಲ್ಲಾಧಿಕಾರಿಗಳು ನಮಗೆ ನಿರ್ದೇಶನ ಕೊಡುತ್ತಾರೆ!

ಜಿಲ್ಲಾಧಿಕಾರಿಗಳು ನಮಗೆ ನಿರ್ದೇಶನ ಕೊಡುತ್ತಾರೆ!

ವಿಧಾನ ಪರಿಷತ್ ಸದಸ್ಯರು ಅನುದಾನ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಿರುಗೇಟು ಕೊಟ್ಟರು. "ನಾವು ಕಾಮಗಾರಿ ಪಟ್ಟಿ ಕೊಟ್ಟಿದ್ದೇವೆ. ಆದರೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾದಲ್ಲಿ ನಾವು ಯಾರನ್ನು ಕೇಳಬೇಕು? ನಾನು ಮೂರು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ. ವಿಪರ್ಯಾಸ ಎಂದರೆ, ಬಯಲು ಸೀಮೆಯಲ್ಲಿ ನನ್ನ‌ ಹೆಸರೇ ಇಲ್ಲ. ಜಿಲ್ಲಾಧಿಕಾರಿಗಳಿಗೆ ಕಾಮಗಾರಿ ವಿವರ ಕೊಡುತ್ತೇವೆ. ಆದರೆ ಒಟ್ಟು 50 ಲಕ್ಷ ರೂ.ಗಳ ಕಾಮಗಾರಿ ಮಾಡಿಸಿದರೆ 38 ಲಕ್ಷ ರೂ. ಬಿಡುಗಡೆ ಮಾಡುತ್ತೀರಿ. ಉಳಿದ 12 ಲಕ್ಷ ರೂ. ಹಣ ಕೊಡೋದೇ ಇಲ್ಲ. ಆ 12 ಲಕ್ಷ ರೂ. ಹಣ ಎಲ್ಲಿಗೆ ಹೋಗುತ್ತದೆ? ಜೊತೆಗೆ ಇಂಥದ್ದಕ್ಕೇ ಅನುದಾನವನ್ನು ಖರ್ಚು ಮಾಡಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ಕೊಡುತ್ತಾರೆ. ನಾವು ಪರಿಷತ್ ಸದಸ್ಯರು, ನಮಗೆ ನಿರ್ದೇಶನ ಕೊಟ್ಟರೆ ಹೇಗೆ? ಹಾಗೆ ನಿರ್ದೇಶನ ಕೊಡುವುದನ್ನು ಮೊದಲು ನಿಲ್ಲಿಸಿ" ಎಂದು ಆಗ್ರಹಿಸಿದರು.

"ಜೊತೆಗೆ 2019-20 ರಲ್ಲಿ ಬಿಡುಗಡೆ ಆಗಬೇಕಿದ್ದ ಅನುದಾನದಲ್ಲಿ 56 ಲಕ್ಷ ರೂ. ಪೆಂಡಿಂಗ್ ಇದೆ. 2020-21 ರಲ್ಲಿ 1 ಕೋಟಿ ಕಾಮಗಾರಿಗೆ ಬಿಲ್ ಮಾಡಿಲ್ಲ. ನಾವು ಕಾಮಗಾರಿ ಮಾಡಿ ಮುಗಿಸಿದ್ದೇವೆ. ಆದರೂ ಅನುದಾನ ಬಿಡುಗಡೆ ಮಾಡಿಲ್ಲ ಅಂದರೆ ಹೇಗೆ?" ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆ ಮಾಡಿದರು.

ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಚ್. ವಿಶ್ವನಾಥ್!

ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಚ್. ವಿಶ್ವನಾಥ್!

ಇನ್ನು ಆಗಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಳ್ಳುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಅವರು, "ನಮಗೆ ಬರುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಸರ್ಕಾರದಿಂದ ಅನುದಾನ ಬರುತ್ತದೆ. ಆ ಅನುದಾನದಲ್ಲಿ 22 ಪರ್ಸೆಂಟ್ ಕೊಡಿ ಅಂದರೆ ಹೇಗೆ? ಟೆಂಡರ್ ಕರೆದು ಮಾಡಿದರೆ 32 ಪರ್ಸೆಂಟ್ ಕಟ್ ಆಗುತ್ತದೆ. ಅನುಮತಿ ಕೊಡಬೇಕು, ವಿವರಣೆ ಕೊಡಬೇಕು. ಇದೆಲ್ಲದಕ್ಕೂ ಪರ್ಸೆಂಟ್ ಕಟ್ ಆದರೆ ಕಾಮಗಾರಿ ಮಾಡುವುದು ಹೇಗೆ? ಬಜೆಟ್‌ನಲ್ಲಿ ಒಟ್ಟು 600 ಕೋಟಿ ರೂ. ಅನುದಾನ ನಮಗೆ ಅಂತಾ ಇಟ್ಟಿದ್ದೀರಿ. ನಮಗೆ ಟೆಂಡರ್‌ನಿಂದ ವಿನಾಯಿತಿ ಕೊಡಿ. ಗುಂಡಿ ಹೊಡೆಯೋದು ನಮ್ಮ ಪ್ರಯಾರಿಟಿ ಅಲ್ಲ. ಅಕ್ಷರ, ಆರೋಗ್ಯ ನಮ್ಮ‌ ಪ್ರಯಾರಿಟಿ. ಅದರ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಇದಕ್ಕೆ ಒಂದು ಸಮಿತಿ ರಚನೆ ಮಾಡಿ. ನಂತರ ಮುಖ್ಯಮಂತ್ರಿಗಳಿಗೆ ಒಂದು ವರದಿ ಕೊಡಿ. ನಮ್ಮ ಸಮಸ್ಯೆಯನ್ನ ಸರಿಪಡಿಸಿ. ಬಜೆಟ್‌ನಲ್ಲಿ ವಿಧಾನ ಪರಿಷತ್ ಸದ್ಯರಿಗೆ ನೀವು ಇಟ್ಟಿರುವ 600 ಕೋಟಿ ರೂ. ಅನುದಾನದಿಂದ ನಾವು ಏನು‌ ಮಾಡುವುದಕ್ಕೆ ಸಾಧ್ಯವಾಗುತ್ತದೆ?" ಎಂದು ತರಾಟೆಗೆ ತೆಗೆದುಕೊಂಡರು.

  ಮಗಳು ಹಾಗೂ ತಾಯಿಯ ಬಗ್ಗೆ ಮನ ಬಿಚ್ಚಿ ಮಾತಾಡಿದ ವಿರಾಟ್ | Oneindia Kannada
  ನಾಮಕಾವಾಸ್ತೆ ಅನುದಾನ ನಮಗೆ ಬೇಡ..!

  ನಾಮಕಾವಾಸ್ತೆ ಅನುದಾನ ನಮಗೆ ಬೇಡ..!

  ಇನ್ನು ಸಭೆಯಲ್ಲಿದ್ದ ಕಾಂಗ್ರೆಸ್‌ ಸದಸ್ಯ ಪ್ರಸನ್ನ ಕುಮಾರ್ ಅವರು, "ನಮಗೆ ಕೊಡುವುದು 2 ಕೋಟಿ ರೂ. ಅನುದಾನ. ಆದರೆ ನಮ್ಮ ವ್ಯಾಪ್ತಿಯಲ್ಲಿ 14 ಪಂಚಾಯಿತಿಗಳು ಬರುತ್ತವೆ. ಒಂದು ಪಂಚಾಯಿತಿಗೆ ನಾವು ತಲಾ 2 ಲಕ್ಷ ರೂ. ಕೊಡಬಹುದು. ಅದರಲ್ಲಿ ಏನು ಕೆಲಸ ಮಾಡುವುದಕ್ಕೆ ಆಗುತ್ತದೆ? ನಮಗೂ 5 ಕೋಟಿ ರೂ. ಅನುದಾನ ಕೊಡಿ. ಆಗ ನಾವೂ ಹೆಚ್ಚಿನ ಕೆಲಸ ಮಾಡುತ್ತೇವೆ" ಒತ್ತಾಯಿಸಿದರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಗೋಪಾಲಸ್ವಾಮಿ ಅವರು, "ನಮ್ಮ‌ ಅನುದಾನದಲ್ಲಿ ಒಂದು ಸಮುದಾಯ ಭವನಕ್ಕೆ 1 ಲಕ್ಷ ರೂ. ಕೊಡುತ್ತೇವೆ. ಹಾಗೆಯೆ ದೇವಸ್ಥಾನಗಳಿಗೆ 1 ಲಕ್ಷ ರೂ. ಕೊಡುತ್ತೇವೆ. ಆದರೆ ಅದರಲ್ಲಿ 70 ಸಾವಿರ ರೂ. ಮಾತ್ರ ಬರುತ್ತದೆ" ಎಂದು ಆರೋಪಿಸಿದರು.

  ಒಟ್ಟಾರೆ ಅನುದಾನ ತಾರತಮ್ಯ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪವನ್ನು ಎಲ್ಲ ಸದಸ್ಯರು ಮಾಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಒಟ್ಟು 75 ಸದಸ್ಯರಿದ್ದಾರೆ. ಹೀಗಾಗಿ ನಾಮಕಾವಾಸ್ತೆ ನಮಗೆ ಅನುದಾನ ಬೇಡ. ನಾವೂ ಜನರ ಸೇವೆ ಮಾಡುವುದಕ್ಕೆ ಅನುವಾಗುವಂತೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿ ಎಂದು ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಮಿತಿ ರಚನೆ ಮಾಡಲೂ ಒತ್ತಾಯಿಸಿದ್ದಾರೆ. ಹೀಗಾಗಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

  English summary
  Members of Legislative council expressed dissatisfaction with state government over grant discrimination in a meeting in Vidhana soudha. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X