ಪರಿಷತ್ ಫೈಟ್; ವಿಜಯೇಂದ್ರ ಸಭೆ, ಈಶಾನ್ಯ ಪದವೀಧರ ಕ್ಷೇತ್ರದ ಬಂಡಾಯ ಶಮನ
ಬೆಂಗಳೂರು, ಮೇ 19: ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರದ ಮತದಾನ ಮುಕ್ತಾಯವಾಗಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗ ವಿಧಾನ ಪರಿಷತ್‌ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದೆ.
ಈಶಾನ್ಯ ಪದವೀಧರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಬಿಜೆಪಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ ಪಾಟೀಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಆದರೆ ಬಿಜೆಪಿ ನಾಯಕ ಸುರೇಶ್ ಸಜ್ಜನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದರು.
ಬಿ. ವೈ. ವಿಜಯೇಂದ್ರ ಸಭೆ: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರರನ್ನು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ್ ಸಜ್ಜನ್ ಭೇಟಿ ಮಾಡಿದ್ದರು. ಸಭೆಯ ಬಳಿಕ ಬಂಡಾಯ ಶಮನಗೊಂಡಿದ್ದು, ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಿ. ವೈ. ವಿಜಯೇಂದ್ರ ಈ ಕುರಿತು ಟ್ವೀಟ್ ಮಾಡಿದ್ದು, 'ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷದ ಮುಖಂಡರಾದ ಶ್ರೀ ಸುರೇಶ್ ಸಜ್ಜನ್ ಅವರು ಭೇಟಿಯಾದ ಸಂದರ್ಭದಲ್ಲಿ ನಾಮಪತ್ರ ವಾಪಸ್ ಪಡೆದು ಎನ್‌ಡಿಎ ಅಭ್ಯರ್ಥಿ ಶ್ರೀ ಅಮರನಾಥ ಪಾಟೀಲ್ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಲಾಯಿತು. ಈ ವೇಳೆಯ ಮಾತುಕತೆ ಫಲಪ್ರಧವಾಗಿದ್ದು, ಪಕ್ಷದ ನಿರ್ಣಯಕ್ಕೆ ಬದ್ಧರಾಗಿರುವ ಸುರೇಶ್ ಸಜ್ಜನ್ ಅವರು ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ' ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ಸುರೇಶ್ ಸಜ್ಜನ್ ಮಾತನಾಡಿ, "ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಕೆ ಮಾಡಿರುವ ನಾಮಪತ್ರ ವಾಪಸ್ ಪಡೆಯುತ್ತೇನೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದೆ" ಎಂದರು.
"ನಿಮ್ಮ ಸೇವೆಯನ್ನು ಮುಂದೆ ಗುರುತಿಸಲಿದೆ ಎಂದು ಹಿರಿಯ ನಾಯಕರಾದ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಅಮರನಾಥ ಪಾಟೀಲ್ ಬೆಂಬಲಿಸಿ ಎಂದು ಪಕ್ಷದ ಇತರ ನಾಯಕರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಸೋಮವಾರ ಕಲಬುರಗಿಗೆ ತೆರಳಿ ನಾಮಪತ್ರ ವಾಪಸ್ ಪಡೆಯಲಿದ್ದೇನೆ" ಎಂದು ಸುರೇಶ್ ಸಜ್ಜನ್ ಹೇಳಿದರು.
"ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಮುಂದೆ ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸುವ ಅಗತ್ಯವಿದೆ. ಅಮರನಾಥ ಪಾಟೀಲ್ ಗೆಲುವಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸಲಿದ್ದೇವೆ. ನನಗೆ ಟಿಕೆಟ್ ಮುಖ್ಯವಲ್ಲ. ಪಕ್ಷದ ಅಭ್ಯರ್ಥಿ ಗೆಲುವು ಮುಖ್ಯ" ಎಂದು ಸುರೇಶ್ ಸಜ್ಜನ್ ತಿಳಿಸಿದರು.
ಸುರೇಶ್ ಸಜ್ಜನ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ರಾಜೂ ಗೌಡ, ಎನ್. ರವಿಕುಮಾರ್ ಮತ್ತು ಗೋವಿಂದ ಕಾರಜೋಳ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು.
ಆಗ ನಾಯಕರು ಅವರ ಜೊತೆ ಸಭೆ ನಡೆಸಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಮೇ 20ರ ಸೋಮವಾರ ಕೊನೆಯ ದಿನವಾಗಿದೆ. ನಾಯಕರ ಮಾತಿಗೆ ಒಪ್ಪಿದ್ದೇನೆ, ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಸುರೇಶ್ ಸಜ್ಜನ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್. ರವಿ ಕುಮಾರ್ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಿದೆ. ಕ್ಷೇತ್ರದ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಒಳಪಡುತ್ತದೆ. ಜೂನ್ 3ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂನ್ 6ರಂದು ನಡೆಯಲಿದೆ.












Click it and Unblock the Notifications