Left wing Extremism: "ಕರ್ನಾಟಕವೀಗ ಉಗ್ರರು-ನಕ್ಸಲರ ಫೇವರೆಟ್ ಪ್ಲೇಸ್! ದಿಮಾಗಿ ನಕ್ಸಲರ ಸ್ವರ್ಗ!'
Left-wing Extremism: "ಕರ್ನಾಟಕವೀಗ ಉಗ್ರರು-ನಕ್ಸಲರ ಫೇವರೆಟ್ ಪ್ಲೇಸ್! ದಿಮಾಗಿ ನಕ್ಸಲರ ಸ್ವರ್ಗ!' ಎನ್ನುವ ಗಂಭೀರ ಆರೋಪವನ್ನು ಕರ್ನಾಟಕದ ವಿರೋಧ ಪಕ್ಷ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಎಡಪಂಥೀಯ ಉಗ್ರವಾದ ಹರಡಲು ಬೆಂಗಳೂರನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ವಿದೇಶಿ ಶಕ್ತಿಗಳು ಇಲ್ಲಿನ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಸಹಾಯ ಮಾಡುತ್ತಿವೆ. ಬೆಂಗಳೂರಿನ ಎರಡು ಶೆಲ್ ಕಂಪನಿಗಳಿಗೆ ಅಮೆರಿಕದ ಕ್ರೈಸ್ತ ಸೇವಾ ಸಂಸ್ಥೆ ₹92 ಕೋಟಿ ವರ್ಗಾವಣೆ ಮಾಡಿರುವುದು ಇ.ಡಿ ತನಿಖೆಯಲ್ಲಿ ಗೊತ್ತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಎಡಪಂಥೀಯ ಉಗ್ರರು ಹಾಗೂ ದಿಮಾಗಿ ನಕ್ಸಲರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ದೂರಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್ ಎಸ್ಎಸ್ ನೋಂದಣಿ ಬಗ್ಗೆ ಚಿಂತೆ ಮಾಡಿಕೊಂಡು ಮೆದುಳಿಗೆ ಕೈ ಹಾಕಿ ಕೆರೆದುಕೊಂಡು ಕುಳಿತಿರುವ ನಿಮಗೆ, ನಿಮ್ಮದೇ ಆಡಳಿತದಲ್ಲಿ ಎಡಪಂಥೀಯ ಉಗ್ರವಾದ ಬೆಳೆಯುತ್ತಿರುವುದು ಕಾಣುತ್ತಿಲ್ಲ. ಗೃಹ ಇಲಾಖೆ ಮಾಡಬೇಕಾದ ಕೆಲಸವನ್ನು ಇ.ಡಿ ಮೊದಲಾದ ಕೇಂದ್ರೀಯ ತನಿಖಾ ಸಂಸ್ಥೆಗಳು ಮಾಡುತ್ತಿವೆ.
ವಿದೇಶದಿಂದ ಕೋಟ್ಯಂತರ ರೂಪಾಯಿ ಹರಿದುಬಂದು ನಕ್ಸಲರು ಹಾಗೂ ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿದ್ದರೂ, ಅದು ನಿಮಗೆ ಗೊತ್ತಾಗುವುದಿಲ್ಲ ಎಂದರೆ, ಇವರೆಲ್ಲರ ಹಿಂದೆ ದಿಮಾಗಿ ನಕ್ಸಲರು ನಿಂತುಕೊಂಡು ರಕ್ಷಣೆ ನೀಡುತ್ತಿದ್ದಾರೆಯೇ? ಅಥವಾ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬ್ರದರ್ ಗಳು ಎಂಬ ಕಾರಣಕ್ಕೆ ಮೃದು ನೀತಿ ಅನುಸರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ತಂದ 'ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಇಂತಹ ಹಣದ ಹರಿವನ್ನು ತಡೆದು ವಿದೇಶಿ ಶಕ್ತಿಗಳು ಭಾರತವನ್ನು ಉಗ್ರವಾದದ ಕೇಂದ್ರವಾಗಿಸುವುದನ್ನು ತಪ್ಪಿಸುತ್ತದೆ. ಆದರೆ ಇದಕ್ಕೂ ಕಾಂಗ್ರೆಸ್ ಅಡ್ಡಗಾಲು ಹಾಕಿ ವಿರೋಧ ಮಾಡುತ್ತಿದೆ ಎಂದಮೇಲೆ, ಇಂತಹ ರಾಷ್ಟ್ರಭಂಜಕರಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುವುದು ಖಾತರಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಂತೆಯೇ ಈಗ ಕರ್ನಾಟಕವನ್ನು ದಿಮಾಗಿ ನಕ್ಸಲರಿಗೆ ಸ್ವರ್ಗ ಮಾಡಿಕೊಡಲು ಅವಕಾಶ ನೀಡಿದೆಯೇ ಎಂದು ಕೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಬ್ರ್ಯಾಂಡ್ ಬೆಂಗಳೂರು ಈಗ ಉಗ್ರವಾದದಲ್ಲಿ ದೊಡ್ಡ ಬ್ರ್ಯಾಂಡ್ ಆಗುತ್ತಿದೆ. ಬ್ರ್ಯಾಂಡ್ ಯೋಜನೆಗಳಂತೂ ರಸ್ತೆ ಬದಿಯ ಕಸದ ರಾಶಿಯಲ್ಲಿ ಬಿದ್ದು ಹೊರಳಾಡುತ್ತಿದೆ. ಕನಿಷ್ಠ ಬೆಂಗಳೂರನ್ನು ಸುರಕ್ಷಿತ ನಗರವಾಗಿಸಲು ಪ್ರಯತ್ನ ಮಾಡಿ. ಇಲ್ಲವಾದರೆ ತಾವು ದಿಮಾಗಿ ನಕ್ಸಲರ ಋಣಕ್ಕೆ ಬಿದ್ದವರು ಎಂದು ಒಪ್ಪಿಕೊಂಡು ರಾಜೀನಾಮೆ ನೀಡಿ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರಜಾಸೇವಾ ಶುಲ್ಕದ ಹೆಸರು - ಗೌರವಯುತ ಲಂಚ ಎಂದ ಆರ್. ಅಶೋಕ್
ಜನರ ಅಹವಾಲು ಆಲಿಸಲು ಪ್ರಜಾಸೇವೆ ಇಲಾಖೆ ಆರಂಭಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸರ್ಕಾರ, ಈಗ ನಾಚಿಕೆ ಮಾನ ಮರ್ಯಾದೆ ಬದಿಗಿಟ್ಟು ನೇರವಾಗಿ ಜನರ ಬಳಿ ಲಂಚ ಕೊಡಿ ಎಂದು ಅಂಗಲಾಚುತ್ತಿದೆ. ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡರು "ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ" ಎನ್ನುವ ಮೂಲಕ ಲಂಚ ಪಡೆಯುವುದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಧರ್ಮ ಎಂದು ಹೇಳಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಹಿಂದಿನ ಸಚಿವರ ಅವಧಿಯಲ್ಲೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಈಗ ಅದನ್ನೇ ಹಾಲಿ ಸಚಿವರು ಮುಂದುವರಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಭ್ರಷ್ಟರನ್ನು ಬಡಿದು ಹಾಕುತ್ತೇನೆ, ಲಂಚ ಕೇಳಿದರೆ ನನಗೆ ಕರೆ ಮಾಡಿ ಎನ್ನುವ ನಾಟಕೀಯ ಮಾತುಗಳನ್ನಾಡುವ ನೀವು, ನಿಮ್ಮದೇ ಸಚಿವರು ಲಂಚಕ್ಕೆ ಬಹಿರಂಗ ಪ್ರೋತ್ಸಾಹ ನೀಡಿದರೂ ಸುಮ್ಮನಿದ್ದೀರಿ. ಜನರ ಕಷ್ಟಗಳನ್ನು ಕೇಳಬೇಕಾದ ಪ್ರಜಾಸೇವೆ ಸಭೆಯಲ್ಲೇ ಲಂಚವನ್ನು ಅಧಿಕೃತಗೊಳಿಸುವ ಪ್ರಯತ್ನ ನಡೆದಿದೆ. ಇನ್ನು 'ಗೌರವದ ಲಂಚ ಶುಲ್ಕ' ಎಂಬ ಹೊಸ ಪ್ರಜಾಸೇವಾ ಶುಲ್ಕಕ್ಕೆ ಆದೇಶವೂ ಹೊರಡಬಹುದು.
ಕಾಂಗ್ರೆಸ್ ಹೈಕಮಾಂಡ್ ಕೈಗೊಂಬೆಯಾಗಿರುವ ನೀವು ಹಾಗೂ ನಿಮ್ಮ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದು, ಈ ನಾಚಿಕೆಗೆಟ್ಟ ಸರ್ಕಾರ ತೊಲಗದೇ ಜನರಿಗೆ ನೆಮ್ಮದಿ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications
