Get Updates
Get notified of breaking news, exclusive insights, and must-see stories!

2022ರ ಮಾರ್ಚ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುಂಚೆ ಭೂಮಿ ಬ್ಯಾಂಕ್

ಬೆಂಗಳೂರು, ನ.26: ಕೈಗಾರಿಕೆಗಳ ಅಭಿವೃದ್ಧಿಗೆ ಪ್ರತಿ ಜಿಲ್ಲೆಯಲ್ಲೂ ಭೂಮಿ ಬ್ಯಾಂಕ್ ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮುಂದಾಗಿದೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 2022ರ ಮಾರ್ಚ್‌ನಲ್ಲಿ ಆಯೋಜಿಸುವ ಚಿಂತನೆ ಇದೆ. ಕೈಗಾರಿಕೆಗಳನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸುವ ಸಂಬಂಧ ರೂಪಿಸಬೇಕಾಗಿರುವ ಯೋಜನೆಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಹೂಡಿಕೆದಾರರು ಭವಿಷ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬಹುದಾದ ಭೂಮಿಯನ್ನು ಗುರುತಿಸಲು ಪ್ರಾರಂಭಿಸಿದೆ. ಭೂಮಿ ಸಿಗದ ಕಾರಣ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಹೀಗಾಗಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಭೂ ಬ್ಯಾಂಕ್‌ ಪರಿಕಲ್ಪನೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

Land Bank in each district for the development of industries

ಇದೇ ವೇಳೆ ರಾಜ್ಯದಾದ್ಯಂತ ಇರುವ‌ ಕೈಗಾರಿಕಾ ಪಾಕ್೯ಗಳನ್ನು ಅಭಿವೃದ್ಧಿ ಪಡಿಸಲು ಸಹ ಮುಂದಾಗಿರುವ ಇಲಾಖೆ, ಉದ್ಯಮಿಗಳು ಸುಲಭವಾಗಿ ವ್ಯಾಪಾರ - ವಹಿವಾಟು ನಡೆಸಲು‌ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು, ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದೇ ಮೀಸಲಿಟ್ಟ ಭೂಮಿ ನಮ್ಮಲ್ಲಿ ಇರಬೇಕು. ಈ ಕಾರಣಕ್ಕೆ, ಲಭ್ಯ ಭೂಮಿಯ ಬಗ್ಗೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆ ಬಳಿಕ, ಅಗತ್ಯವಾದ ಭೂಮಿಯ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು. ದಿನದಿಂದ ದಿನಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕಷ್ಟದ ಕೆಲಸ ಆಗುತ್ತಿದೆ. ಹೀಗಾಗಿ, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ನಮ್ಮಲ್ಲಿ ಲಭ್ಯವಿದೆ ಎಂಬ ಭಾವನೆಯನ್ನು ಹೂಡಿಕೆದಾರರಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದಿದ್ದಾರೆ.

24 ತಾಸಿನಲ್ಲಿ ಭೂಮಿ ಸಿಗಬೇಕು

ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರು ಬಂದಾಗ 24 ತಾಸಿನಲ್ಲಿ ಭೂಮಿ‌ ಸಿಗುವಂತೆ ಆಗಬೇಕು. ಯಶಸ್ವಿ ಉದ್ಯಮಿಗಳಿಗೆ ನೀರು, ವಿದ್ಯುತ್, ರಸ್ತೆ ‌ಸೇರಿದಂತೆ ಮೂಲಭೂತ ಸೌಕರ್ಯ ಎಲ್ಲ ಜಿಲ್ಲೆಗಳಲ್ಲಿ ಸಿಗುವಂತೆ ಮಾಡಲಿದ್ದೇವೆ. ಅನೇಕ ಕಡೆ ನಿವೇಶನಗಳು ಸಿಗುತ್ತಿಲ್ಲ. ಅಂತಹ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಕನಿಷ್ಠ 500 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎನ್ನುತ್ತಾರೆ ‌ಸಚಿವ ನಿರಾಣಿ ಅವರು.

Land Bank in each district for the development of industries

ಕೈಗಾರಿಕೆ ಸ್ಥಾಪನೆಗೆ ಭೂಮಿ ಲಭ್ಯವಿದೆ ಎಂದರೆ ಮಾತ್ರ ಉದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ಹಲವಾರು ಹೂಡಿಕೆದಾರರು ಮತ್ತು ಸಂಸ್ಥೆಗಳು ಹೂಡಿಕೆದಾರರ ಸಮಾವೇಶಕ್ಕೆ ಬಂದಾಗ, ಪ್ರತಿ ಜಿಲ್ಲೆಯಲ್ಲೂ ಸುಲಭವಾಗಿ ಲಭ್ಯವಿರುವ ಭೂಮಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಪ್ರತಿ ಜಿಲ್ಲೆಯಲ್ಲೂ ಅವರಿಗೆ ಅಗತ್ಯವಿರುವ ಭೂಮಿಯನ್ನು ಒದಗಿಸುವ ಸ್ಥಿತಿಯಲ್ಲಿ ನಾವು ಇರಬೇಕು. ಯೋಜನೆಗಳಿಗೆ ಸರ್ಕಾರ ಅನುಮೋದನೆ ಪಡೆದ ತಕ್ಷಣ, ಆ ಯೋಜನೆಯ ಹೂಡಿಕೆದಾರರನ್ನು ಬ್ಯಾಂಕುಗಳು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲಿ ರೂಪಿಸಲಿದೆ. ಆ ಮೂಲಕ, ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಲಾಗವುದು ಎಂದಿದ್ದಾರೆ.

30,000 ಎಕರೆ ಸಿದ್ಧವಾಗಬೇಕು

ರಾಜ್ಯದಲ್ಲಿ ‌ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾದ 5,000 ಎಕರೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಹೂಡಿಕೆದಾರರು ಆಗಮಿಸಿದಾಗ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 30,000 ಎಕರೆ ಸಿದ್ಧವಾಗಬೇಕು. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಭೂಮಾಪಕರು ಮತ್ತು ಜಿಲ್ಲಾ ಉಪ ಆಯುಕ್ತರು ಸೂಕ್ತ ಭೂಮಿಯನ್ನು ಗುರುತಿಸಿ ಕೆಐಎಡಿಬಿ ಪರಿವರ್ತಿಸಲು‌ ಅಧಿಕಾರಿಗಳಿಗೆ ‌ನಿರಾಣಿ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Land Bank in each district for the development of industries

ಪ್ರಸ್ತುತ, ರಾಜ್ಯದಾದ್ಯಂತ 72,000 ಎಕರೆಗಳಲ್ಲಿ 188 ಕೈಗಾರಿಕಾ ಪ್ರದೇಶಗಳಿವೆ. ಇದಲ್ಲದೆ, ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ದಾಬಸ್‌ಪೇಟೆ, ವೇಮಗಲ್, ಗೌರಿಬಿದನೂರು ಮತ್ತು ಮಾಗಡಿಯಲ್ಲಿ ತಲಾ 800 ಎಕರೆ, ಹಾರೋಹಳ್ಳಿಯಲ್ಲಿ 1,600 ಎಕರೆ, ದೇವನಹಳ್ಳಿಯಲ್ಲಿ 1,700 ಎಕರೆ ಮತ್ತು ಕೋಲಾರದಲ್ಲಿ 600 ಎಕರೆ ಸ್ವಾಧೀನಪಡಿಸಿಕೊಳ್ಳಲು‌ ಇಲಾಖೆ ‌ಮುಂದಾಗಿದೆ.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಲು ಧಾರವಾಡದಲ್ಲಿ 6,000 ಎಕರೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ 3,300 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುವುದು. ವಿವಿಧ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಯೋಜಿಸುತ್ತಿದೆ.

ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಕಲಬುರ್ಗಿಯಲ್ಲಿ ಜವಳಿ ಮತ್ತು ಆಭರಣ ಪಾರ್ಕ್, ಹುಬ್ಬಳ್ಳಿ-ಧಾರವಾಡದಲ್ಲಿ ಐಟಿ ಪಾರ್ಕ್, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ಅನ್ನು ಕಲ್ಪಿಸಲಾಗಿದೆ. ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ತಲಾ 500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಸಚಿವ ನಿರಾಣಿ ವಿವರಿಸಿದ್ದಾರೆ.

ಕೃಷಿ ಜಮೀನು ‌ಭೂಸ್ವಾಧೀನ ಇಲ್ಲ

ಅಧಿಕಾರಿಗಳು ಕೈಗಾರಿಕೆಗಳ ಬಳಕೆಗೆ ಜಮೀನು ಭೂಸ್ವಾಧೀನ ಮಾಡುವ ಸಂದರ್ಭದಲ್ಲಿ ‌ಅಪ್ಪಿತಪ್ಪಿಯೂ ರೈತರು ಬಳಕೆ ಮಾಡುವ ಕೃಷಿ ಜಮೀನನ್ನು ಭೂ ಸ್ವಾಧೀನ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕೃಷಿಗೆ ಬಳಕೆ ಮಾಡದ ಜಮೀನು ಮಾತ್ರ ಗುರುತಿಸಬೇಕು. ಸ್ವಯಂಪ್ರೇರಿತವಾಗಿ ‌ಜಮೀನು ನೀಡಲು ಮುಂದೆ ಬಂದರೆ ಮಾತ್ರ ಸ್ವಾಧೀನ ಮಾಡಿಕೊಳ್ಳಬೇಕು.‌ ಯಾವುದೇ ಕಾರಣಕ್ಕೂ‌ ಬಲವಂತದ ‌ಭೂ ಸ್ವಾಧೀನ ಮಾಡಿಕೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ‌ ಹಿಂದೆ ‌2008- 2013 ರ ಬಿಜೆಪಿ ಸರಕಾರದ ಅವಧಿಯಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಸಿ ಲ್ಯಾಂಡ್‌ ಬ್ಯಾಂಕ್‌ (ಭೂಮಿ ಬ್ಯಾಂಕ್‌) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ಕೃಷಿ, ನೀರಾವರಿಗೆ ಯೋಗ್ಯವಲ್ಲದ ಜಾಗವನ್ನು ಮುಂಚಿತವಾಗಿ ಸ್ವಾಧೀನ ಪಡಿಸಿಕೊಂಡು ಅದನ್ನು ಕೈಗಾರಿಕೆಗಳಿಗೆ ಮೀಸಲಿಡುವುದು ಇದರ ಉದ್ದೇಶವಾಗಿತ್ತು. ಅದರಂತೆ, ಜಮೀನು ಗುರುತಿಸಿ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಗೂ ಚಾಲನೆ ಕೊಡಲಾಗಿತ್ತು. ಆದರೆ, 2013 ರಲ್ಲಿ ಅಧಿಕಾರಕ್ಕೆ ಬಂದ ಮಾಜಿ‌ ಸಿ.ಎಂ‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ‌ಸರ್ಕಾರ‌ ಕೈಗಾರಿಕೆಗಳಿಗೆ ಅಗತ್ಯ ಜಮೀನು ಒದಗಿಸುವ ಸಂಬಂಧ ಸ್ಥಾಪಿಸಲಾದ 'ಲ್ಯಾಂಡ್‌ ಬ್ಯಾಂಕ್‌' ವಿಸರ್ಜಿಸಲು ತೀರ್ಮಾನಿಸಿತ್ತು. ಕೈಗಾರಿಕೆಗಳ ಉತ್ತೇಜನಕ್ಕೆ ಈಗ ಅದಕ್ಕೆ ಮರು ಜೀವ ನೀಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

Recommended Video

      ದೇಸೀ ಹುಡುಗಿಯರ ಮನಗೆದ್ದ ದ್ರಾವಿಡ್ ಎಂದೆಂದಿಗೂ ಲವರ್ ಬಾಯ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+