ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 5: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹಾಗೂ ಅವರ ಆಪ್ತರಿಗೆ ಸೇರಿದ ಹಲವು ನಿವಾಸಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
Recommended Video
ರಾಜ್ಯದ ವಿಧಾನಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಯಾರಿಗಳು ನಡೆಯುತ್ತಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ದ್ವೇಷದ ಕಾರಣ ಆಡಳಿತಾರೂಢ ಬಿಜೆಪಿ ಸರ್ಕಾರ ಈ ದಾಲಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ದಾಳಿ ರಾಜಕೀಯ ಪ್ರೇರಿತ. ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸುತ್ತಿರುವ ವೇಳೆಯೇ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ಅನ್ನು ಮುಗಿಸಬೇಕೆಂಬ ಉದ್ದೇಶದಿಂದ ಈ ರೀತಿ ದಾಳಿಗಳ ಪ್ರಯತ್ನ ನಡೆಸಲಾಗಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಮುಂದೆ ಓದಿ.

ಚುನಾವಣೆ ವೇಳೆ ಮೊದಲ ಸಲವಲ್ಲ
'ಇದು ರಾಜಕೀಯ ಪ್ರೇರಿತ ದಾಳಿ, ಇದನ್ನು ಖಂಡಿಸುತ್ತೇನೆ. ನಮ್ಮ ನಾಯಕರು ಚುನಾವಣೆಗೆ ಸಿದ್ಧತೆ ನಡೆಸಿದ್ದರು. ಚುನಾವಣೆ ಸಂದರ್ಭದಲ್ಲಿ ಸಿಬಿಐ ದಾಳಿ ನಡೆಸುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಚುನಾವಣೆ ಸಂದರ್ಭದಲ್ಲಿಯೇ ದಾಳಿ ನಡೆದಿದೆ' ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

ಯಾರಿಗೂ ಮುಗಿಸಲು ಸಾಧ್ಯವಿಲ್ಲ
ಒಳ್ಳೆ ಟೈಂ ನೋಡಿಕೊಂಡು ಸಿಬಿಐ ದಾಳಿ ಮಾಡಿದ್ದಾರೆ. ಇಂತಹ ದಾಳಿಗಳಿಂದ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅನ್ನು ಮುಗಿಸುತ್ತೇವೆ ಎಂದು ಬಿಜೆಪಿಯವರು ಅಂದುಕೊಂಡರೆ, ಬಿಜೆಪಿಯನ್ನು ಮುಗಿಸುತ್ತೇವೆ ಎಂದು ಕಾಂಗ್ರೆಸ್ ಅಂದುಕೊಂಡರೆ ಅದು ಸಾಧ್ಯವಾಗುವುದಿಲ್ಲ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾರನ್ನು ಮುಗಿಸಬೇಕು ಎಂಬುದನ್ನು ಮತದಾರ ತೀರ್ಮಾನಿಸಬೇಕು ಎಂದಿದ್ದಾರೆ.

ಕಳೆದ ವರ್ಷವೇ ಅನುಮತಿ ನೀಡಲಾಗಿತ್ತು
ಒಂದು ತಿಂಗಳಲ್ಲಿ ಉಪ ಚುನಾವಣೆ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಸಿಬಿಐ ತನಿಖೆ ನಡೆಸಲು ಬಿಜೆಪಿ ಸರ್ಕಾರ ಒಂದು ವರ್ಷದ ಹಿಂದೆಯೇ ಅನುಮತಿ ನೀಡಿತ್ತು. ಆದರೆ ಆಗಿನಿಂದ ಸುಮ್ಮನಿದ್ದ ಸಿಬಿಐ ಈಗ ಚುನಾವಣೆ ಹೊತ್ತಿಲಲ್ಲಿ ದಾಳಿ ಮಾಡಿದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಅಹ್ಮದ್ ಪಟೇಲ್ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಕಾನೂನು ಬದ್ಧ ಹೋರಾಟ ಮಾಡುತ್ತೇವೆ
ಕಾಂಗ್ರೆಸ್ ನಾಯಕರನ್ನು ಚುನಾವಣೆ ಸಂದರ್ಭದಲ್ಲಿ ಕಟ್ಟಿಹಾಕುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ನಾಯಕರಿಗೆ ಕಾನೂನಿನ ಮೇಲೆ ನಂಬಿಕೆ ಇದೆ. ಹೀಗಾಗಿ ಕಾನೂನು ಬದ್ಧವಾಗಿಯೇ ಅವರು ಹೋರಾಟ ಮಾಡಲಿದ್ದಾರೆ. ಚುನಾವಣೆಯಲ್ಲಿ ಸೋಲಿನ ಭಯದಿಂದ ಈ ದಾಳಿ ನಡೆಸಲಾಗಿದೆಯೇ ಎಂಬ ಬಗ್ಗೆ ಬಿಜೆಪಿ ಮುಖಂಡರನ್ನೇ ಕೇಳಬೇಕು ಎಂದು ಹೇಳಿದ್ದಾರೆ.












Click it and Unblock the Notifications