CT Ravi v/s Hebbalkar: ಸಿ.ಟಿ ರವಿಗೆ ದೊಡ್ಡ ಸವಾಲ್ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್
ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು ಸದನದಲ್ಲಿ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎನ್ನುವ ಪ್ರಕರಣವು ರಾಜಕೀಯ ಪಕ್ಷಗಳ ಯುದ್ಧಕ್ಕೆ ಕಾರಣವಾಗಿದೆ. ಸಿಟಿ ರವಿ ನಾನು ಆ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರೆ, ರವಿ ಅವರ ಮಾತಿಗೆ ಸಾಕ್ಷಿ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿಗೆ ಸವಾಲೊಂದನ್ನು ಹಾಕಿದ್ದಾರೆ.
ಸಿಟಿ ರವಿ ಅವರು ನಿಜವಾಗಿಯೂ ಆ ರೀತಿ ಪದ ಬಳಕೆ ಮಾಡಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ದೇವರ ಮುಂದೆ ಪ್ರಮಾಣ ಮಾಡಿ ಹೇಳಲಿ, ನಾನು ನನ್ನ ಕುಟುಂಬ ಸಮೇತವಾಗಿ ಬಂದು ಆಣೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ. ಹೆಣ್ಣಿಗೆ ಅವಮಾನ ಮಾಡಿದ್ದರಿಂದಲೇ ಮಹಾಭಾರತ ಹಾಗೂ ರಾಮಾಯಣ ನಡೆದಿದೆ. ಆಗಿನಿಂದಲೂ ಹೆಣ್ಣಿಗೆ ಅವಮಾನ ಪ್ರತಿಯೊಬ್ಬರಿಗೂ ಶಿಕ್ಷೆ ಆಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ಕೊಟ್ಟಿದ್ದಾರೆ.

ಸಿ.ಟಿ.ರವಿ ಹೇಳಿಕೆಗೆ ಸಾಕ್ಷಿ ಇದೆ. ಇಲ್ಲದಿದ್ರೆ ಸುಮ್ಮನೆ ಅವರ ಬಗ್ಗೆ ನಾನು ನಾಟಕ ಮಾಡಲು ಸಾಧ್ಯವೇ? ಇಡೀ ಸದನದಲ್ಲಿ ನಿಂತು ಅವರ ಮೇಲೆ ಆರೋಪ ಮಾಡಲು ಸಾಧ್ಯನಾ? ಅಥವಾ ಈ ವಿಚಾರದಲ್ಲಿ ಸುಳ್ಳು ಹೇಳೋದಕ್ಕೆ ನಂಗೇನು ಹುಚ್ಚೇ? ಇದರಿಂದ ನಾನು ರಾಜಕಾರಣದಲ್ಲಿ ಪಡೆಯುವುದು ಏನಿದೆ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹರಿಹಾಯ್ದಿದ್ದಾರೆ.
ರವಿ ಅವರು ಆ ಅಶ್ಲೀಲ ಪದದ ಬದಲಿಗೆ ಫ್ರಸ್ಟ್ರೇಷನ್ ಎನ್ನುವ ಪದ ಹೇಳಿದ್ದಾಗಿ ಸ್ಪಷ್ಟನೆ ನೀಡುತ್ತಿದ್ದಾರೆ. ಫ್ರಸ್ಟ್ರೇಟ್ ಪದಕ್ಕೂ ಅವರು ಹೇಳಿದ ಪದಕ್ಕೂ ವ್ಯತ್ಯಾಸ ಇಲ್ಲವೇ? ಅವರು ಏನು ಹೇಳಿದ್ದಾರೆ ಅನ್ನೋದಕ್ಕೆ ನನ್ನ ಬಳಿ ಆಡಿಯೋ, ವಿಡಿಯೋ ಇರುವ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.

ಈ ಹೆಬ್ಬಾಳ್ಕರ್‌ನ ನೋಡಿ ರಾಜಕಾರಣಕ್ಕೆ ಬರಬೇಕು ಅಂತ ಸಾವಿರಾರು ಜನ ಮುಂದಾಗಿದ್ದಾರೆ. ಹಾಗಿರುವಾಗ ನನಗೆ ಆದ ಅನ್ಯಾಯಕ್ಕೆ ನಾನೇ ಹೋರಾಟ ಮಾಡದಿದ್ದರೆ ಅದು ನನ್ನ ಆತ್ಮಸಾಕ್ಷಿಗೆ ಮಾಡಿಕೊಳ್ಳುವ ವಂಚನೆ. ನಾನು ಎಲ್ಲ ಸಂಘರ್ಷಗಳು ಹಾಗೂ ಅವಮಾನವನ್ನು ಮೆಟ್ಟಿನಿಂತು ಬೆಳೆದಿದ್ದೇವೆ. ಆದರೆ, ಸದನದಲ್ಲಿ ನನಗಾದ ನೋವಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸಂಕಟ ಹೊರಹಾಕಿದ್ದಾರೆ.
ಸಿ.ಟಿ.ರವಿ ಅವರು ಈ ಹಿಂದೆ ಅಪಘಾತ ಮಾಡಿದ್ದ ವಿಡಿಯೋ ನನ್ನ ಬಳಿ ಇದೆ. ನಾನು ಅವರಂತೆ ಪ್ರತಿಯೊಂದಕ್ಕೂ ಎದ್ದು ನಿಂತು ಮಾತನಾಡುವವಳಲ್ಲ. ನಾನು ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಹಾದಿಯಲ್ಲಲ್ಲ ಎಂದು ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ.
ಸಿ.ಟಿ.ರವಿ ಅವರು ತಮ್ಮ ಮೇಲಿನ ಆರೋಪ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ, ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಸುಮಾರು 7 ಪುಟಗಳ ದೂರಿನಲ್ಲಿ ಸಿ.ಟಿ.ರವಿ ಅವರು ಸದನದಲ್ಲಿ ಏನಾಯಿತು? ಪೊಲೀಸರು ತಮಗೆ ಏನೆಲ್ಲ ಮಾಡಿದರು? ಎಂಬುದರ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ ದೂರಿನ ಮೇರೆಗೆ ಬೆಳಗಾವಿ ಪೊಲೀಸರು ತಡರಾತ್ರಿ ಸಿ.ಟಿ.ರವಿ ಅವರನ್ನು ಬಂಧಿಸಿದ್ದರು, ಬಳಿಕ ಅವರನ್ನು ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೂ ಸಿ.ಟಿ.ರವಿ ದೂರು ನೀಡಿದ್ದಾರೆ.












Click it and Unblock the Notifications