ಶಾಲೆಗೆ 25 ಎಕರೆ ದಾನ ಮಾಡಲು ಅವರೇನು ಮಹಾರಾಜರ ವಂಶಸ್ಥರಾ?: ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ರಾಮನಗರ, ನವೆಂಬರ್ 09: ಶಾಲೆಗೆ 25 ಎಕರೆ ದಾನ ನೀಡೀದ್ದೇನೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಅಷ್ಟು ಜಮೀನು ಕೊಡಲಿಕ್ಕೆ ಅವರೇನು ಮಹಾರಾಜರ ವಂಶಸ್ಥರಾ? ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ನಡುವೆ ಮುಕುಂದ ಗ್ರಾಮದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದ ಅವರು, ಅವರು ಎಲ್ಲಿ ಜಮೀನು ಕೊಟ್ಟಿದ್ದಾರೆ? 25 ಎಕರೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ, ನಾನೂ ಸಂತೋಷ ಪಡುತ್ತೇನೆ. ಸುಳ್ಳು ಹೇಳಲು ಇತಿ ಮಿತಿ ಇರಬೇಕು. ನಾನು ಇವರ ರೀತಿ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ ಎಂದು ಬೋರ್ಡ್ ಹಾಕಿಕೊಂಡಿಲ್ಲ. ಆದರೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಲ್ಲ ಅಭಿವೃದ್ದಿ ಮಾಡಿದ್ದೇನೆ ಎಂಬುದು ಜನತೆಗೆ ಗೊತ್ತಿದೆ ಎಂದರು.

ನಾನು ಸಿಎಂ ಆಗುವ ಮೊದಲು ರಾಜ್ಯದಲ್ಲಿ ಎಷ್ಟು ಕಾಲೇಜು, ಹೈಸ್ಕೂಲ್ ಗಳು ಇದ್ದವು? ನನ್ನ 20 ತಿಂಗಳ ಆಡಳಿತದಲ್ಲಿ ಎಷ್ಟಾದವು ಎಂಬುದಕ್ಕೆ ದಾಖಲೆಗಳೇ ಮಾಹಿತಿ ಕೊಡುತ್ತವೆ. ಯಾರಾದರೂ ತೆಗೆದು ನೋಡಬಹುದು. ಶಿಕ್ಷಣ ಕ್ಷೇತ್ರಕ್ಕೆ ಈ ವ್ಯಕ್ತಿಯ ಕೊಡುಗೆ ಏನು? ಸಾತನೂರು, ಕನಕಪುರ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ. ಪಟ್ಟಿ ಮಾಡಲಿ. ಇಷ್ಟು ವರ್ಷ ಆಡಳಿತ ಮಾಡಿರುವವರಿಗೆ ಅವರ ತವರೂರು ದೊಡ್ಡಾಲಹಳ್ಳಿಯಲ್ಲಿ ಮತಗಳ ಲೀಡ್ ಬರುತ್ತಿಲ್ಲ ಯಾಕೆ? ಇವರು 25 ಎಕರೆ ಕೊಟ್ಟಿದ್ದಾರೋ ಅಥವಾ 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ.
ನಾನು ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸರ್ಕಾರ ಕಿತ್ತೊಗೆಯುವುದು ಎಂದರೆ ಕಡಲೆಕಾಯಿ ಕಿತ್ತ ಹಾಗಲ್ಲ ಎಂಬ ಡಿಕೆಶಿ ಹೇಳಿಕೆ ಬಗ್ಗೆ ವರದಿಗಾರರು ಗಮನ ಸೆಳೆದಾಗ, ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೆ ಕಿತ್ತೊಗೆಯುತ್ತೇವೆ ಎಂದಿರೋದು. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನಷ್ಟೇ ದೇವೇಗೌಡರು ಹೇಳಿದ್ದಾರೆ ಎಂದರು.
ಮೇಕೆದಾಟಿಗೆ ಪರ್ಮಿಷನ್ ಕೊಟ್ಟರೆ ಮೂರೇ ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ, ಮೊದಲು ಅವರ ಮಿತ್ರಪಕ್ಷ ಡಿಎಂಕೆಯನ್ನು ಒಪ್ಪಿಸಲಿ. ಕೇಂದ್ರ ಸರ್ಕಾರವನ್ನು ಒಪ್ಪಿಸುವ ಭಾರ ನಮ್ಮದು. ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲ, ಅದರ ಬಗ್ಗೆ ಅವರು ಮೊದಲು ಬಾಯಿ ತೆರೆಯಲಿ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಜನರ ಒಲವು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಭಿನ್ನ ಪಕ್ಷಗಳಿಂದ ಐದು ಬಾರಿ ಶಾಸಕರಾಗಿ ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಈಗ ಒಬ್ಬ ಯುವಕ ಸ್ಪರ್ಧೆ ಮಾಡಿದ್ದಾನೆ, ಆತನನ್ನು ಒಮ್ಮೆ ನೋಡೋಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಕೂಡ ಈ ಬಾರಿ 122 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ನಿಖಿಲ್ 190 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ದೇವೇಗೌಡರು, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ದಾಳಿ ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿಖಿಲ್ ಗೆಲ್ಲುವುದು ಖಚಿತ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.












Click it and Unblock the Notifications