ಚಿತ್ರದುರ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಎಚ್‌ಡಿಕೆ!
ಚಿತ್ರದುರ್ಗ, ಜನವರಿ 21 : 2018ರ ಚುನಾವಣೆಗೆ ಚಿತ್ರದುರ್ಗ ನಗರ ಕ್ಷೇತ್ರದಿಂದ ಉದ್ಯಮಿ ಕೆ.ಸಿ.ವೀರೇಂದ್ರ ಅವರು ಅಭ್ಯರ್ಥಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಕೆ.ಸಿ.ವೀರೇಂದ್ರ ಅವರು ಹಿರಿಯ ನಟ ದೊಡ್ಡಣ್ಣ ಅವರ ಅಳಿಯ.
ಕೊಪ್ಪಳದಲ್ಲಿ ಶನಿವಾರ ಬಿ.ಕಾಂತರಾಜು ಮತ್ತು ಕೆ.ಸಿ.ವೀರೇಂದ್ರ ಅವರ ಸಮ್ಮುಖದಲ್ಲಿ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದರು. ಬಿ.ಕಾಂತರಾಜು ಅವರು ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿತ್ತು. ಅವರು ಸ್ಪರ್ಧಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಕೆ.ಸಿ.ವೀರೇಂದ್ರ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.
ಕೊಪ್ಪಳ ಹೊರವಲಯದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದುರ್ಗದಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, 'ಚಿತ್ರದುರ್ಗದ ಅಭ್ಯರ್ಥಿ ಕೆ.ಸಿ.ವೀರೇಂದ್ರ ಅವರಿಗೆ ಚಿತ್ರದುರ್ಗದ ಮತದಾರರು ಆಶೀರ್ವಾದ ಮಾಡಬೇಕು' ಎಂದು ಮನವಿ ಮಾಡಿದರು.
ಕೆ.ಸಿ.ವೀರೇಂದ್ರ (ಪಪ್ಪಿ) ಅವರು ಮೂಲತಃ ಚಳ್ಳಕೆರೆಯವರು. ಆದರೆ, ಚಿತ್ರದುರ್ಗ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಉದ್ಯಮಿ ಆಗಿರುವ ವೀರೇಂದ್ರ ಅವರು, ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಜಿಲ್ಲೆಯ ಜನರಿಗೆ ಚಿರಪರಿಚಿತರು.

ಕುಮಾರಸ್ವಾಮಿ ಹೇಳಿದ್ದೇನು?
'ಚಿತ್ರದುರ್ಗ ಕ್ಷೇತ್ರದಲ್ಲಿ ನಾವು ಗೆಲ್ಲಲೇಬೇಕು. ಕಾಂತರಾಜು ಅವರನ್ನು ಅಭ್ಯರ್ಥಿಯಾಗಿ ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಸ್ವತಃ ಕಾಂತರಾಜು ಅವರೇ ಬೇಡ ಎಂದಿದ್ದಾರೆ. ಎಲ್ಲಾ ಮುಖಂಡರು ಸೇರಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ, ವೀರೇಂದ್ರ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗುತ್ತಿದೆ' ಎಂದರು.

ಇದೇ ಮೊದಲ ಬಾರಿಗೆ ಘೋಷಣೆ
ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರಕ್ಕೆ ಯಾವ ಪಕ್ಷವೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಚಿತ್ರದುರ್ಗ ನಗರ ಕ್ಷೇತ್ರಕ್ಕೆ ಜೆಡಿಎಸ್ ಕೆ.ಸಿ.ವೀರೇಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ನಟ ದೊಡ್ಡಣ್ಣ ಅಳಿಯ
ಕೆ.ಸಿ.ವೀರೇಂದ್ರ ಅವರು ಮೂಲತಃ ಚಳ್ಳಕೆರೆಯವರು. ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ. ಹಲವು ಸಮಾಜ ಸೇವಾ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು
ಕೆ.ಸಿ.ವೀರೇಂದ್ರ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿತ್ತು. ಈಗ ಕುಮಾರಸ್ವಾಮಿ ಅವರ ಘೋಷಣೆ ಬಳಿಕ ಅದು ಅಧಿಕೃತವಾಗಿದೆ.

ಬಿಜೆಪಿ ವಶದಲ್ಲಿರುವ ಕ್ಷೇತ್ರ
2013ರ ಚುನಾವಣೆಯಲ್ಲಿ ಚಿತ್ರದುರ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯ ಜಿ.ಎಚ್.ತಿಪ್ಪಾರೆಡ್ಡಿ ಅವರು 62,228 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಸವರಾಜನ್ ಅವರು 35,510 ಮತ, ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಮಂಜುನಾಥ್ 30,729 ಮತ ಪಡೆದಿದ್ದಾರೆ.












Click it and Unblock the Notifications