KSRTC ವರ್ಗಾವಣೆ: ಗುಡ್ ನ್ಯೂಸ್, ನೌಕರರ ಅಂತರ ನಿಗಮ ವರ್ಗಾವಣೆ ಘೋಷಣೆ, ಗಮನಿಸಿ
ಬೆಂಗಳೂರು, ಜುಲೈ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಸಾರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ನಿಗದಿತ ಕಾರ್ಮಿಕರಿಗೆ ಕಳೆದ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಿಸಿರುವುದಾಗಿ ತಿಳಿಸಿದೆ.
ಹೌದು, ನಿಗಮದ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ ಜುಲೈ 05ರ ಬೆಳಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದೆ. ಇದು ದಿನಾಂಕ 2024 ಡಿಸೆಂಬರ್ 31 ರ ಸಂಜೆ 5:30 ಗಂಟೆವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ಸಂಸ್ಥೆ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ.ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರಿಗೆ ಅಂತರ ನಿಗಮ ಪರಸ್ಪರ 958 ನೌಕರರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 616 ನೌಕರರು ಅವರ ಕೋರಿಕೆ ಮೇರೆಗೆ ಅಂತರ ನಿಗಮ ಪರಸ್ಪರ ವರ್ಗಾವಣೆಗೊಂಡಿರುತ್ತಾರೆ.
ಸದರಿ ಪರಸ್ಪರ ವರ್ಗಾವಣೆ ಆದೇಶವನ್ನು ksrtc.karnataka.gov.in ವೆಬ್‌ಸೈಟ್‌ನಲ್ಲಿ ದಿನಾಂಕ 2024 ಜುಲೈ 06 ರಂದು ಪ್ರಕಟಿಸಲಾಗಿದೆ.
ನೌಕರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಸದರಿ ಆದೇಶಕ್ಕೆ ದಿನಾಂಕ ಜುಲೈ 06ರಿಂದ ದಿನಾಂಕ ಜುಲೈ 10ರ ಸಂಜೆ 5.30 ಗಂಟೆವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶ ನೀಡಲಾಗಿದೆ. ನೌಕರರು ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗದ ಆಡಳಿತಾಧಿಕಾರಿಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು. ನೌಕರರು ವೈಯಕ್ತಿಕವಾಗಿ ಅಥವಾ ಅಂಚೆಯ ಮೂಲಕ ಕೇಂದ್ರ ಕಛೇರಿಗೆ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC)ಯ ಸಾವಿರಾರು ನೌಕರರ ಬಹುದಿನಗಳ ಅಂತರ ನಿಗಮ ವರ್ಗಾವಣೆಯ ಕನಸು ನನಸಾಗುವ ದಿನಗಳು ಸನಿಹವಾಗಿವೆ. ಅರ್ಹರು ಈ ಕೂಡಲೇ ನಿಗದಿತ ಸಮಯದೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.












Click it and Unblock the Notifications