KSRTC: ಮೃತ ನೌಕರರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ವಿತರಣೆ
ಬೆಂಗಳೂರು, ಫೆಬ್ರವರಿ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಸಾರಿಗೆ ಇಲಾಖೆ 3 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಿತ್ತು. ವಿವಿಧ ಕಾರಣಗಳಿಗೆ ಮೃತಪಟ್ಟ ನಿಗಮದ ನೌಕರರ ಕುಟುಂಬಗಳಿಗೆ ಬುಧವಾರ 1 ಕೋಟಿ ಮತ್ತು 10 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿಗಳ ಅವಲಂಭಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಸಲುವಾಗಿ ಪರಿಹಾರ ಯೋಜನೆ ಜಾರಿಗೆ ತಂದಿದೆ. ನೌಕರರು ಕರ್ತವ್ಯದಲ್ಲಿದ್ದಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ ಅವರಿಗೆ/ಕುಟುಂಬಕ್ಕೆ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆ ಈಗಾಗಲೇ ಜಾರಿಗೆ ಮಾಡಿದೆ.

16 ಸಿಬ್ಬಂದಿ ಕುಟುಂಬಕ್ಕೆ ರೂ.10 ಲಕ್ಷ ವಿತರಣೆ
2023ರ ನವೆಂಬರ್ 1ರಿಂದಲೇ 10 ಲಕ್ಷ ಪರಿಹಾರ ಮೊತ್ತ ಯೋಜನೆ ಜಾರಿಗೆ ಬಂದಿದೆ. ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಮೃತಪಟ್ಟ 16 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಲಾ ರೂ. 10 ಲಕ್ಷ ಹಾಗೂ ಅವರಿಗೆ ನಿಗಮದಿಂದ ಪಾವತಿಸಬೇಕಾದ ಭವಿಷ್ಯನಿಧಿ, ಉಪದನ ಚೆಕ್ ಅನ್ನು ಅಧಿಕಾರಿಗಳು ವಿತರಿಸಿದರು.
ಇದರೊಂದಿಗೆ ನಿಗಮದ ಅಧ್ಯಕ್ಷ ಎಸ್ಆರ್. ಶ್ರೀನಿವಾಸ್ (ವಾಸು) ಅವರು ಸೇವೆಯಲ್ಲಿರುವಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಭಿತರಿಗೆ ರೂ. 1 ಕೋಟಿ ಪರಿಹಾರ ಮೊತ್ತದ ಚೆಕ್ ಸಹ ಇದೇ ವೇಳೆ ಕುಟುಂಬಸ್ಥರಿಗ ನೀಡಿದರು.
ಮೃತರ ಕುಟುಂಬದ ಅರ್ಹರಿಗೆ ನೌಕರಿ ನೀಡಲು ಕ್ರಮ
ಇದೇ ವೇಳೆ ಮಾತನಾಡಿದ ಅಧ್ಯಕ್ಷ ಎಸ್ಆರ್. ಶ್ರೀನಿವಾಸ್ (ವಾಸು) ಅವರು ಅವರು, ನಿಗಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅತೀ ಶ್ರಮಜೀವಿಗಳು. ನಿಗಮವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದ ಸಂತಸ ತಂದಿದೆ ಎಂದರು.

ಈ ಕಲ್ಯಾಣ ಯೋಜನೆಗಳ ಅನುಷಾನಗೊಳಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು, ಆಡಳಿತ ಮಂಡಳಿಯನ್ನು ಅವರು ಅಭಿನಂದಿಸಿದರು. ಕುಟುಂಬಸ್ಥರು ತಮಗೆ ದೊರೆತಿರುವ ಪರಿಹಾರ ಹಣವನ್ನು ಮುಂದಿನ ಜೀವನ ಮುಡಿಪಾಗಿಸಬೇಕು. ಸೂಕ್ತವಾಗಿ ವಿನಿಯೋಗಿಸಿ ಜೀವನ ನಡೆಸಬೇಕು. ಇನ್ನೂ ಅವಲಂಭಿತರಲ್ಲಿ ನೌಕರಿಗೆ ಅರ್ಹರಿರುವವರಿಗೆ ವಿಳಂಬ ಮಾಡದೇ ನೌಕರಿ ಒದಗಿಸಲು ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
12 ನೌಕರರ ಕುಟುಂಬಕ್ಕೆ 1 ಕೋಟಿ ರೂ.
ಪರಿಹಾರ ಯೋಜನೆ ಜಾರಿ ಬಳಿಕ ನಿಗಮ ವ್ಯಾಪ್ತಿಯಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಈವರೆಗೆ 12 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತ ವಿತರಿಸಲಾಗಿದೆ.
ಹಾಸನ ವಿಭಾಗದ ಅರಕಲಗೂಡು ಘಟಕದ ರಾಜೇಶ್ ಡಿ.ಸಿ, ಚಾಲಕ-ಕಂ-ನಿರ್ವಾಹಕ (ಬಿಲ್ಲೆ ಸಂಖ್ಯೆ: 1447) ಇವರು ಕಳೆದ ವರ್ಷ ಜುಲೈ 29ರಂದು ಮೃತಪಟ್ಟಿರುತ್ತಾರೆ. ಮೃತರ ಅವಲಂಭಿತರಿಗೆ ರೂ.1 ಕೋಟಿಗಳ ಅಪಘಾತ ಪರಿಹಾರ ವಿಮಾ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್‌ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ ರೂ.14,19,980/- ಪರಿಹಾರ ನೀಡಲಾಗಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications