ಏ.7ರಿಂದ ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು: ಶಿವಯೋಗಿ ಕಳಸದ್
ಬೆಂಗಳೂರು, ಏಪ್ರಿಲ್ 5: ಏಪ್ರಿಲ್ 7ರಿಂದ ಎಲ್ಲ ಸಾರಿಗೆ ನೌಕರರು ಕಡ್ಡಾಯವಾಗಿ ಹಾಜರಿರಬೇಕೆಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶಿಸಿದ್ದಾರೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ ಉಳಿದ ರಜೆಯನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಏಪ್ರಿಲ್ 7ರಿಂದ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಎಂಡಿ ಶಿವಯೋಗಿ ಕಳಸದ್, ಬೇಕಾಬಿಟ್ಟಿ ರಜೆ ತೆಗೆದುಕೊಂಡರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಏಪ್ರಿಲ್ 7ರಿಂದ ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಮಾಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ನೌಕರರ ಒಕ್ಕೂಟ ಎಚ್ಚರಿಕೆ ನೀಡಿತ್ತು.

ಸಾರಿಗೆ ನೌಕರರ 8 ಬೇಡಿಕೆಗಳು ಈಡೇರಿವೆ ಎಂದು ಸಚಿವ ಲಕ್ಷ್ಮಣ ಸವದಿ ಮಾಧ್ಯಮ ಪ್ರಕಟಣೆ ನೀಡಿದ ಹಿನ್ನೆಲೆಯಲ್ಲಿ ಸಾರಿಗೆ ಸಚಿವರ ಪ್ರಕಟಣೆಗೆ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್, ನಾವು ಕೇಳಿರುವ ರೀತಿಯಲ್ಲಿ ಯಾವುದೇ ಬೇಡಿಕೆ ಈಡೇರಿಸಿಲ್ಲ. ಸಾರಿಗೆ ನೌಕರರು ಕೇಳಿರುವ ರೀತಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಏ.7ರಂದು ಸಾರಿಗೆ ಸೇವೆ ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆದರೆ, ಏಪ್ರಿಲ್ 7ರಿಂದ ಎಲ್ಲ ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಿರಬೇಕೆಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications