Bus Pass: ವಿದ್ಯಾರ್ಥಿಗಳೇ ಗಮನಿಸಿ: ಉಚಿತ ಬಸ್ ಪಾಸ್ ವಿತರಣೆ, ನಿಮ್ಮ ಬಾಕಿ ಹಣ ಪಡೆಯುವ ವಿವರ ಇಲ್ಲಿದೆ
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇಂದಿನಿಂದಲೇ (ಜೂನ್ 12) ಉಚಿತ ಬಸ್ ಪಾಸ್‌ಗಳ ವಿತರಣೆ ಅಧಿಕೃತವಾಗಿ ಆರಂಭವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಶುಕ್ರವಾರದಿಂದಲೇ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪಾಸ್ ಕೈಸೇರಲಿದೆ.
ನಾಲ್ಕೂ ಸಾರಿಗೆ ನಿಗಮಗಳಲ್ಲಿ ಉಚಿತ ಪ್ರಯಾಣದ ಅವಕಾಶ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ, ಕರ್ನಾಟಕದಾದ್ಯಂತ ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸಿಗಲಿದೆ. ವಿದ್ಯಾರ್ಥಿಗಳು ರಾಜ್ಯದ ಪ್ರಮುಖ ನಾಲ್ಕು ರಸ್ತೆ ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
ವಿದ್ಯಾರ್ಥಿಗಳು ತಾವಿರುವ ಸ್ಥಳದಿಂದಲೇ, ಸೈಬರ್ ಸೆಂಟರ್‌ಗಳು ಅಥವಾ ತಮ್ಮ ಶಾಲೆ/ಕಾಲೇಜುಗಳ ಮೂಲಕ ಇ-ಆಡಳಿತ ನಿರ್ದೇಶನಾಲಯದ ಸೇವಾಸಿಂಧು ಅಧಿಕೃತ ವೆಬ್‌ಸೈಟ್ ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ https://sevasindhuservices.karnataka.gov.in/buspassservices/ ಲಿಂಕ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಸುಗಮವಾಗಿ ನಡೆಯಲು ಕೆಎಸ್‌ಆರ್‌ಟಿಸಿ ರಾಜ್ಯಾದ್ಯಂತ ಒಟ್ಟು 123 ವಿಶೇಷ ಪಾಸ್ ವಿತರಣಾ ಕೌಂಟರ್‌ಗಳನ್ನು ತೆರೆದಿದೆ. ಈ ಎಲ್ಲ ಕೇಂದ್ರಗಳ ಸಂಪೂರ್ಣ ವಿಳಾಸ ಮತ್ತು ಮಾಹಿತಿಯನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ https://ksrtc.karnataka.gov.in/studentpass ನಲ್ಲಿ ಪ್ರಕಟಿಸಲಾಗಿದೆ.
ಗಡಿಭಾಗದ ವಿದ್ಯಾರ್ಥಿಗಳಿಗೂ ಸಿಗಲಿದೆ ಸೌಲಭ್ಯ
ಈ ಬಾರಿ ಯೋಜನೆಯನ್ನು ಗಡಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಿರುವುದು ವಿಶೇಷವಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆರಾಜ್ಯಗಳ ಗಡಿಭಾಗದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ. ಅದೇ ರೀತಿ, ನೆರೆರಾಜ್ಯಗಳಲ್ಲಿ ವಾಸವಿದ್ದು ಕರ್ನಾಟಕದ ಗಡಿಭಾಗದ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಸಹ ಈ ಉಚಿತ ಬಸ್ ಪಾಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇನ್ನುಳಿದಂತೆ ವಿದ್ಯಾರ್ಥಿ ಪಾಸ್‌ಗೆ ಇರುವ ಹಳೆಯ ಅರ್ಹತೆ, ಶೈಕ್ಷಣಿಕ ನಿಯಮಗಳು ಹಾಗೂ ಕಿಲೋಮೀಟರ್ ದೂರದ ಮಿತಿಗಳು ಯಥಾವತ್ತಾಗಿ ಮುಂದುವರಿಯಲಿವೆ.
ಹಣ ನೀಡಿದ್ರೆ 15 ದಿನಗಳಲ್ಲೇ ವಾಪಸ್
ಚಾಲ್ತಿ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ದೊಡ್ಡ ರಿಲೀಫ್ ನೀಡಿದೆ. ಸದ್ಯಕ್ಕೆ ಅವರು ಹೊಂದಿರುವ ಪಾಸ್‌ಗಳು ಮಾನ್ಯತೆ ಪಡೆದಿರುತ್ತವೆ. ಆದರೆ ಆ ವಿದ್ಯಾರ್ಥಿಗಳು ಪಾಸ್‌ಗಾಗಿ ಪಾವತಿಸಿರುವ ಸಂಪೂರ್ಣ ಶುಲ್ಕವನ್ನು ಮುಂದಿನ 15 ದಿನಗಳ ಒಳಗಾಗಿ ಮರುಪಾವತಿ ಮಾಡಲು ಸಾರಿಗೆ ನಿಗಮ ನಿರ್ಧರಿಸಿದೆ. ಈ ಹಣ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದ ಆನ್‌ಲೈನ್ ಅಥವಾ ಆಫ್‌ಲೈನ್ ಮಾರ್ಗಸೂಚಿಗಳನ್ನು ಕೆಎಸ್‌ಆರ್‌ಟಿಸಿ ಶೀಘ್ರದಲ್ಲೇ ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.













Click it and Unblock the Notifications