KSRTC Strike: ಬೇಡಿಕೆ ಈಡೇರಿಕೆಗೆ ಮಾರ್ಚ್ 2ರ ಗಡುವು: ಮುಷ್ಕರ ವಾಪಾಸ್ ಪಡೆದ ಸಾರಿಗೆ ನೌಕರರು
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ 'ಬೆಂಗಳೂರು ಚಲೋ' ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರದ ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದೆ.
ಇಂದು ಗುರುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು, ಮುಖಂಡರು ಚರ್ಚಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದಿದೆ. ನಮ್ಮ ಎಲ್ಲ ಬೇಡಿಕೆಗಳು ಪೂರ್ಣವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು. ಅದಕ್ಕಾಗಿ ಹತ್ತು ದಿನಗಳ ಗಡುವು (ಮಾರ್ಚ್ 2) ನೀಡಲಾಗಿದೆ. ಸದ್ಯ ಮುಷ್ಕರ ಹಿಂಪಡೆದಿದ್ದರಿಂದ ಸಾರಿಗೆ ನೌಕರರ ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ. ನಾಳೆಯಿಂದ ಎಂದಿನಂತೆ ಬಸ್‌ಗಳು ಸಂಚರಿಸಲಿವೆ.

ಮಾರ್ಚ್ 2 ರಿಂದ ಉಪವಾಸ ಸತ್ಯಾಗ್ರಹ..
ರಾಜ್ಯ ಸರ್ಕಾರ ಮುಷ್ಕರ ಮುನ್ನಾದಿನ ಬುಧವಾರ (ಫೆ.18) 24 ತಿಂಗಳ ಹಿಂಬಾಕಿ ವೇತನ ಬಿಡುಗಡೆ ನಿರ್ಧರಿಸಿದ್ದರ ಜೊತೆಗೆ ವೇತನ ಪರಿಷ್ಕರಣೆಗೆ ಆದೇಶಿಸಿತ್ತು. ಇದರಿಂದ ಬೇಡಿಕೆಗಳ ಪೂರ್ಣ ಈಡೇರಿದಂತಾಗಿಲ್ಲ ಎಂದು ದೂರಿರುವ ಸಾರಿಗೆ ನೌಕರರು ಬೇಡಿಕೆಗಳು ಪೂರ್ಣವಾಗಿ ಈಡೇರಿಸಬೇಕು. 38 ತಿಂಗಳ ಹಿಂಬಾಕಿ ನೀಡಲೇಬೇಕು. ವೇತನ ಹೆಚ್ಚಿಸಬೇಕು. ಅದಕ್ಕಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲು ಹತ್ತು ದಿನ ಸಮಯ ನೀಡಿದ್ದು, ಅಷ್ಟರದಲ್ಲಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಮಾರ್ಚ್ 02ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಮುಷ್ಕರ ಮತ್ತೆ ಮುಂದುವರಿಯಲಿದೆ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ.
ಪ್ರತಿಭಟನೆ ವಾಪಸ್ ನಿರ್ಧಾರಕ್ಕೆ ನೌಕರರ ಆಕ್ರೋಶ
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಾಸ್ ಪಡೆದಿದ್ದಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನೌಕರರು ಆಕ್ರೋಶ ಹೊರ ಹಾಕಿದರು. ಬೇಡಿಕೆಗಳು ಪೂರ್ಣ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸಬಾರದೆಂದು ಒತ್ತಾಯಿಸಿದರು. ಪಟ್ಟು ಬಿಡದಂತೆ ಒತ್ತಾಯಿಸಿದರು. 'ಬೇಕೆ ಬೇಕು ನ್ಯಾಯಬೇಕು, ಗೆಲ್ಲವವರೆಗೂ ಹೋರಾಟ ಬೀಡಲ್ಲ' ಎಂದು ಘೋಷಣೆ ಕೂಗಿದರು. ಬಳಿಕ ಜಂಟಿ ಸಮಿತಿ ಸದಸ್ಯರು ಮಾತಿನಂತೆ ಒಲ್ಲದ ಮನಸ್ಸಿನಿಂದ ಮುಷ್ಕರ ವಾಪಾಸ್ ನಿರ್ಧಾರ ಸ್ವಾಗತಿಸಿದರು.
ವರ್ಷಗಳಿಂದ ಕಾದು ಕಾದು ಸುಸ್ತು!
ಏಳೆಂಟು ವರ್ಷಗಳಿಂದ ನಮ್ಮ ವೇತನ ಸಮಸ್ಯೆ, ಹಿಂಬಾಕಿ ನೀಡುವಂತೆ ಆಗ್ರಹಿಸುತ್ತಲೇ ಬಂದಿದ್ದೇವೆ. ಕಡಿಮೆ ಸಮಯದಲ್ಲಿ ದುಡಿಯುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ಖರ್ಚು, ವೆಚ್ಚ ಹೆಚ್ಚಾಗಿದೆ. ಬದುಕು ದಿನೇ ದಿನ ದುಸ್ತರವಾಗಿದೆ. ಹೀಗಾಗಿ ಮುಷ್ಕರ ನಮಗೆ ಅನಿವಾರ್ಯ. ಈ ಮಧ್ಯೆ ಸರ್ಕಾರ ಮೂಗಿಗೆ ತುಪ್ಪ ಸವರಿದಂತೆ ಆದೇಶ ಹೊರಡಿಸಿದೆ. ನಮ್ಮ ನಾಯಕರು, ಯೂನಿಯನ್ ಮುಖಂಡರ ಜೊತೆ ಮಾತನಾಡದೇ ಸರ್ಕಾರ ಏಕಪಕ್ಷಿಯವಾಗಿ ನಿರ್ಧಾರ ಪ್ರಕಟಿಸಿದೆ. 16 ತಿಂಗಳು, 24 ತಿಂಗಳ ಹಿಂಬಾಕಿ ನೀಡುವ ಕೆಲಸ ಮಾಡಬೇಡಿ. ನೌಕರರ ಮೇಲೆ ಕಾಳಜಿ ಇದ್ದರೆ ಸರ್ಕಾರ 38 ತಿಂಗಳ ಪೂರ್ಣ ಹಿಂಬಾಕಿ ಪಾವತಿಸಬೇಕು ಎಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ನೌಕರರು ಅಳಲು ತೋಡಿಕೊಂಡರು.
ಯಾವುದೇ ಕಾರಣಕ್ಕೂ ಮುಷ್ಕರ ನಿಲ್ಲಿಸಬಾರದು. ದಿನಪೂರ್ತಿ ದುಡಿದರೂ ಮಾಸಿಕ 30 ಸಾವಿರ ರೂಪಾಯಿ ಸಿಗುತ್ತದೆ. ಅದರಿಂದ ಸಂಸಾರ ನೀಗಿಸುವುದು ಕಷ್ಟವಾಗಿದೆ. ಸಾರಿಗೆ ಮುಖಂಡರು ಮುಷ್ಕರ ವಾಪಾಸ್ ಪಡೆಯಬಾರದಿತ್ತು. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ಕೆಲವು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications