KSRTC ಬಸ್ಸಿನಲ್ಲಿ ಹೆರಿಗೆ ಮಾಡಿಸಿ ತಾಯಿ-ಮಗು ಜೀವ ರಕ್ಷಿಸಿದ ಸಿಬ್ಬಂದಿಗೆ ನಗದು ಬಹುಮಾನ, ಅಭಿನಂದನೆ
ಬೆಂಗಳೂರು, ಮೇ 17: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿತ್ತಿದ್ದ ವೇಳೆ ಹೆರಿಗೆ ನೋವು ಕಾಣಸಿಕೊಂಡ ಮಹಿಳೆಗೆ ಸೂಕ್ತ ಸಮಯಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಚಿಕ್ಕಮಗಳೂರು ಘಟಕದ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ನಿಗಮ ಅಧಿಕಾರಿಗಳು ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.
— KSRTC (@KSRTC_Journeys) May 15, 2023
KSRTC ಯ ಚಿಕ್ಕಮಗಳೂರು ಘಟಕದ ಬಸ್ ಸಂಖ್ಯೆ KA 18 F 0865 ಬಸ್‌ನಲ್ಲಿ ಸಂಚಾರಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಸಿಕೊಂಡಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದು ತಾಯಿ ಮಗು ಜೀವ ಉಳಿಸಿದ ಅದೇ ಬಸ್‌ನ ಚಾಲಕಿ ಕಂ ನಿರ್ವಾಹಕಿ ಎಸ್. ವಸಂತಮ್ಮ (ಸಂಖ್ಯೆ 245) ಮತ್ತು ಚಾಲಕ ಎಚ್.ಬಿ. ಕುಮಾರಸ್ವಾಮಿ (ಸಂಖ್ಯೆ 199) ಅವರಿಗೆ ಸಾಕಷ್ಟು ರವರನ್ನು KSRTC ನಿಗದಮ ವ್ಯವಸ್ಥಾಪಕ ನಿರ್ದೇಶಕಿ ಜಿ .ಸತ್ಯವತಿ ಸನ್ಮಾನಿಸಿದ್ದಾರೆ. ಕ್ರಮವಾಗಿ ತಲಾ ರೂ. 5,000/- ಮತ್ತು ರೂ.2000/- ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಸತ್ಯವತಿಯ ಅವರು, ನಿಗಮದ ಚಾಲನಾ ಸಿಬ್ಬಂದಿಗಳು ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಉತ್ತಮ ನಡೆವಳಿಕೆ ತೋರಿ ಅವರ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ಪೈಕಿ ಮೊನ್ನ ನಡೆದ ಘಟನೆಯಲ್ಲಿ ನಿರ್ವಾಹಕಿ ವಸಂತಮ್ಮ ಯಾವುದೇ ರೀತಿಯಲ್ಲಿ ಹಿಂಜರಿಯದೆ ಧೈರ್ಯದಿಂದ ಸಕಾಲದಲ್ಲಿ ಮಹಿಳೆ ಮತ್ತು ಮಗುವನ್ನು ಕಾಪಾಡುವ ನಿಟ್ಟಿನಲ್ಲಿ ಧಿಟ್ಟತನೆ ತೋರಿದ್ದಾರೆ. ಜೀವ ರಕ್ಷಣೆಯ ಸದುದ್ದೇಶದಿಂದ, ಹತ್ತಿರದ ಆಸ್ಪತ್ರೆ ಇಲ್ಲದ ಕಾರಣ ಅವರಿಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ಮಗು ಮತ್ತು ತಾಯಿಯ ಪ್ರಾಣ ಉಳಿಸಿ ಮಾನವೀಯತೆ ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಶ್ಲಾಘಿಸಿದರು.
ಜೀವ ಉಳಿಸಲು ಕೈಗೊಂಡ ಕ್ರಮ ಮಾದರಿ
ಈ ರೀತಿಯ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಗಳ ಉಸ್ತುವಾರಿ ಅಗತ್ಯವಿದ್ದಾಗ್ಯೂ ಸಹ , ವಸಂತಮ್ಮ ರವರು ವಿವರಿಸಿದಂತೆ, ಸಮಯವಾಗಲಿ ಅಥವಾ ಆಸ್ಪತ್ರೆಯ ಸೌಲಭ್ಯವಾಗಲಿ ಆ ಕ್ಷಣಕ್ಕೆ ಲಭ್ಯವಾಗದ ಕಾರಣ ಅವರ ಕಾಳಜಿ ಮತ್ತು ಕೈಗೊಂಡ ಕ್ರಮ ಅನುಕರಣೀಯವಾಗಿದೆ ಎಂದರು.

ಇಂತಹ ಎಷ್ಟೋ ಸಂದರ್ಭಗಳಲ್ಲಿ ಜನರು ನಮಗ್ಯಾಕೆ ಇದೆಲ್ಲ ನಮ್ಮ ಮೇಲೆ ಅಪವಾದ ಬಂದರೂ ಬರಬಹುದ ಎಂದು ಯೋಚಿಸಿತ್ತಾರೆ. ನಮ್ಮ ಮೇಲೆಯೇ ಕ್ರಮ ತೆಗೆದುಕೊಂಡು ಬಿಡುತ್ತಾರೆ ಎಂದು ಯೋಚಿಸಿ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಇದರಿಂದ ಅದೆಷ್ಟೋ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ವಸಂತಮ್ಮರವರು ಹಾಗೇ ಯೋಚಿಸದೇ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡು ಮಾದರಿ ಆಗಿದ್ದಾರೆ.
ಘಟನೆಯ ವಿವರಣೆ
ಮೇ 15ರಂದು KSRTC ಬಸ್ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಕಾರ್ಯಾಚರಣೆಯ ವೇಳೆ ಉದಯಪುರ ಸಮೀಪವಿರುವ ಕೃಷಿ ಕಾಲೇಜು ಮಾರ್ಗವಾಗಿ ಸಾಗುತ್ತಿತ್ತು. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ 21 ವರ್ಷದ ಫಾತಿಮಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು.
ಈ ವೇಳೆ ಹತ್ತಿರ ಯಾವುದೇ ಆಸ್ಪತ್ರೆ ಇಲ್ಲದಿರುವುದು ಮತ್ತು ಗರ್ಭಿಣಿಗೆ ಸಹಾಯದ ಅಗತ್ಯವಿರುದನ್ನು ಮನಗಂಡು ಬಸ್‌ನ ಚಾಲಕಿ ವಸಂತಮ್ಮ ಅವರು ತಕ್ಷಣ ಬಸ್ಸಿನಲ್ಲಿದ್ದ ಒಟ್ಟು 45 ಜನ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಫಾತಿಮಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಸಂಬಂಧ ಚಾಲಕರು ಮತ್ತು ನಿರ್ವಾಹಕರಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.
ಅಭಿನಂದನಾ ಕಾರ್ಯಕ್ರಮದಲ್ಲಿ ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ)-ಇಲಾಖಾ ಮುಖ್ಯಸ್ಥರಾದ ಪ್ರಶಾಂತ್ ಕುಮಾರ್ ಮಿಶ್ರ, ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications