ಕೆಎಸ್ಆರ್‌ಟಿಸಿ ಮಾಸಿಕ, ದೈನಂದಿನ ಪಾಸುಗಳ ದರ ಏರಿಕೆ
ಬೆಂಗಳೂರು, ಮಾರ್ಚ್ 03 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರತಿದಿನ ಮತ್ತು ಮಾಸಿಕ ಪಾಸುಗಳ ದರವನ್ನು ಏರಿಕೆ ಮಾಡಿದೆ. ಫೆಬ್ರವರಿ 25ರಂದು ಪ್ರಯಾಣ ದರವನ್ನು ಶೇ 12ರಷ್ಟು ಏರಿಕೆ ಮಾಡಲಾಗಿತ್ತು.
ಮಾರ್ಚ್ 1ರಿಂದಲೇ ಅನ್ವಯವಾಗುವಂತೆ ಕೆಎಸ್ಆರ್‌ಟಿಸಿ ಮಾಸಿಕ ಮತ್ತು ದೈನಂದಿನ ಪಾಸುಗಳ ದರವನ್ನು ಏರಿಕೆ ಮಾಡಲಾಗಿದೆ. ಆರ್ಥಿಕ ದೃಷ್ಟಿಯಿಂದ ಪಾಸುಗಳ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ.

ಮಾಸಿಕ ಪಾಸುಗಳ ದರವನ್ನು 50 ರಿಂದ 150ಕ್ಕೆ ಏರಿಕೆ ಮಾಡಲಾಗಿದೆ. ದೈನಂದಿನ ಪಾಸುಗಳ ದರವನ್ನು 10 ರಿಂದ 25ಕ್ಕೆ ಏರಿಕೆ ಮಾಡಲಾಗಿದೆ. ಮಾರ್ಚ್ 1ರಿಂದಲೇ ನೂತನ ದರಗಳು ಜಾರಿಗೆ ಬಂದಿವೆ.
ಕೆಎಸ್ಆರ್‌ಟಿಸಿ ಪ್ರಯಾಣ ದರ ಹೆಚ್ಚಳ ಮಾಡಿದಾಗ ಪ್ರತಿಕ್ರಿಯೆ ನೀಡಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ, "ಬಡವರಿಗೆ ಹೊರೆಯಾಗದಂತೆ ಪ್ರಯಾಣ ದರವನ್ನು ಏರಿಕೆ ಮಾಡಿದ್ದೇವೆ. 2014ರ ಬಳಿಕ ಮೊದಲ ಬಾರಿಗೆ ದರ ಏರಿಕೆ ಮಾಡಲಾಗಿದೆ" ಎಂದು ಹೇಳಿದ್ದರು.
"ಸಾರಿಗೆ ನಿಗಮಗಳು ತುಂಬಾ ನಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದೇವೆ. ನಿಗಮಗಳಲ್ಲಿ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ" ಎಂದು ಸಾರಿಗೆ ಸಚಿವರು ತಿಳಿಸಿದ್ದರು.
ಫೆಬ್ರವರಿ 25ರಂದು ಎಲ್ಲಾ ಮಾದರಿಯ ಬಸ್‌ಗಳ ಪ್ರಯಾಣ ದರವನ್ನು ಏರಿಕೆ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು. ದರ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ಕೊಟ್ಟಿದ್ದ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ದರ ಏರಿಕೆಗೆ ಅನುಮತಿ ನೀಡಿತ್ತು.
ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಶೇ 12ರಷ್ಟು ದರವನ್ನು ಏರಿಕೆ ಮಾಡಲು ಸರ್ಕಾರ ಒಪ್ಪಿಗೆ ಕೊಟ್ಟಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದರಗಳು ಮಾತ್ರ ಏರಿಕೆ ಮಾಡಿಲ್ಲ.












Click it and Unblock the Notifications