ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ
ಬೆಂಗಳೂರು, ಜೂ. 01 : ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಕ್ಷೀರಭಾಗ್ಯ ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯ, ವಾರದಲ್ಲಿ ಮೂರು ದಿನ ಮಕ್ಕಳಿಗೆ ಯೋಜನೆಯಡಿ ಹಾಲು ವಿತರಣೆ ಮಾಡಲಾಗುತ್ತಿದೆ.
ಸೋಮವಾರ ಬೆಂಗಳೂರಿನಲ್ಲಿ ಕೆಎಂಎಫ್ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವಾರದಲ್ಲಿ ಮೂರು ದಿನ ಹಾಲು ವಿತರಣೆ ಮಾಡುತ್ತಿರುವುದರಿಂದ ವಾರ್ಷಿಕವಾಗಿ ಸರ್ಕಾರಕ್ಕೆ 600 ಕೋಟಿ ರೂ. ಖರ್ಚಾಗುತ್ತಿದೆ ಎಂದರು. [ನಂದಿನಿ ಹಾಲಿಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡಿ]

ಕ್ಷೀರಭಾಗ್ಯ ಯೋಜನೆಯನ್ನು ವಾರದಲ್ಲಿ ಐದು ದಿನಗಳಿಗೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಬರುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಇದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 400 ಕೋಟಿ ಹೊರೆಯಾಗಲಿದೆ ಎಂದು ಹೇಳಿದರು. [ಮೊಸರಿನ ದರ 2 ರೂ. ಏರಿಕೆ ಮಾಡಿದ ಕೆಎಂಎಫ್]
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದ ಮೇಲೆ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ ಗಣನೀಯವಾಗಿ ಕಡಿಮೆಯಾಗಿದೆ. ಯೋಜನೆಯನ್ನು ಐದು ದಿನಗಳಿಗೆ ವಿಸ್ತರಣೆ ಮಾಡಿದರೆ, ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮನೆಯಲ್ಲಿಯೂ ಉಪಯೋಗಿಸಿ : ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಲೆಂದು ಮನೆಗೆ ಹಾಲು ಇಟ್ಟುಕೊಳ್ಳದೆ ಎಲ್ಲವನ್ನೂ ಹಾಲಿನ ಡೈರಿಗಳಿಗೆ ಹಾಕುತ್ತಾರೆ. ಒಬ್ಬ ಮನುಷ್ಯನಿಗೆ ಎಷ್ಟು ಅಗತ್ಯವಿದೆಯೋ? ಅಷ್ಟನ್ನೂ ಬಳಸಿಕೊಳ್ಳಬೇಕು. ಇದರಿಂದ ಆರೋಗ್ಯ ಸ್ಥಿತಿ ಉತ್ತಮವಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಕಿವಿ ಮಾತು ಹೇಳಿದರು.











Click it and Unblock the Notifications