KS Eshwarappa Praise to Yatnal: ಬಿಜೆಪಿ ಕುಟುಂಬ ರಾಜಕಾರಣಕ್ಕೆ ಕಿಡಿ- ಯತ್ನಾಳ್ ಪರ ಕೆಎಸ್ ಈಶ್ವರಪ್ಪ ಬ್ಯಾಟಿಂಗ್
ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಕಿಡಿ ಕಾರಿದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಆರ್‌ಎಸ್‌ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ನಾನೂ ಆರ್‌ಎಸ್‌ಎಸ್‌ನವನೇ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಪಕ್ಷದಲ್ಲಿ ಹೇಳಿದಂತೆ ನಡೆದುಕೊಂಡಿದ್ದೇನೆ. ಆದರೂ ನನಗೆ ಮೋಸ ಮಾಡಿದರು. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿವರೆಗೆ ಇರಬೇಕು. ಅಪ್ಪ ಮಕ್ಕಳ ಕೈಯಲ್ಲೇ ಪಕ್ಷ ಇರಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಹಿರಿಯ ಕಾರ್ಯಕರ್ತರಿಗೆ ನೋವಿದೆ. ಇದರಿಂದ ಅವರಿಗ್ಯಾರಿಗೂ ತೃಪ್ತಿ ಇಲ್ಲ. ಬಹಿರಂಗವಾಗಿ ಹೇಳಲಿಕ್ಕೆ ತಯಾರಿಲ್ಲ. ಬಸನಗೌಡ ಪಾಟೀಲ ಯತ್ನಾಳ್‌ರಂತಹ ಕೆಲವರು ಮಾತ್ರ ಈ ಬಗ್ಗೆ ಹೇಳುತ್ತಿದ್ದಾರೆ. ಮೊನ್ನೆ ಹತ್ತು- ಹನ್ನೆರೆಡು ಜನ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಬಗ್ಗೆ ಮೋದಿ ಟೀಕೆ ಮಾಡ್ತಾರೆ, ಬಿಜೆಪಿ ಅಲ್ಲಿ ಏನಾಗಿದೆ- ಕೆಎಸ್ ಈಶ್ವರಪ್ಪ
ಕಾಂಗ್ರೆಸ್ ಬಗ್ಗೆ ಮೋದಿ ಟೀಕೆ ಮಾಡ್ತಾರೆ, ಬಿಜೆಪಿ ಅಲ್ಲಿ ಏನಾಗಿದೆ? ರಾಜ್ಯದಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ವಾ? ರಾಜ್ಯದಲ್ಲಿ ಪಕ್ಷವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ರೀತಿ ಕೆಎಸ್ ಈಶ್ವರಪ್ಪ ಕೂಡ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಸಿಎಂ ಮುಡಾ ಹಗರಣದಲ್ಲಿ ರಾಜೀನಾಮೆ ನೀಡಲೇಬೇಕು....
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೆಕು. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ರಾಜೀನಾಮಗೆ ಆಗ್ರಹಿಸಿದ್ದಿರಿ. ನಾನು ಸಹ ರಾಜೀನಾಮೆ ನೀಡಿದ್ದೆ. ಈಗ ನೀವ್ಯಾಕೆ ರಾಜೀನಾಮೆ ನೀಡುತ್ತಿಲ್ಲ. ನಿಮ್ಮ ವಿರುದ್ಧ ಭ್ರಷ್ಟಾಚಾರ ಆಪಾದನೆ ಬಂದಾಗ ಒಂದು ರೀತಿ ಬೇರೆಯವರ ಮೇಲೆ ಆಪಾದನೆ ಬಂದಾಗ ಮತ್ತೊಂದು ರೀತಿ ನೋಡುವುದು ಸರಿನಾ ಎಂದು ಕೆಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಅಂದರೆ ಬರೀ ಸುಳ್ಳು. ಸುಳ್ಳಿಗೂ ಒಂದು ಮಿತಿ ಇರಬೇಕು. ಸಿಎಂ, ಡಿಸಿಎಂ ಆಗಲು ಶಕ್ತಿ ಯೋಗ್ಯತೆ ಇರಬೇಕು. ನನ್ನ ಮೇಲಿನ ಆರೋಪದಲ್ಲಿ ನ್ಯಾಯಾಲಯ ನನಗೆ ದೋಷ ಮುಕ್ತ ಮಾಡಿತು. ಕ್ಲೀನ್‌ಚಿಟ್ ಸಿಕ್ಕ ಬಳಿಕ ನಮ್ಮ ನಾಯಕರಿಂದ ನನಗೆ ಮೋಸ ಆಯ್ತು. ನಿಮಗೂ ಕ್ಲೀನ್‌ಚಿಟ್ ಸಿಕ್ಕರೆ ನೀವು ಸಿಎಂ ಆಗಿ ಮುಂದುವರೆಯಿರಿ. ಇಲ್ಲವಾದರೆ ಸಿಎಂ ಆಗಿ ಮುಂದುವರಿಯೋಕೆ ಬರುವುದಿಲ್ಲ ಎಂದು ಕಿಡಿ ಕಾರಿದರು.

ಟಿಕೆಟ್ ನಿರಾಕರಿಸಿದ್ದಕ್ಕೆ ಬಿಜೆಪಿ ವಿರುದ್ಧ ಕೆಎಸ್ ಈಶ್ವರಪ್ಪ ಗರಂ
ಈಶ್ವರಪ್ಪ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷದ ಹೈಕಮಾಂಡ್ ನಿರ್ದೇಶನವನ್ನು ಕಡೆಗಣಿಸಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪರಾಭವಗೊಂಡಿದ್ದರು.
ಉಪಮುಖ್ಯಮಂತ್ರಿ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಉಚ್ಛಾಟಿತ ನಾಯಕ ಈಶ್ವರಪ್ಪ, ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದರು.
ಕರ್ನಾಟಕದಲ್ಲಿ ಬಿಜೆಪಿಯನ್ನು 'ರಾಜವಂಶೀಯ ಪಕ್ಷ'ವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ವರಿಷ್ಠ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಇಬ್ಬರು ಮಕ್ಕಳಾದ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು.
ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಲು ಕರೆ ಬಂದಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದರು. ಆದರೆ ಪಕ್ಷಕ್ಕೆ ಮರಳಿ ಸೇರ್ಪಡೆಯಾಗುವುದಕ್ಕೆ ಆತುರವಿಲ್ಲ. ಆದರೆ ಚರ್ಚೆಗಳ ನಂತರ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವರು ತಿಳಿಸಿದ್ದಾರೆ. "ಕೆಲವು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದರು, ಪಕ್ಷಕ್ಕೆ ಮರಳಲು ಕೇಳಿದರು, ನಾನು ಇನ್ನೂ ನಿರ್ಧರಿಸಿಲ್ಲ," ಎಂದು ಈಶ್ವರಪ್ಪ ತಿಳಿಸಿದ್ದಾರೆ.












Click it and Unblock the Notifications