KRS Dam: ಕೆಆರ್‌ಎಸ್ ಡ್ಯಾಂ ನೀರು ಹೆಚ್ಚಳ; ನಾಲೆಗಳಿಗೆ ನೀರು ಬಿಡುಗಡೆ ದಿನಾಂಕ ಘೋಷಣೆ: ಯಾವಾಗ ಗೊತ್ತಾ?
ಮಂಡ್ಯ, ಜುಲೈ 06: ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ ನೀರಿನ ಮಟ್ಟವು 100 ಅಡಿಗೆ ಹೆಚ್ಚಳವಾಗಿದೆ. ಇತ್ತ ಜಲಾಶಯದ ನಾಲೆಗಳಿಗೆ ನೀರು ಬಿಡುಗಡೆ ಯಾವಾಗ ಎಂಬ ನೀರಿಕ್ಷೆಯಲ್ಲಿ ರೈತರಿದ್ದು, ಕೊನೆಗೂ ನಾಲೆಗಳಿಗೆ ನೀರು ಬಿಡುವ ದಿನಾಂಕ ನಿಗದಿ ಪಡಿಸಲಾಗಿದೆ.
ಈ ಕುರಿತು ಕೃಷಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಕರೆಯಲಾಗಿದೆ. ಸಭೆಯಲ್ಲಿ ತೀರ್ಮಾನ ಕೈಗೊಂಡು ಜುಲೈ ರಿಂದ ನಾಲೆಗಳಿಗೆ ನೀರು ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಕೆಆರ್‌ಎಸ್ ಜಲಾಶಯಕ್ಕೆ ನೀರು ಹೆಚ್ಚಿನ ಪ್ರಯಾಣದಲ್ಲಿ ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟ 100 ಅಡಿಗೆ ಹೆಚ್ಚಳವಾಗಿದೆ. ಇನ್ನೊಂದೆಡೆ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಕೃಷಿ ಸಚಿವರು ತೀರ್ಮಾನ ಕೈಗೊಂಡಿದ್ದಾರೆ. ಜುಲೈ 8 ರಿಂದ ನೀರು ಹರಿಸಲಾಗುತ್ತದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟವೂ 100 ಅಡಿ ದಾಟಿದೆ. ಹೀಗಾಗಿ ನೀರು ಹರಿಸಲು ಆಲೋಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಹಾಗು ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನೂ ಕಳೆದ ಸಾಲಿನಲ್ಲಿ ಬರಗಾಲದ ಹಿನ್ನೆಲೆ ರೈತರ ಬೇಡಿಕೆಯಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿ ತಲುಪಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು.
ಇನ್ನೂ ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ರೈತರಿಗೆ ನೀರು ನೀಡಲು ತೊಂದರೆಯಾಗುತ್ತದೆ ಎಂದು ಹಲವಾರು ದೂರುಗಳು ಕೇಳಿ ಬಂದಿತ್ತು. ಆದರೆ, ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ. ಹೀಗಾಗಿ ಜುಲೈ 08 ರಂದು ನಾಲೆಗಳಿಗೆ ನೀರು ಹರಿಸಲು ಆಲೋಚಿಸಲಾಗಿದೆ ಎಂದಿದ್ದಾರೆ.
ಇಂದು (ಜುಲೈ 6) ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದು, ಜುಲೈ 8 ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದು. ರೈತರೊಂದಿಗೆ ಸರಕಾರ ಸದಾ ಇದ್ದು, ಅವರ ಶ್ರೇಯೋಭಿವೃದ್ದಿಗೆ ಸದಾ ಚಿಂತಿಸುತ್ತದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.












Click it and Unblock the Notifications