KRS Dam: ಕೆಆರ್‌ಎಸ್ ತುಂಬಲು ಕೆಲವೇ ಅಡಿ ಬಾಕಿ, ಆಲಮಟ್ಟಿ ಡ್ಯಾಂಗೆ ಹರಿದು ಬರುತ್ತಿದೆ 7 ಟಿಎಂಸಿ ನೀರು!
ಮಳೆ.. ಮಳೆ.. ಕರ್ನಾಟಕದಲ್ಲಿ ಭರ್ಜರಿ ಮುಂಗಾರು ಮಳೆ ಬೀಳುತ್ತಿರುವ ಕಾರಣಕ್ಕೆ ಈಗ ಜಲಾಶಯಗಳ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ನದಿಗಳು ಹುಟ್ಟುವ ಘಟ್ಟ ಪ್ರದೇಶಗಳಲ್ಲಿ ಅಂದ್ರೆ ಮಲೆನಾಡು ಭಾಗದಲ್ಲಿ ಭಾರಿ ಮಳೆಯು ಬೀಳುತ್ತಿದೆ. ಕಳೆದ 2 ವಾರಗಳಿಂದ ನಿರಂತರವಾಗಿ ಇದೇ ರೀತಿ ಮಳೆ ಬಿದ್ದ ಕಾರಣ ಈಗ ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ ಹೇಗಿದೆ ಗೊತ್ತಾ? ಕೆಆರ್‌ಎಸ್ ಡ್ಯಾಂ ತುಂಬಲು ಇನ್ನು ಎಷ್ಟು ಅಡಿ ನೀರು ಬೇಕು? ಉಳಿದ ಡ್ಯಾಂಗಳ ಪರಿಸ್ಥಿತಿ ಏನು? ಮುಂದೆ ಓದಿ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿ ಉತ್ತಮವಾಗಿ ಮಳೆ ಬೀಳುತ್ತಿದೆ. ಮಲೆನಾಡು ಪ್ರದೇಶ ಮಾತ್ರವಲ್ಲ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಭಾರಿ ಭರ್ಜರಿ ಮಳೆ ಆಗುತ್ತಿದೆ. ಹೀಗಿದ್ದಾಗ ಕರಾವಳಿ ಜಿಲ್ಲೆಗಳು & ಮಲೆನಾಡು ಜಿಲ್ಲೆಗಳಲ್ಲಿ ಜನರು ಮಳೆ ನಿಂತರೆ ಸಾಕಪ್ಪಾ ಅಂತಾ ಕಾಯುತ್ತಿದ್ದರು. ಹೀಗಿದ್ದಾಗಲೇ ನಿನ್ನೆ ಮಳೆ ಅಬ್ಬರ ಒಂದಷ್ಟು ಕಡಿಮೆ ಆಗಿತ್ತು. ಆದರೆ ಮುಂದಿನ 48 ಗಂಟೆ ಕಾಲ ಮತ್ತೆ ಮುಂಗಾರು ಮಳೆಯು ಅಬ್ಬರಿಸಿ ಬೊಬ್ಬಿರುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗ ಕರ್ನಾಟಕದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದ್ರೆ ಕೆಆರ್‌ಎಸ್ & ಆಲಮಟ್ಟಿ ಸೇರಿ ಯಾವ ಯಾವ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಮುಂದೆ ಓದಿ.

ಕೆಆರ್‌ಎಸ್ ಜಲಾಶಯ ಫುಲ್?
ಕೆಆರ್‌ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 25.59 ಅಡಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 12.92 ಟಿಎಂಸಿ ಅಡಿ ನೀರು ಇತ್ತು. 6,600 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಅಲ್ಲದೆ ಕಾವೇರಿ ಕೊಳ್ಳದಲ್ಲಿ ಮತ್ತಷ್ಟು ಉತ್ತಮ ಮಳೆಯ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೀಗ ದಟ್ಟವಾಗಿದೆ.
ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?
19.52 ಟಿಎಂಸಿ ಅಡಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹ ಮಾಡಬಹುದು. ಕಬಿನಿ ಡ್ಯಾಂನಲ್ಲಿ ಇದೀಗ 18.52 ಟಿಎಂಸಿ ಅಡಿ ನೀರು ಸಂಗ್ರಹ ಇದೆ. 6,148 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಕಬಿನಿ ಡ್ಯಾಂ ಭಾಗಶಃ ಭರ್ತಿ ಆಗಿದೆ. ಮತ್ತೊಂದು ಕಡೆ ಭಾರಿ ಮುನ್ನೆಚ್ಚರಿಕೆ ಕೂಡ ವಹಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಅದನ್ನ ನಿಭಾಯಿಸಲು ಕ್ರಮವನ್ನ ಕೈಗೊಳ್ಳಲಾಗಿದೆ.
ಹೇಮಾವತಿ ಡ್ಯಾಂಗೆ ಭರ್ಜರಿ ನೀರು!
ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈಗ ಡ್ಯಾಂಗೆ ಬರೋಬ್ಬರಿ 6,767 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗೆ ಹೇಮಾವತಿ ಜಲಾಶಯದಲ್ಲಿ 19 ಟಿಎಂಸಿ ನೀರು ಸಂಗ್ರಹ ಆಗಿದೆ 2922 ಅಡಿ ಎತ್ತರ ಇರುವ ಈ ಡ್ಯಾಂಗೆ ಇದೀಗ 2899 ಅಡಿ ನೀರು ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ನೀರು.. ನೀರು.. ನೀರು!
ಆಲಮಟ್ಟಿ ಡ್ಯಾಂಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಅತ್ತ ಮಹಾರಾಷ್ಟ್ರ ಕೂಡ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿದ್ದು, ಸದ್ಯಕ್ಕೆ ಜಲಾಶಯಕ್ಕೆ 78,668 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಮೂಲಕ ಆಲಮಟ್ಟಿ ಜಲಾಶಯದಲ್ಲಿ 71.39 ಟಿಎಂಸಿ ನೀರು ಸಂಗ್ರಹ ಆಗಿದೆ. ಒಟ್ಟು 123.08 ಟಿಎಂಸಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುತ್ತಿದೆ.
ತುಂಗಾ & ಭದ್ರಾ, ಲಿಂಗನಮಕ್ಕಿ ಡ್ಯಾಂಗೆ...
ಭದ್ರಾ ಜಲಾಶಯದಲ್ಲಿ ಈಗ 7,356 ಕ್ಯುಸೆಕ್ ಒಳ ಹರಿವು ಇದ್ದು, ಒಟ್ಟಾರೆ 71.5 ಟಿಎಂಸಿ ಇರುವ ಜಲಾಶಯದಲ್ಲಿ ಈಗ 24 ಟಿಎಂಸಿ ನೀರು ಸಂಗ್ರಹ ಆಗಿದೆ. ಹಾಗೇ ಶಿವಮೊಗ್ಗ ಜಿಲ್ಲೆ ಲಿಂಗನಮಕ್ಕಿ ಜಲಾಶಯಕ್ಕೆ ಈಗ 13,659 ಕ್ಯುಸೆಕ್ ನೀರು ಬರುತ್ತಿದ್ದು, 2881.05 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ. ಒಟ್ಟು 1819 ಅಡಿ ಎತ್ತರದ ಲಿಂಗನಮಕ್ಕಿ ಈಗ 1771.45 ಅಡಿ ನೀರು ತುಂಬಿಕೊಂಡಿದೆ. ಈ ಮೂಲಕ 151.64 ಟಿಎಂಸಿ ಸಾಮರ್ಥ್ಯದ ಲಿಂಗನಮಕ್ಕಿ ಡ್ಯಾಂ ಇದೀಗ 41.60 ಟಿಎಂಸಿ ನೀರನ್ನು ಸಂಗ್ರಹ ಮಾಡಿಕೊಂಡಿದೆ. ತುಂಗಾ ಜಲಾಶಯ ಪೂರ್ತಿ ತುಂಬಿ ಹೋಗಿದ್ದು, ಒಟ್ಟು 11,619 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.












Click it and Unblock the Notifications