ಹಾಸನ : ಸಮ್ಮೇಳನ ಮುಖ್ಯ ವೇದಿಕೆಗೆ ಒಡೆಯರ್ ಹೆಸರು
ಹಾಸನ, ಜ.19 : ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನ ಕೈಗೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ನಿರ್ಣಯ ಕೈಗೊಂಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು. ಸದ್ಯ, ಪರಿಷತ್ತಿಗೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಅವರ ಹೆಸರಿನಲ್ಲಿ ಪ್ರಧಾನ ವೇದಿಕೆ ನಿರ್ಮಿಸಿ, ಗೌರವ ಸಮರ್ಪಿಸಲಾಗುತ್ತಿದೆ. [ಒಡೆಯರ್ ಬಗ್ಗೆ ಓದಿ]

ಸಮ್ಮೇಳನ ನಡೆಯುವ ಸಮನಾಂತರ ವೇದಿಕೆಗಳಿಗೆ ಅರಕಲಗೂಡು ನರಸಿಂಗ ಕೃಷ್ಣರಾಯ (ಅನಕೃ) ಹೆಸರನ್ನು ಇಡಲಾಗುತ್ತದೆ. ಮುಖ್ಯ ದ್ವಾರಕ್ಕೆ ಜಾನಪದ ಜಂಗಮ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ. [ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ]
ಪ್ರತಿನಿಧಿ ನೋಂದಣಿಗೆ 2 ದಿನ ಬಾಕಿ : 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿ ನೋಂದಣಿಗೆ ಕೇವಲ 2 ದಿನಗಳು ಬಾಕಿ ಇವೆ. ಇದುವರೆಗೆ ರಾಜ್ಯಾದಾದ್ಯಂತ 8000 ಜನರು ನೋಂದಣಿ ಮಾಡಿಸಿದ್ದಾರೆ. [ಸಾಹಿತ್ಯ ಸಮ್ಮೇಳನದ ಮಾಹಿತಿ ಇಲ್ಲಿ ಪಡೆಯಿರಿ]
ಸಮ್ಮೇಳನಕ್ಕೆ ನೋಂದಣಿ ಮಾಡಿಸುವ ಪ್ರತಿನಿಧಿಗಳಿಗೆ ಆಕರ್ಷಕವಾದ ಪರಿಸರ ಸ್ನೇಹಿ ಕಿಟ್ ಮತ್ತು ಲೇಖನ ಸಾಮಾಗ್ರಿ, ವಸತಿ ಸೌಕರ್ಯ ಮತ್ತು ಸರ್ಕಾರಿ ನೌಕರರಾಗಿದ್ದಲ್ಲಿ ಕಿಟ್ ಜೊತೆ ಓಓಡಿ ನೀಡಲಾಗುವುದು ಎಂದು ನೋಂದಣಿ ಸಮಿತಿ ಪ್ರಧಾನ ಸಂಚಾಲಕರು ತಿಳಿಸಿದ್ದಾರೆ. ಪ್ರತಿನಿಧಿ ಶುಲ್ಕ ರೂ. 300 ರೂ.ಗಳು.











Click it and Unblock the Notifications