KPSC ನೇಮಕಾತಿ ಹಗರಣದ ವಿರುದ್ಧ ಹೋರಾಟಕ್ಕೆ ಜಿರಳೆ ಪಾರ್ಟಿ ಎಂಟ್ರಿ: ನೊಂದ ವಿದ್ಯಾರ್ಥಿಗಳಿಗೆ ನ್ಯಾಯದ ಭರವಸೆ
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಸರ್ಕಾರಿ ಉದ್ಯೋಗ ಅರಸುತ್ತಿರುವ ಯುವಕರಿಗೆ ನೇಮಕಾತಿ ಹಗರಣಗಳು ಮತ್ತೊಂದು ದೊಡ್ಡ ಆಘಾತವನ್ನೇ ನೀಡುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ವಿರುದ್ಧ ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಜಿರಳೆ ಹೋರಾಟ ಹಮ್ಮಿಕೊಳ್ಳುವುದಾಗಿ ಸಿಜೆಪಿ ಅಧಿಕೃತವಾಗಿ ಘೋಷಿಸಿದೆ.
ಅರ್ಹ ಮತ್ತು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕೆಪಿಎಸ್‌ಸಿ ಹಗರಣ ಹೋರಾಟ ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ.

"ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳ ಬಗ್ಗೆ ಸಾಕಷ್ಟು ಯುವಕರು ನೇರವಾಗಿ ನಮ್ಮ ಗಮನಕ್ಕೆ ತಂದಿದ್ದಾರೆ. ಈ ಹಗರಣದ ಕುರಿತು ಪ್ರಸ್ತುತ ಎಲ್ಲ ಮೂಲಗಳಿಂದ ಸಂಪೂರ್ಣ ಮಾಹಿತಿಯನ್ನ ಕಲೆಹಾಕಲಾಗುತ್ತಿದೆ. ಅನ್ಯಾಯಕ್ಕೊಳಗಾದ, ಪರೀಕ್ಷೆ ಬರೆದು ವಂಚನೆಗೆ ಒಳಗಾದ ಮತ್ತು ನೊಂದ ವಿದ್ಯಾರ್ಥಿಗಳ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ," ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ರಾಷ್ಟ್ರೀಯ ಸಹ ಸಂಚಾಲಕ ಅಶುತೋಷ್ ರಾಂಕಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅನ್ಯಾಯದ ವಿರುದ್ಧ ಸಿಜೆಪಿ ವತಿಯಿಂದ ಕಾನೂನು ಹೋರಾಟ ಮತ್ತು ಬೀದಿಗಿಳಿದು ಪ್ರತಿಭಟನೆ ನಡೆಸುವ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ
ಕೇವಲ ನೇಮಕಾತಿ ಹಗರಣ ಮಾತ್ರವಲ್ಲದೆ, ರಾಜ್ಯದ ಸರ್ಕಾರಿ ಶಾಲೆಗಳ ಶೋಚನೀಯ ದುಸ್ಥಿತಿಯ ಬಗ್ಗೆಯೂ ಸಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯದಾದ್ಯಂತ ಇರುವ ಸುಮಾರು 48,500 ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನ ಒದಗಿಸುವ ಹಾಗೂ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವ ನಿಟ್ಟಿನಲ್ಲಿ ಸಿಜೆಪಿ ವತಿಯಿಂದ ಸಮಗ್ರ ತಪಾಸಣೆ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಶೌಚಾಲಯ, ಗಾಳಿ, ಬೆಳಕು ಮತ್ತು ಗುಣಮಟ್ಟದ ಶಿಕ್ಷಣದಂತಹ ಸೌಲಭ್ಯಗಳ ಪರಿಶೀಲನೆಗಾಗಿ ಮುಂದಿನ ಮೂರು ದಿನಗಳೊಳಗೆ ಪ್ರತ್ಯೇಕ ಜಿಲ್ಲಾ ಮಟ್ಟದ ಸಮಿತಿಗಳನ್ನ ರಚಿಸಲಾಗುವುದು ಎಂದು ರಾಂಕಾ ಭರವಸೆ ನೀಡಿದ್ದಾರೆ.
ಶೌಚಾಲಯವಿಲ್ಲದೆ ವಿದ್ಯಾರ್ಥಿಗಳ ಪರದಾಟ, ಶೀಘ್ರ ಅನುದಾನಕ್ಕೆ ಆಗ್ರಹ
ಸಿಜೆಪಿಯ ಎರಡು ಪ್ರತ್ಯೇಕ ಪದಾಧಿಕಾರಿಗಳ ತಂಡಗಳು ಈಗಾಗಲೇ ಬೆಂಗಳೂರು ನಗರದ ಸರ್ಜಾಪುರ, ಯಶವಂತಪುರ ಹಾಗೂ ಜೆ.ಪಿ. ನಗರದಲ್ಲಿರುವ ವಿವಿಧ ಸರ್ಕಾರಿ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಮೂಲಸೌಕರ್ಯಗಳ ತಪಾಸಣೆ ನಡೆಸಿವೆ. ಈ ತಪಾಸಣೆಯ ವೇಳೆ ಶಾಲೆಗಳಲ್ಲಿ ಹಲವಾರು ಗಂಭೀರ ಸಮಸ್ಯೆಗಳು ಹಾಗೂ ಆತಂಕಕಾರಿ ಅಂಶಗಳು ಪತ್ತೆಯಾಗಿವೆ.
ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆಯೇ ಇಲ್ಲದೆ, ಬಯಲನ್ನೇ ಅವಲಂಬಿಸುವಂತಾಗಿ ವಿದ್ಯಾರ್ಥಿಗಳು ಪ್ರತಿದಿನ ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದು ಶಾಲೆಯಲ್ಲಿ ಶಾಲಾ ಭವನವೇ ಕುಸಿದುಬಿದ್ದಿದ್ದು, ಶಾಲೆಯ ಹೊರಗಡೆ ಮಕ್ಕಳನ್ನ ಕೂರಿಸಿ ಪಾಠ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರನ್ನ ಭೇಟಿಯಾಗಿ ಖುದ್ದಾಗಿ ಗಮನಕ್ಕೆ ತರಲಾಗಿದೆ. ಇಂತಹ ದುಸ್ಥಿತಿಯಲ್ಲಿರುವ ಶಾಲೆಗಳ ತ್ವರಿತ ದುರಸ್ತಿಗೆ ಸರ್ಕಾರ ತಕ್ಷಣವೇ ಅಗತ್ಯ ಅನುದಾನ ಬಿಡುಗಡೆ ಮಾಡಿ, ಸರಿಪಡಿಸಬೇಕು ಎಂದು ಮುಖಂಡರು ಸರ್ಕಾರವನ್ನ ಆಗ್ರಹಿಸಿದ್ದಾರೆ.
ಸಿಜೆಪಿ ನೂತನ ಪದಾಧಿಕಾರಿಗಳ ನೇಮಕ
ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ದಕ್ಷಿಣ ಭಾರತದ ಉಸ್ತುವಾರಿ ಜುನ್ಫೈದ್ ಅಹಮದ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಆಫ್ರೀನ್ ಅವರು ಉಪಸ್ಥಿತರಿದ್ದು, ಪಕ್ಷದ ಮುಂದಿನ ನಡೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಸಿಜೆಪಿ ಪಕ್ಷದ ರಾಜ್ಯ ಘಟಕದ ನೂತನ ಪದಾಧಿಕಾರಿಗಳನ್ನ ಅಧಿಕೃತವಾಗಿ ಆಯ್ಕೆ ಮಾಡಲಾಯಿತು.
ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪಕ್ಷದ ಸಂಪೂರ್ಣ ಉಸ್ತುವಾರಿಯಾಗಿ ಬೆಂಗಳೂರು ಮೂಲದ ಜುನ್ಫೈದ್ ಅಹಮದ್ ಅವರನ್ನ ನೇಮಕ ಮಾಡಲಾಗಿದೆ. ಹಾಗೆಯೇ, ಪಕ್ಷದ ಪ್ರಮುಖ ಜವಾಬ್ದಾರಿಯಾದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಆಫ್ರೀನ್ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಮುಖಂಡರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಯುವಕರ ಪರ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಪಕ್ಷವು ನಿರಂತರವಾಗಿ ಶ್ರಮಿಸಲಿದೆ ಎಂದು ಅವರು ತಿಳಿಸಿದರು.


Click it and Unblock the Notifications
