KPSC Recruitment Scam: ಪ್ರೇಯೆಸಿಗೆ ಅಕ್ರಮ ಹಣದಿಂದ 26 ಲಕ್ಷದ ಗೋಲ್ಡ್, ವಿಲ್ಲಾ ಖರೀದಿ ಮಾಡಿದ್ದ ಜ್ಞಾನೇಂದ್ರ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ( KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಂತೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಅಕ್ರಮ ಹಣದ ಬಳಕೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳು ಬಹಿರಂಗವಾಗಿವೆ.

ಪ್ರೇಯೆಸಿಗೆ ₹26 ಲಕ್ಷದ ಚಿನ್ನದ ಆಭರಣ

ತನಿಖೆಯ ವೇಳೆ ಜ್ಞಾನೇಂದ್ರಕುಮಾರ್ ಅವರು ತಮ್ಮ ಗೆಳತಿಯನ್ನು ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಕರೆದೊಯ್ದು ಸುಮಾರು ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಖರೀದಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಬಿಲ್‌ಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

KPSC Recruitment Scam 26 Lakh Jewellery Gift Villa Purchase Under CID Scanner Fresh Details Emerge

ಆಭರಣ ಖರೀದಿಗೆ ಬೀದರ್‌ನ ಲಕ್ಷ್ಮಿ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಮಾಹಿತಿ ತನಿಖೆಯಲ್ಲಿ ಸಿಕ್ಕಿದೆ ಎನ್ನಲಾಗಿದೆ. ಬಸವರಾಜ್ ಎಂಬ ಹೆಸರಿನ ಖಾತೆಯಿಂದ ಚಿನ್ನದ ಖರೀದಿ ಬಿಲ್ ಪಾವತಿಯಾಗಿರುವುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ಜ್ಞಾನೇಂದ್ರಕುಮಾರ್ ಅವರು ಗೆಳತಿಯೊಂದಿಗೆ ಜ್ಯುವೆಲ್ಲರಿ ಮಳಿಗೆಗೆ ತೆರಳಿದ್ದಕ್ಕೆ ಸಂಬಂಧಿಸಿದ ಫೋಟೋ ಸಾಕ್ಷ್ಯವೂ ಪತ್ತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಸ್ವೀಕರಿಸಿದ್ದರೆಂದು ಹೇಳಲಾಗುತ್ತಿರುವ ಜ್ಞಾನೇಂದ್ರಕುಮಾರ್ ಅವರ ಗೆಳತಿಗೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದಾಗಿ ತಿಳಿದುಬಂದಿದೆ. ಆಭರಣ ಖರೀದಿಗೆ ಬಳಸಲಾದ ಹಣದ ಮೂಲ ಹಾಗೂ ಅದರೊಂದಿಗೆ ನೇಮಕಾತಿ ಅಕ್ರಮದ ಹಣಕ್ಕೆ ಸಂಬಂಧವಿದೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಸಹೋದರನ ಹೆಸರಲ್ಲಿ ವಿಲ್ಲಾ ಖರೀದಿ?

ಇನ್ನು ಅಕ್ರಮ ಹಣದ ಬಳಕೆಗೆ ಸಂಬಂಧಿಸಿದ ಮತ್ತೊಂದು ಗಂಭೀರ ಆರೋಪವೂ ತನಿಖೆಯಲ್ಲಿ ಮುನ್ನೆಲೆಗೆ ಬಂದಿದೆ. ಜ್ಞಾನೇಂದ್ರಕುಮಾರ್ ಅವರು ತಮ್ಮ ಸಹೋದರ ಕಮಲಾಪತಿ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಲ್ಲಾ ಖರೀದಿಸಿರುವ ಮಾಹಿತಿ ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಆಸ್ತಿಯ ಖರೀದಿಗೆ ಬಳಸಲಾದ ಹಣದ ಮೂಲವೇನು, ಹಣದ ವರ್ಗಾವಣೆ ಹೇಗೆ ನಡೆದಿದೆ ಮತ್ತು ಪ್ರಕರಣದಲ್ಲಿ ಆರೋಪಿಸಲಾಗಿರುವ ಅಕ್ರಮ ಹಣಕ್ಕೂ ಈ ಆಸ್ತಿ ಖರೀದಿಗೂ ಸಂಬಂಧವಿದೆಯೇ ಎಂಬುದನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿಲ್ಲಾ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

2024ರಿಂದ 2026ರವರೆಗೆ ಎಕ್ಸಾಂ ಕಂಟ್ರೋಲರ್

ಜ್ಞಾನೇಂದ್ರಕುಮಾರ್ ಅವರು 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಭ್ಯರ್ಥಿಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಲಾಗಿದೆ ಎಂಬ ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಹಣದ ವಹಿವಾಟು, ಮಧ್ಯವರ್ತಿಗಳ ಪಾತ್ರ, ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಲಾಗಿತ್ತೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

KPSC Recruitment Scam:ಜ್ಞಾನೇಂದ್ರಕುಮಾರ್‌, ಬಸವರಾಜ್ ಕನ್ನಾಳೆ ವಿಚಾರಣೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜ್ಞಾನೇಂದ್ರಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯವೂ ವಿಚಾರಣೆ ನಡೆಸುತ್ತಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಇಬ್ಬರು ಆರೋಪಿಗಳ ವಿಚಾರಣೆಗೆ ಇಡಿ ಅಧಿಕಾರಿಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ. ಎರಡು ದಿನಗಳ ಕಾಲ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಅವಕಾಶ ದೊರೆತ ಹಿನ್ನೆಲೆಯಲ್ಲಿ ಹಣದ ಅಕ್ರಮ ವರ್ಗಾವಣೆ ಮತ್ತು ಆಸ್ತಿಗಳ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

KPSC Recruitment Scam:21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ನೇಮಕಾತಿ ಅಕ್ರಮದ ವೇಳೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ಈಗಾಗಲೇ ಜ್ಞಾನೇಂದ್ರಕುಮಾರ್ ಅವರ ನಿವಾಸ ಸೇರಿದಂತೆ ಸುಮಾರು 21 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸಿಐಡಿ ಹಾಗೂ ಇಡಿ ತನಿಖೆ ಮುಂದುವರಿದಿದ್ದು, ಚಿನ್ನಾಭರಣ ಖರೀದಿ, ಬ್ಯಾಂಕ್ ಖಾತೆಗಳಲ್ಲಿನ ಹಣದ ವಹಿವಾಟು, ವಿಲ್ಲಾ ಸೇರಿದಂತೆ ಆಸ್ತಿ ಖರೀದಿ ಮತ್ತು ಇತರ ಹಣಕಾಸು ವ್ಯವಹಾರಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಗಳ ಸಂಪೂರ್ಣ ಸ್ವರೂಪ ಹಾಗೂ ಹಣದ ಮೂಲದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+