KPSC ಪರೀಕ್ಷಾ ಲೋಪದೋಷ: ಸಿಎಂ ಸೂಚನೆ ಬೆನ್ನಲ್ಲೆ ನೇಮಕಾತಿ ಪ್ರಕ್ರಿಯೆ ಕ್ಲಾರಿಟಿ ಕೊಟ್ಟ ಅಧ್ಯಕ್ಷ!
ಬೆಂಗಳೂರು, ಮಾರ್ಚ್ 13: ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದ ಕರ್ನಾಟಕ ಲೋಕಸೇವಾ ಆಯೋಗ (KPSC) ಮಾಡಿದ್ದ ಪರಿಕ್ಷಾ ಯಡವಟ್ಟು, ಕನ್ನಡ ಪ್ರಶ್ನೆಗಳಲ್ಲಿನ ಲೋಪದೋಷದ ಬಗ್ಗೆ ಬಧವಾರ ಸದನದಲ್ಲಿ ಭಾರೀ ಚರ್ಚೆ ಆಗಿದೆ. ಇದರ ಬೆನ್ನಲ್ಲೆ ಆಯೋಗ ನಡೆಸುವ ಪರೀಕ್ಷೆ, ಅಧಿಸೂಚನೆ, ಆಯ್ಕೆ ಪಟ್ಟಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆ ಕುರಿತು KPSC ಅಧ್ಯಕ್ಷರು ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗದಿಂದ ನಡೆದ ಪರೀಕ್ಷೆಗಳಲ್ಲಿ ನಡೆದ ತಪ್ಪುಗಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಸೂಚನೆ ನೀಡಿದ ಬೆನ್ನಲ್ಲೆ KPSC ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಮಾರ್ಚ್ 12ರಂದು ಬುಧವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಕೆಲವು ವಿಚಾರಗಳನ್ನು ಜನರ ಗಮನಕ್ಕೆ ತಂದಿದ್ದಾರೆ.

''ಕೆಪಿಎಸ್‌ಸಿ ಪರೀಕ್ಷೆ, ಫಲಿತಾಂಶ, ಆಯ್ಕೆ ಪಟ್ಟಿ ಪ್ರಕಟಣೆ ಸೇರಿ ಎಲ್ಲಾ ಪ್ರಕ್ರಿಯೆಗಳು ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಅದರಲ್ಲಿ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಇರುವುದಿಲ್ಲ. ಅನುಮೋದನೆಗಾಗಿ ಮಾತ್ರ ಪಟ್ಟಿ ಆಯೋಗಕ್ಕೆ ಸಲ್ಲಿಕೆಯಾಗುತ್ತದೆ ಎಂದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಆಯ್ಕೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ. ಸದರಿ ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು. ಕೀ-ಉತ್ತರಗಳನ್ನು ಪ್ರಕಟಿಸುವುದು, ಅರ್ಹತಾ ಪಟ್ಟಿಯನ್ನು ಪ್ರಕಟಿಸುವುದು. ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸುವುದು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವುದು. ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸುವುದು ಇತ್ಯಾದಿ ಕಾರ್ಯಗಳನ್ನು ಒಳಗೊಂಡಿರುತ್ತದೆ.

ಈ ಕಾರ್ಯಗಳು ಆಯೋಗದ ಪರೀಕ್ಷಾ ನಿಯಂತ್ರಕರು ಮತ್ತು ಕಾರ್ಯದರ್ಶಿಯವರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಇದರ ಹೊರತು ಆಯೋಗದ ಮಾನ್ಯ ಅಧ್ಯಕ್ಷರು ಮತ್ತು ಮಾನ್ಯ ಸದಸ್ಯರುಗಳಿಗೆ ಸದರಿ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಮತ್ತು ಹಿಡಿತವಾಗಲೀ ಇರುವುದಿಲ್ಲ. ಅಂತಿಮ ಹಂತದಲ್ಲಿ ಅನುಮೋದನೆಗಾಗಿ ಮಾತ್ರ ಕಡತಗಳು ಸಲ್ಲಿಸಲ್ಪಡುತ್ತವೆ ಎಂದು ಅವರು ವಿವರಿಸಿದ್ದಾರೆ.
ಅಲ್ಲಿಯವರೆಗಿನ ಈ ನೇಮಕಾತಿ ಕಾರ್ಯಗಳ ಸಂಪೂರ್ಣ ಮಾಹಿತಿ ಹಾಗೂ ನಿಯಂತ್ರಣ ಅಧಿಕಾರವನ್ನು ಆಯೋಗದ ಪರೀಕ್ಷಾ ನಿಯಂತ್ರಕರು ಮಾತ್ರ ಹೊಂದಿರುತ್ತಾರೆ. ಪರೀಕ್ಷಾ ನಿಯಂತ್ರಕರು ಆಯೋಗದ ಕಾರ್ಯದರ್ಶಿಯವರ ಒಟ್ಟಾರೆ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ವ್ಯಕ್ತಿತ್ವ ಪರೀಕ್ಷೆಗಳ ಎಲ್ಲಾ ಗೌಪ್ಯ ವಿಷಯಗಳ ಮಾಹಿತಿಯು ಏಕಮಾತ್ರವಾಗಿ ಇವರ ಸುಪರ್ದಿನಲ್ಲಿರುತ್ತದೆ. ಇವರು ಈ ವಿಷಯಗಳನ್ನು ಅಥವಾ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆಯ (Need-to-know) ತತ್ವದ ಹೊರತಾಗಿ ಹಂಚಿಕೊಳ್ಳುವಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದುವರೆಗ ರಾಜ್ಯಾದ್ಯಂತ ಈ ಬಗ್ಗೆ ಪ್ರತಿಭಟನೆ, ಆಕ್ಷೇಪ ವ್ಯಕ್ತವಾದರೂ ಈ ಬಗ್ಗೆ ಮಾತನಾಡದ ಕೆಪಿಎಸ್‌ಸಿ ಅಧ್ಯಕ್ಷರು ಇದೀಗ ಸೂಚನೆ ಕಟ್ಟುನಿಟ್ಟಿನ ಎಚ್ಚರಿಕೆ, ಲೋಪದೋಷ ಕಾರಣರಾದವರನ್ನು ಕಪ್ಪುಪಟ್ಟಿಗೆ ಸೇರಿಸುವುದು ಸೇರಿದಂತೆ ಮಹತ್ವದ ಸೂಚನೆ ನೀಡುತ್ತಿದ್ದಂತೆ ಅಲರ್ಟ್ ಆದಂತೆ ಕಾಣುತ್ತದೆ. ಸದನದಲ್ಲಿ ಮುಖ್ಯಮಂತ್ರಿಗಳೇ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗುತ್ತದೆ..












Click it and Unblock the Notifications