ಕೆಪಿಜೆಪಿ ಕಾಂಗ್ರೆಸ್‌ನಲ್ಲಿ ವಿಲೀನ, ಪುನಃ ಸಂಪುಟ ಸೇರಿದ ಆರ್.ಶಂಕರ್
Recommended Video
ಬೆಂಗಳೂರು, ಜೂನ್ 14 : ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಕಾಂಗ್ರೆಸ್‌ನಲ್ಲಿ ವಿಲೀನವಾಗಿದೆ. ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟವನ್ನು ಮತ್ತೆ ಸೇರಿದರು.
ಶುಕ್ರವಾರ ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ನಡೆದಿದೆ. ಆರ್.ಶಂಕರ್ ಮತ್ತು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ.
ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಅವರನ್ನು 2018ರ ಡಿಸೆಂಬರ್‌ನಲ್ಲಿ ಸಂಪುಟ ವಿಸ್ತರಣೆ ಮಾಡುವ ಸಮಯದಲ್ಲಿ ಕೈ ಬಿಡಲಾಗಿತ್ತು. ಈಗ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಕೆಪಿಜೆಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಬೇಕು ಎಂಬ ಷರತ್ತಿನ ಅನ್ವಯವೇ ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಆರ್.ಶಂಕರ್ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವ ಪತ್ರವನ್ನು ನೀಡಿದರು.

ಹಲವು ಬಾರಿ ನಿಷ್ಠ ಬದಲಿಸಿದ್ದಾರೆ
ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್ ಹಲವು ಬಾರಿ ಪಕ್ಷ ನಿಷ್ಠೆಯನ್ನು ಬದಲಾಯಿಸಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಈ ಬಾರಿ ಸಚಿವ ಸ್ಥಾನ ನೀಡುವ ಮೊದಲು ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಬೇಕು ಎಂದು ಷರತ್ತು ಹಾಕಿತ್ತು. ಇದಕ್ಕೆ ಒಪ್ಪಿಗೆ ನೀಡಿದ್ದ ಶಂಕರ್ ಕಾಂಗ್ರೆಸ್‌ನಲ್ಲಿ ಪಕ್ಷವನ್ನು ವಿಲೀನ ಮಾಡಿದ್ದಾರೆ.

4,338 ಮತಗಳ ಗೆಲುವು
2012ರಲ್ಲಿ ರಾಜಕೀಯ ಪ್ರವೇಶ ಮಾಡಿದ ಆರ್.ಶಂಕರ್ 2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಣೆಬೆನ್ನೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ವಿರುದ್ಧ ಸೋಲು ಕಂಡಿದ್ದರು. ಬಳಿಕ ಕ್ಷೇತ್ರದಲ್ಲಿಯೇ ಮನೆ ಮಾಡಿದ ಶಂಕರ್ 2018ರ ಚುನಾವಣೆಯಲ್ಲಿ 4,338 ಮತಗಳ ಅಂತರದಿಂದ ಕೋಳಿವಾಡ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಆಯ್ಕೆಯಾದರು.

ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು
2018ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದ ಆರ್.ಶಂಕರ್ ಬಿ.ಎಸ್.ಯಡಿಯೂರಪ್ಪ ಮನಗೆ ಹೋಗಿದ್ದರು. ಬಳಿಕ ಕಾಂಗ್ರೆಸ್ ಸಚಿವ ಸ್ಥಾನದ ಭರವಸೆ ನೀಡಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದರು. ಸರ್ಕಾರ ರಚನೆಗೊಂಡಾಗ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅರಣ್ಯ ಖಾತೆ ನೀಡಲಾಯಿತು.

ಪಕ್ಷ ವಿಲೀನ ಮಾಡದ ಕಾರಣ ಸಂಪುಟದಿಂದ ಔಟ್
ಸಂಪುಟ ಸೇರಿದ ಅವರ ಕಾಂಗ್ರೆಸ್ ಹೇಳಿದಂತೆ ಕೇಳಲಿಲ್ಲ. ಕೆಪಿಜೆಪಿ ಪಕ್ಷವನ್ನು ಕಾಗ್ರೆಸ್‌ನಲ್ಲಿ ವಿಲೀನ ಮಾಡಲಿಲ್ಲ. ಆದ್ದರಿಂದ, 2018ರ ಡಿಸೆಂಬರ್‌ನಲ್ಲಿ ಸಚಿವ ಸ್ಥಾನ ಕಳೆದುಕೊಂಡರು. ಬಳಿಕ ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದರು. ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದರು. ಈಗ ಕೆಪಿಜೆಪಿಯನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿ ಮತ್ತೆ ಸಂಪುಟ ಸೇರಿದ್ದಾರೆ.












Click it and Unblock the Notifications