ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ: ಡಿ.ಕೆ ಶಿವಕುಮಾರ್
ಬೆಂಗಳೂರು,ಡಿಸೆಂಬರ್ 16: ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಈ ಕುರಿತು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇವರು ರಾಜೀನಾಮೆ ನೀಡುವ ಮುನ್ನ ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಅವರ ಬೆಂಬಲವಾಗಿ ನೀಡುವಾಗ ಅಧಿಕಾರಿಗಳಿಗೆ ಬಿ ರಿಪೋರ್ಟ್ ನೀಡುವಂತೆ ಸೂಚಿಸುತ್ತಾರೆ. ಅವರ ಸಾಧನೆಗೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ವ್ಯಂಗ್ಯವಾಡಿದರು.
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ದೂರು ನೀಡಿದರು, ಕೆಲವರು ಭ್ರಷ್ಟಾಚಾರ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟಿದ್ದಾರೆ. ಆಮೂಲಕ ದೇಶದಲ್ಲೇ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ರಾಜ್ಯಕ್ಕೆ ನೀಡಿದ್ದಾರೆ. ಕೆಂಪಣ್ಣ ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ತನಿಖೆ ಯಾಕಿಲ್ಲ? ಗುತ್ತಿಗೆದಾರರು ದಾಖಲೆ ನೀಡುತ್ತೇವೆ ಎಂದು ಹೇಳಿದ್ದರೂ ಯಾವ ಅಧಿಕಾರಿ ವಿರುದ್ಧ ತನಿಖೆ ಮಾಡಲಿಲ್ಲ. ಇನ್ನು ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಕೊಟ್ಟರು. ಇದಕ್ಕಿಂತ ದೊಡ್ಡ ಅಪಮಾನ ಬೇಕೆ? ಎಂದು ಪ್ರಶ್ನಿಸಿದರು.

ಇನ್ನು ಕೋವಿಡ್ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಕುಟುಂಬಕ್ಕೆ ಸಾಂತ್ವನ ಹೇಳಲಾಗಲಿಲ್ಲ. ಮಾನವೀಯತೆಯಿಂದ ಒಬ್ಬ ಮಂತ್ರಿ, ಶಾಸಕ, ಅಧಿಕಾರಿಗಳು ಹೋಗಿ ಪರಿಹಾರ ನೀಡಲಿಲ್ಲ. ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಯಿತು. ವಿರೋಧ ಪಕ್ಷವಾಗಿ ನಾವು ಮನೆ ಮನೆಗೆ ಹೋಗಿ, ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಬೇಕಾಯಿತು. ಕೋವಿಡ್ ನಿಂದ ಸತ್ತವರಿಗೆ ಘೋಷಣೆ ಮಾಡಿದ ಪರಿಹಾರವನ್ನು ನೀಡಲು ಸಾಧ್ಯವಾಗಲಿಲ್ಲ. ಕೋವಿಡ್ ನಿಂದ ಸಂಕಷ್ಟ ಅನುಭವಿಸಿದವರಿಗೆ ಕೇಂದ್ರ ಸರ್ಕಾರದ ಮೂಲಕ 20 ಲಕ್ಷ ಕೋಟಿ ರಾಜ್ಯ ಸರ್ಕಾರದಿಂದ 1800 ಕೋಟಿ ಪ್ಯಾಕೇಜ್ ಘೋ,ಣೆ ಮಾಡಿದಿರಿ. ಇದರಿಂದ ಯಾರಿಗೆ ಎಷ್ಟು ಸಹಾಯ ಮಾಡಲಾಯಿತು ಎಂದು ಸರ್ಕಾರ ಪಟ್ಟಿ ನೀಡಿ ಎಂದು ಕೇಳಿದರೂ ಕೊಡಲಿಲ್ಲ. ಇದೊಂದು ಸರ್ಕಾರವೇ? ಇದು ಡಬಲ್ ಇಂಜಿನ್ ಸರ್ಕಾರವೇ?
ಈ ಎಲ್ಲ ಹಗರಣದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಮನೆಗಳಿಲ್ಲದಿದ್ದರೂ ಮನೆ ಇದೆ ಎಂದು ಮತದಾರರನ್ನು ಸೇರಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕಿದ್ದಾರೆ. 8.7 ಸಾವಿರ ಬಿಎಲ್ಓ ಸ್ಥಾನವನ್ನು ಖಾಸಗಿಯವರಿಗೆ ನೀಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ರೀತಿ ಚುನಾವಣೆ ಗೆಲ್ಲಬೇಕಾ? ಬಂಧಿತ ಅಧಿಕಾರಿಗಳು ಶಾಸಕರು ಹಾಗೂ ಮಂತ್ರಿಗಳ ಆದೇಶದಂತೆ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾರೂ ಪ್ರಕರಣ ದಾಖಲಿಸುತ್ತಿಲ್ಲ. ಇಂತಹ ಅಕ್ರಮ ನಡೆಯುತ್ತಿದೆ. ಇನ್ನು ಸಿಎಸ್ ಸಿ ಹೆಸರಲ್ಲಿ ಕೆಲವು ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಹಾಕಿ ಅವರಿಂದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಮೃಧು ಧೋರಣೆ ತೋರುತ್ತಿವೆ. ಈ ರಾಜ್ಯದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿದಿದೆ ಎನ್ನುತ್ತೀರಿ, ಆದರೆ ತನಿಖೆ ಮಾಡಿ ಶಿಕ್ಷೆ ನೀಡಿ. ನಿಮ್ಮನ್ನು ತಡೆಯುತ್ತಿರುವವರು ಯಾರು?

ಈ ಬಾರಿ ನಿಮ್ಮ ಸರ್ಕಾರ ಬಂದರೆ ಮತ್ತೆ ಆಪರೇಷನ್ ಕಮಲ ನಡೆಯದಂತೆ ಹೇಗೆ ತಡೆಯುತ್ತೀರಿ ಎಂಬ ವಿಚಾರವಾಗಿ ಮಾತನಾಡಿ, ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ 136 ಸೀಟು, ಬಿಜೆಪಿ 66 ಸ್ಥಾನ ಪಡೆಯಲಿದೆ. 100 ಕ್ಷೇತ್ರಗಳಲ್ಲಿ ಒಂದು ಅರ್ಜಿಗಳಿದ್ದು, ನಮ್ಮಲ್ಲಿ ಐದಾರು ಚುನಾವಣೆ ಸೋತಿರುವ ಕ್ಷೇತ್ರದಲ್ಲೂ 10 ಅರ್ಜಿಗಳು ಬಂದಿವೆ. ಇದರ ಅರ್ಥ ಏನು? ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎನ್ನುತ್ತಿದ್ದರು. ಅಶೋಕ್ ಅವರು 10 ಜನ ಶಾಸಕರು ಬರುತ್ತಾರೆ ಎಂದು ಹೇಳಿದ್ದಾರೆ. ಅವರು ತಡ ಯಾಕೆ ಮಾಡುತ್ತಿದ್ದಾರೆ? ಅವರಿಗೆ ಮಾತ್ರ ಸಂಕ್ರಾಂತಿ ಬರುವುದಿಲ್ಲ, ನಮಗೂ ಸಂಕ್ರಾಂತಿ ಬರುತ್ತದೆ' ಎಂದು ತಿಳಿಸಿದರು.
ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಯಾವ ಸಂದೇಶ ಸಾರುತ್ತದೆ ಎಂದು ಕೇಳಿದಾಗ, 'ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ಹೇಳಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿ ನೀಡಲೇ?' ಎಂದು ಕೇಳಿದರು.












Click it and Unblock the Notifications