• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಬದಲಾವಣೆ ಅಲೆಯ ಕೈಗನ್ನಡಿ": ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ನವೆಂಬರ್ 2: ಭಾರತದಲ್ಲಿ ಬದಲಾವಣೆ ಅಲೆ ಬೀಸುತ್ತಿದೆ ಎಂಬುದನ್ನು ಕರ್ನಾಟಕವಷ್ಟೇ ಅಲ್ಲ ಇಡೀ ಭಾರತದಲ್ಲಿ ನಡೆದಿರುವ ಉಪ ಚುನಾವಣೆಗಳ ಫಲಿತಾಂಶದಿಂದ ಸ್ಪಷ್ಟವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಘೋಷಣೆಯಾದ ಉಪ ಚುನಾವಣೆಯ ಫಲಿತಾಂಶ ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರುವುದಲ್ಲ. ಬಿಜೆಪಿ ಗೆದ್ದಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡ ಗೆಲುವು ಸಾಧಿಸಿರುವುದು ಬದಲಾವಣೆ ಅಲೆಗೆ ಕೈಗನ್ನಡಿಯಾಗಿದೆ. ಪ್ರಾದೇಶಿಕ ಪಕ್ಷಗಳು ಕೂಡ ತಮ್ಮದೇ ಆದ ಪ್ರಾಬಲ್ಯ ತೋರಿಸಿವೆ. ಆದರೆ ಬಿಜೆಪಿ ನಿರೀಕ್ಷೆಯಂತೆ ಅಂದುಕೊಂಡ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆಗೆ ಬಯಸುತ್ತಿರುವ ಜನಾಭಿಪ್ರಾಯವನ್ನು ಹಾಗೂ ಮತದಾರರ ತೀರ್ಪನ್ನು ಕಾಂಗ್ರೆಸ್ ಗೌರವಿಸುತ್ತದೆ ಎಂದು ಹೇಳಿದರು.

Karnataka By Elections Result Live: ಹಾನಗಲ್‌ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿಗೆ ಜಯKarnataka By Elections Result Live: ಹಾನಗಲ್‌ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿಗೆ ಜಯ

ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಿದರು. ರಾಜ್ಯದ ಸ್ವಾಭಿಮಾನಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಧೈರ್ಯವಾಗಿ ಕಾಂಗ್ರೆಸ್ ಧ್ವಜ ಹಿಡಿದು ದೇಶಕ್ಕೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಮತದಾರರಿಗೆ ಅಭಿನಂದಿಸುತ್ತೇನೆ. ಅವರು ಅಭಿಮಾನದಿಂದ ಕೊಟ್ಟಿರುವ ಮತವನ್ನು ವಿರೋಧ ಪಕ್ಷವಾಗಿ ಉಳಿಸಿಕೊಂಡು, ಅವರ ಮಾರ್ಗದರ್ಶನದಂತೆ ಜನಪರ ಸೇವೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ:

ಅಶೋಕ್ ಮನಗೂಳಿ ಜೊತೆಗೆ ಬಂದ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬೆರೆತಿಲ್ಲ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದರು. 'ನಾವು ಯಾರ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ. ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ನಮ್ಮ ಮತ ಪ್ರಮಾಣ ಹೆಚ್ಚಾಗಿದ್ದು, ಸಮಾಧಾನ ತಂದಿದೆ ಎಂದರು. ಎಂ.ಸಿ. ಮನಗೂಳಿ ಅವರಂತೆ ಅಶೋಕ್ ಮನಗೂಳಿ ವೈಯಕ್ತಿಕ ವರ್ಚಸ್ಸು ಮುಂದುವರಿಸುವಲ್ಲಿ ವಿಫಲರಾದರೇ? ಎಂಬ ಪ್ರಶ್ನೆಗೆ 'ಇಲ್ಲಿ ವ್ಯಕ್ತಿಗಳ ವಿಚಾರ ಮುಖ್ಯವಲ್ಲ. ಪಕ್ಷ ಚಿಹ್ನೆ, ನೀತಿ, ಸಿದ್ಧಾಂತದ ಮೇಲೆ ನಾವು ಚುನಾವಣೆ ಮಾಡಿದ್ದೇವೆ. ಹೀಗಾಗಿ ಕಳೆದ ಚುನಾವಣೆಗೂ ಈ ಬಾರಿ ಚುನಾವಣೆಗೂ ಹೋಲಿಕೆ ಮಾಡಿದಾಗ ಕಾಂಗ್ರೆಸ್ ಪ್ರಬಲವಾಗಿ ಬೆಳೆದಿದೆ' ಎಂದು ಉತ್ತರಿಸಿದರು.

ಬಿಜೆಪಿಯವರು ದೊಡ್ಡವರು ಎಂದ ಡಿಕೆಶಿ:

ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದ್ದೇವೆ ಎಂಬ ಮನಸ್ಥಿತಿ ಬಿಡಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಕೆ ಶಿವಕುಮಾರ್ ತಮ್ಮದೇ ವೈಖರಿಯಲ್ಲಿ ತಿರುಗೇಟು ನೀಡಿದರು. "ಆಯಿತು, ಅವರು ದೊಡ್ಡವರು. ಅವರು ಹೇಳಿದಂತೆ ಕೇಳೋಣ' ಎಂದರು. ಇದು ಕಾಂಗ್ರೆಸ್ ಗೆಲುವಲ್ಲ, ವೈಯಕ್ತಿಕ ವರ್ಚಸ್ಸಿನ ಗೆಲುವು ಎಂಬ ಬಿ ಎಸ್ ಯಡಿಯೂರಪ್ಪ ಹೇಳಿಕೆಗೆ 'ಬಹಳ ಸಂತೋಷ' ಎನ್ನುವ ಮೂಲಕ ಡಿಕೆಶಿ ಉತ್ತರಿಸಿದರು.

ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಫಲಿತಾಂಶ?:

ಉಪಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ ನೀಡಿದರು. ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಯಾರು, ಎಷ್ಟು ಮಂತ್ರಿಗಳು ಕೂತಿದ್ದರು. ಬಿಜೆಪಿ ಸಿದ್ಧಾಂತ ಇಟ್ಟುಕೊಂಡವರು ಏನಾಗಿದ್ದರು ಎಂಬುದರ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತದೆ. ಆದರೆ ಅದೆಲ್ಲವೂ ಅವರಿಗೆ ಬಿಟ್ಟ ವಿಚಾರವಾಗಿದ್ದು, ನಾನು ಅದರಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಮತದಾರ ತೀರ್ಪು ಕೊಟ್ಟಿದ್ದಾರೆ ಎಂದು ಹೇಳಿದರು.

ವೈಯಕ್ತಿಕ ಟೀಕೆ ನಮಗೆ ಇಷ್ಟವಿಲ್ಲ:

ರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ನಮ್ಮ ಹೇಳಿಕೆ ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಯಾರ ಮನಸ್ಸನ್ನೂ ನೋಯಿಸಲು ನಮಗೆ ಇಷ್ಟವಿಲ್ಲ. ವೈಯಕ್ತಿಕವಾಗಿ ಯಾರನ್ನೂ ಟೀಕಿಸುವ ಮನಸ್ಥಿತಿ ಹಾಗೂ ಆಸಕ್ತಿ ನನಗಿಲ್ಲ. ಕೆಲವರ ವೈಯಕ್ತಿಕ ಅಭಿಪ್ರಾಯಗಳು ಪಕ್ಷದ ಅಭಿಪ್ರಾಯವಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಜನರ ತೀರ್ಪಿನ ಬಗ್ಗೆ ಡಿಕೆಶಿ ಮಾತು:

"ಮುಖ್ಯಮಂತ್ರಿ ಕ್ಷೇತ್ರವೋ, ಪಕ್ಕದ ಕ್ಷೇತ್ರವೋ, ನಾಯಕತ್ವ ವಿಚಾರವೋ, ಆಂತರಿಕ ಕಚ್ಚಾಟವೋ ಗೊತ್ತಿಲ್ಲ. ನಮ್ಮ ಹೋರಾಟ ಪಕ್ಷ, ನೀತಿ, ಸಿದ್ಧಾಂತ, ಆಡಳಿತದ ಜೊತೆಗೆ ಆಡಳಿತ ಪಕ್ಷದವರು ಜನರಿಗೆ ಸ್ಪಂದಿಸಿದ್ದಾರಾ ಇಲ್ಲವಾ? ಹಾಗೂ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ ಇಲ್ಲವಾ? ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಜನರು ಮತ ನೀಡಿದ್ದಾರೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ದೀಪಾವಳಿ ಶುಭಾಶಯಗಳು:

"ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಕಳೆದ ಒಂದೂವರೆ ವರ್ಷದಿಂದ ಎಲ್ಲರೂ ಕಷ್ಟದಲ್ಲಿ ನರಳುತ್ತಿದ್ದಾರೆ. ಕರ್ನಾಟಕ ಕತ್ತಲಲ್ಲಿದೆ. ಸರ್ಕಾರ ಯಾರಿಗೂ ಸ್ಪಂದಿಸಲಿಲ್ಲ. ಈ ವರ್ಷವಾದರೂ ಎಲ್ಲರಿಗೂ ಬೆಳಕು ಸಿಗಲಿ. ಜೀವ ಇದ್ದರೆ ಜೀವನ. ಹೀಗಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ," ಎಂದರು.

   ಅಪ್ಪು ಕೊಟ್ಟ ಎರಡು ಕಣ್ಣುಗಳು ನಾಲ್ಕು ಮಂದಿಗೆ‌ ಜೋಡಣೆಯಾಗಿದ್ದು ಹೇಗೆ? | Oneindia Kannada
   English summary
   KPCC President DK Shivakumar Reaction About Hanagal And Sindagi By-Election Result.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X