• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪರೇಶನ್ ಕಮಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಿವರ್ಸ್‌ ಆಪರೇಶನ್!

|

ಬೆಂಗಳೂರು, ಜೂ. 05: ಪ್ರಧಾನಿ ಮೋದಿ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅಕ್ಷರಶಃ ನೆಲ ಕಚ್ಚಿತ್ತು. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಜೋಡಿ ಕೊಟ್ಟಿದ್ದ 'ಕಾಂಗ್ರೆಸ್‌ ಮುಕ್ತ ಭಾರತ' ಎಂಬ ಸ್ಲೋಗನ್ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಅತ್ಯಂತ ಪ್ರೀಯವಾಗಿತ್ತು. ಜನಸಂಘದಿಂದ ಶುರುವಾಗಿ ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರು ಮಾಡದ ಮೋಡಿಯನ್ನು ಅಮಿತ್ ಶಾ-ನರೇಂದ್ರ ಮೋದಿ ಜೋಡಿ ಮಾಡಿತ್ತು. ಹೀಗಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದರೊಂದಿಗೆ ಒಂದೊಂದೆ ರಾಜ್ಯವನ್ನು ಕಾಂಗ್ರೆಸ್ ಹಿಡಿತದಿಂದ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಮುಂದುವರೆದಿತ್ತು.

   ಕೊರೊನ ಕಾರಣ SP Road ಈಗ ಸಂಪೂರ್ಣ ಸೀಲ್ ಡೌನ್ | Oneindia Kannada

   ರಾಜ್ಯದಲ್ಲಿಯೂ ಅದೇ ಪರಿಸ್ಥಿತಿ ಬಂದಾಗ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಖಡಕ್ ಆಗಿ ಎದ್ದು ನಿಂತಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಕಾಂಗ್ರೆಸ್‌ ಥಿಂಕ್‌ಟ್ಯಾಂಕ್‌ ಸದಸ್ಯ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಸೋಲುವ ಸಂದರ್ಭ ಇದ್ದಾಗ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಡುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರವನ್ನು ನೇರವಾಗಿ ಎದುರು ಹಾಕಿಕೊಂಡು ಆಜಾದ್ ಗೆಲ್ಲುವಂತೆ ಮಾಡಿದ್ದು ಕೂಡ ಡಿಕೆಶಿ. ಹೀಗಾಗಿ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಅನಿವಾರ್ಯ ಎಂಬುದು ಸಾಬೀತಾಗಿದೆ.

   ಅಖಾಡಕ್ಕಿಳಿದ ಡಿಕೆಶಿ; ಹೊಸಕೋಟೆಯಲ್ಲೊಂದು ಬ್ರೇಕಿಂಗ್ ನ್ಯೂಸ್!

   ಅದರಿಂದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುಕ್ಕಾಣಿಯನ್ನು ಡಿಕೆಶಿ ಅವರಿಗೆ ಹೈಕಮಾಂಡ್ ಕೊಟ್ಟಿದೆ. ಇದೀಗ ಮೈತ್ರಿ ಸರ್ಕಾರ ತೊರೆದು ಬಿಜೆಪಿ ಸೇರಿ ಮಂತ್ರಿಗಳಾಗಿರುವ ಕಾಂಗ್ರೆಸ್ ನಾಯಕರೂ ಸೇರಿದಂತೆ ಕಾಂಗ್ರೆಸ್‌ ಬಿಟ್ಟು ಹೋದರವನ್ನು ಪಕ್ಷಕ್ಕೆ ಕರೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೆಗಾ ಪ್ಲಾನ್ ಮಾಡಿದ್ದಾರೆ.

   ಕೆಪಿಸಿಸಿ ಅಧ್ಯಕ್ಷರಾಗಿ

   ಕೆಪಿಸಿಸಿ ಅಧ್ಯಕ್ಷರಾಗಿ

   ಉಪ ಚುನಾವಣೆಯ ಸೋಲು ಕರ್ನಾಟಕ ಕಾಂಗ್ರೆಸ್‌ ಪಕ್ಷವನ್ನು ಕಂಗಾಲು ಮಾಡಿತ್ತು. ಪಕ್ಷದ ಕಾರ್ಯಕರ್ತರು ಆತ್ಮವಿಶ್ವಾಸ ಕಳೆದುಕೊಂಡಿದ್ದರು. ನೈತಿಕೆ ಹೊಣೆ ಹೊತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಾಗ ಕಾಂಗ್ರೆಸ್ ಹೈಕಮಾಂಡ್‌ಗೆ ಕಂಡಿದ್ದು ಇದೇ ಡಿಕೆಶಿ. ಆದರೆ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲು ಸುತಾರಾಂ ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿರಲಿಲ್ಲ.

   ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದು ಡಿಕೆಶಿ ಬಲದಿಂದಲೇ ರಾಜ್ಯಸಭೆ ಪ್ರವೇಶಿಸಿದ್ದ ಗುಲಾಂ ನಬಿ ಆಜಾದ್. ಕೊನೆಗೆ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಡಿಕೆಶಿ ಅವರಿಗೆ ಕೆಪಿಸಿಸಿಯಲ್ಲಿ ಪರ್ಯಾಯವಾಗಿ 3 ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಲಾಯ್ತು. ಹುದ್ದೆಗಳನ್ನು ಸೃಷ್ಟಿಮಾಡಿಸುವಲ್ಲಿ ಸಿದ್ದರಾಮಯ್ಯ ಅವರು ಸಫಲರಾದರೂ ಡಿಕೆಶಿ ಎದುರು ಕಾರ್ಯಾಧ್ಯಕ್ಷರುಗಳು ಮಂಕಾದಂತೆ ಕಾಣುತ್ತಿದ್ದಾರೆ.

   ಹಿರಿಯ ನಾಯಕರ ಭೇಟಿ

   ಹಿರಿಯ ನಾಯಕರ ಭೇಟಿ

   ಮಾರ್ಚ್‌ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕ ವಾಗುತ್ತಿದ್ದಂತೆಯೆ ದೇಶಾದ್ಯಂತ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿತ್ತು. ಆದರೂ ಡಿಕೆಶಿ ಅವರು ಲಾಕ್‌ಡೌನ್ ಸಮಯದಲ್ಲಿಯೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಹಕಾರ ಕೇಳಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.

   ಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆ

   ಕಾಂಗ್ರೆಸ್ ಪಕ್ಷವನ್ನು ಮರು ಸಂಘಟನೆ ಮಾಡಲು ಡಿ.ಕೆ. ಶಿವಕುಮಾರ್ ತಮ್ಮ ಅಹಂ ಬಿಟ್ಟು ಹಿರಿಯರು, ಕಿರಿಯರು ಎಂಬುದನ್ನು ನೋಡದೆ ಎಲ್ಲರನ್ನೂ ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಭೇಟಿಯ ಸಂದರ್ಭದಲ್ಲಿ ಪಕ್ಷ ಉಳಿದರೆ ಮಾತ್ರ ನಾಯಕರಿಗೆ ಭರವಸೆ ಎಂದು ಡಿಕೆಶಿ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ಆರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದಲ್ಲಿ ಇದ್ದ ವಿರೋಧ ಈಗ ಇಲ್ಲ ಎಂದೇ ಹೇಳಲಾಗುತ್ತಿದೆ. ಇವೆಲ್ಲವುದರ ಜೊತೆಗೆ ಪಕ್ಷದಿಂದ ಹೊರಗೆ ಹೋಗಿರುವವರನ್ನು ಕರೆ ತರಲು ಡಿಕೆಶಿ ಮೆಗಾ ಪ್ಲಾನ್ ಮಾಡಿದ್ದಾರೆ. ಅದು ಹೀಗಿದೆ.

   ಕಮಲಕ್ಕೆ ತಿರುಗೇಟು!

   ಕಮಲಕ್ಕೆ ತಿರುಗೇಟು!

   ವಿವಿಧ ಕಾರಣಗಳಿಗೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಬೇರೆ ಪಕ್ಷಗಳಲ್ಲಿ ಇರುವವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಕರೆತರಲು ಡಿಕೆಶಿ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಪಕ್ಷ ತೊರೆದಿರುವ ಕಾಂಗ್ರೆಸ್ ಮುಖಂಡರು ಹಾಗೂ ಇತರ ಆಸಕ್ತ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಲು ಬಯಸಿದರೆ ಅವರನ್ನು ಸಂಪರ್ಕಿಸಿ, ಅವರ ಅಭಿಪ್ರಾಯ ಪಡೆದು ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಆ ಬಗ್ಗೆ ಕೆಪಿಸಿಸಿಗೆ ವರದಿಯೊಂದನ್ನು ಕೊಡಲು ಸೂಚಿಸಿದ್ದಾರೆ. ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ತೊರೆದು ಹೋಗಿರುವ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರನ್ನು ಸೆಳೆಯುವುದಕ್ಕೆ ಮೊದಲ ಆದ್ಯತೆ ಕೊಡುವುದಕ್ಕೆ ಸೂಚನೆ ಕೊಡಲಾಗಿದೆ.

   ಮರಳಿ ಕಾಂಗ್ರೆಸ್ಸಿಗೆ ಸಮಿತಿ

   ಮರಳಿ ಕಾಂಗ್ರೆಸ್ಸಿಗೆ ಸಮಿತಿ

   ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷರಾಗಿರುವ ಸಮಿತಿಯಲ್ಲಿ 12 ಸದಸ್ಯರಿದ್ದಾರೆ. ಬಹುತೇಕ ಎಲ್ಲರೂ ಕಾಂಗ್ರೆಸ್‌ ಪಕ್ಷದಲ್ಲಿದ್ದು ಎಲ್ಲರೊಂದಿಗೆ ಸೌಹಾರ್ಧಯುತ ಸಂಬಂಧವನ್ನು ಹೊಂದಿದ್ದಾರೆ.

   ಮಾಜಿ ಶಾಸಕ ಬಿ.ಎ. ಹಸನಬ್ಬ ಅವರು ಸಮಿತಿ ಸಂಚಾಲಕರಾಗಿದ್ದು, ಮಾಜಿ ಶಾಸಕರಾದ ವಿ. ಮುನಿಯಪ್ಪ, ಅಜಯ್ ಕುಮಾರ್ ಸರನಾಯಕ್, ಅಭಯಚಂದ್ರ ಜೈನ್, ಸತೀಶ್ ಸೈಲ್, ಪ್ರಫುಲ್ಲಾ ಮಧುಕರ್, ಮಾಜಿ ಸಂಸದರಾದ ಆರ್. ದ್ರುವನಾರಾಯಣ, ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಫಡೆ, ಮಾಜಿ ಮೇಯರ್ ಸಂಪತ್‌ರಾಜ್, ಕೃಪಾ ಆಳ್ವಾ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸಮಿತಿ ಕೊಡುವ ವರದಿ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸೇರಲು ಬಯಸುವ ಬೇರೆ ಪಕ್ಷಗಳ ನಾಯಕರೊಂದಿಗೆ ಖುದ್ದಾಗಿ ಮಾತುಕತೆ ನಡೆಸಲಿದ್ದಾರೆ.

   ರಿವರ್ಸ್‌ ಆಪರೇಶನ್!

   ರಿವರ್ಸ್‌ ಆಪರೇಶನ್!

   ದಕ್ಷಿಣ ಭಾರತದಲ್ಲಿ ಮೊದಲ ಸಲ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ಸರಳ ಬಹುಮತಕ್ಕೆ ಬೇಕಾದ ಸಂಖ್ಯೆಯ ಶಾಸಕರನ್ನು ಸೆಳೆಯಲು ಮಾಡಿದ್ದ ರಾಜಕೀಯ ತಂತ್ರ ನಂತರ ಆಪರೇಶನ್ ಕಮಲ ಎಂದು ಕುಖ್ಯಾತಿ ಪಡೆಯಿತು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಪರೇಶನ್ ಕಮಲಕ್ಕೆ ಒಳಗಾಗಿದ್ದ ಹಲವು ನಾಯಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು.

   ಇದೀಗ ಮತ್ತೆ ರಿವರ್ಸ್ ಆಪರೇಶನ್ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಮೊದಲ ಹಂತದಲ್ಲಿ ಕಳೆದ ವರ್ಷ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಯಲ್ಲಿ ಸೋತು ಅತಂತ್ರರಾಗಿರುವವರನ್ನು ಪಕ್ಷಕ್ಕೆ ಸೆಳೆಯುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಬಳಿಕ ರಿವರ್ಸ್ ಆಪರೇಶನ್‌ ಫಲಿತಾಂಶ ದೊಡ್ಡ ಮಟ್ಟದಲ್ಲಿ ಬರಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ.

   English summary
   KPCC president DK Shivakumar has constituted a committee to bring back party leaders who left congress earlier
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X