ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ಫಿಕ್ಸ್, ಯಾರಿಗೆಲ್ಲ ಗೇಟ್‌ಪಾಸ್?
ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಜೊತೆಗೆ ಇದೀಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ರಾಜ್ಯದ ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ದಿಢೀರ್ ಜಿಲ್ಲಾಧ್ಯಕ್ಷರ ಬದಲಾವಣೆಗೂ ಬಲವಾದ ಕಾರಣವೂ ಇದೆ.
ನಿನ್ನೆ ದೆಹಲಿಗೆ ಹೋಗಿದ್ದ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಜೊತೆ ಈ ವಿಚಾರದ ಬಗ್ಗೆಯೂ ಚರ್ಚಿಸಿದ್ದಾರಂತೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬದಲಾಯಿಸುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೇನು ಶೀಘ್ರದಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಪಕ್ಷವನ್ನು ಬಲಗೊಳಿಸಲು ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಿದ್ದಾರೆ.

ರಾಜ್ಯದಲ್ಲಿ ಬಜೆಟ್ ಅಧಿವೇಶನದ ನಂತರ ಎಲ್ಲ ಸಚಿವರು ಕೂಡ ಕಡ್ಡಾಯವಾಗಿ ಜಿಲ್ಲಾ ಪ್ರವಾಸ ಮಾಡಬೇಕು ಹಾಗೂ ಅಲ್ಲಿನ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿ ಜಿಲ್ಲೆಗಳಲ್ಲಿ ಕಾರ್ಯಕರ್ತರ ಸಂಕಷ್ಟಗಳನ್ನು ಆಲಿಸಬೇಕು. ಅವರನ್ನು ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೆ ಸಜ್ಜುಗೊಳಿಸಿ, ಕಾಂಗ್ರೆಸ್ ಗೆಲುವಿಗೆ ಶ್ರಮ ಪಟ್ಟು ಕೆಲಸ ಮಾಡುವಂತೆ ಪ್ರೇರೇಪಿಸಬೇಕು ಎಂದೂ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲೂ ಈ ಬಗ್ಗೆ ಮಾತನಾಡಿದ್ದ ಡಿಕೆ.ಶಿವಕುಮಾರ್ ಅವರು 2023ರ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ್ದರು. ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ವಿಶೇಷ ಸಭೆ ನಡೆಸಿ ಸೋತ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೇಗೆ ಸಜ್ಜಾಗಬೇಕು ಎಂದೂ ಸೂಚನೆ ನೀಡಿದ್ದರು.

ಅಲ್ಲದೆ ರಾಜ್ಯಾದೆಲ್ಲೆಡೆ ಒಟ್ಟು 100 ಕಾಂಗ್ರೆಸ್ ಕಚೇರಿಗಳನ್ನು ಆರಂಭಿಸಲಾಗುತ್ತಿದ್ದು, ಮಾರ್ಚ್ ಎರಡನೇ ವಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ನೂತನ ಕಚೇರಿಯ ಶಂಕುಸ್ಥಾಪನೆಗೆ ಆಹ್ವಾನಿಸುತ್ತಿದ್ದೇವೆ. 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಯನ್ನ ವರ್ಚುವಲ್ ಆಗಿ ನೆರವೇರಿಸಲಿದ್ದಾರೆ ಎಂದು ಹೇಳಿದ್ದರು.
ಸಿದ್ದರಾಮಯ್ಯ ಅವರು, ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇವೆ. ಅದರಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರ ಸಭೆ ನಡೆಯಬೇಕು. ಪಕ್ಷದ ಕಚೇರಿ ನಿರ್ಮಾಣಕ್ಕೆ ಶೀಘ್ರವೇ ಜಾಗ ಅಂತಿಮಗೊಳಿಸುತ್ತೇವೆ. ರಾಮನಗರದಲ್ಲಿ ನಾನೇ ಖುದ್ದಾಗಿ ಕಾಂಗ್ರೆಸ್ ಕಚೇರಿಗೆ ಒಂದು ಜಾಗ ಖರೀದಿಸಿ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದರು.
ಅಲ್ಲದೆ ಪಕ್ಷದಲ್ಲಿ ಫೀಲ್ಡಿಗಿಳಿದು ಕೆಲಸ ಮಾಡುವವರಿಗೆ ಸ್ಥಾನ ನೀಡಲಾಗುವುದು. ಮಹಿಳೆಯರಿಗೂ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೀಗ ರಾಜ್ಯದ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಕಾರ್ಯವೈಖರಿ ಪರಿಶೀಲಿಸಿ, ಕೆಲವರಿಗೆ ಗೇಟ್‌ಪಾಸ್ ನೀಡಲಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿದೆ.












Click it and Unblock the Notifications