ತಂದೆಯ ಜೊತೆ ಕೂಲಿ ಮಾಡುತ್ತಿದ್ದ ಬಾಲಕ ಶಾಲೆ ಸೇರಿದ

Posted By:
Subscribe to Oneindia Kannada

ಕೊಪ್ಪಳ, ಜುಲೈ 20 : ಕೈಯಲ್ಲಿ ಪುಸ್ತಕ ಹಿಡಿದು ಓದಿ ತನ್ನ ಭವಿಷ್ಯ ರೂಪಿಸಿಕೊಳ್ಳಬೇಕಾದ ಬಾಲಕ ಗಿಡಗಳಿಗೆ ನೀರು ಹಾಕುತ್ತಾ ತಂದೆಯ ಜೊತೆ ಕೂಲಿ ಕೆಲಸ ಮಾಡುತ್ತಿದ್ದ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಾಲಕನನ್ನು ಪುನಃ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಬಳಿಯ ಅರಣ್ಯ ಇಲಾಖೆ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮೌಲಾಹುಸೇನ್ (15) ಈಗ ಪುನಃ ಶಾಲೆಗೆ ಹೋಗುವಂತಾಗಿದೆ. ಬಾಲಕನ ತಂದೆಯ ಮನವೊಲಿಸಿದ ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಅವರು, ಬಾಲಕನನ್ನು ಶಾಲೆಗೆ ಸೇರಿಸಿದ್ದಾರೆ. [ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!]

R. Ramachandran

ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ : ಜುಲೈ 15ರಂದು ಆರ್. ರಾಮಚಂದ್ರನ್ ಅವರು, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ಜೊತೆ ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನದ ಪರಿಶೀಲನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಡ್ಡರಹಟ್ಟಿ ಕ್ಯಾಂಪ್ ಬಳಿಯ ಅರಣ್ಯ ಇಲಾಖೆ ನರ್ಸರಿಯಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದ ಮೌಲಾಹುಸೇನ್‌ನನ್ನು ಗುರುತಿಸಿದ್ದರು.[ಫಾತಿಮಾ ಎಂಬ ಮುಗ್ಧ ಬಾಲಕಿಯ ಹೃದಯ ಹಿಂಡುವ ಕಥೆ!]

ಹುಸೇನ್ ಜೊತೆ ಮಾತನಾಡಿದಾಗ 5ನೇ ತರಗತಿ ನಂತರ ಶಾಲೆ ಬಿಟ್ಟು, ತಂದೆಯೊಂದಿಗೆ ಕೂಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು. ಮೌಲಾಹುಸೇನ್ 1 ಮತ್ತು 2ನೇ ತರಗತಿಯನ್ನು ಮುನಿರಾಬಾದಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 3 ರಿಂದ 5 ನೇ ತರಗತಿ ವರೆಗಿನ ಶಿಕ್ಷಣವನ್ನು ಗಂಗಾವತಿ ತಾಲೂಕಿನ ಬಂಡ್ರಾಳ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ.[ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?]

Moula Hussain

ನಂತರ ಆತನನ್ನು ಗಂಗಾವತಿಯ ಮದರಸಾಕ್ಕೆ ಸೇರಿಸಲಾಗಿತ್ತು. ಮದರಸಾದಲ್ಲಿನ ವಿದ್ಯಾರ್ಥಿಗಳೂ ಕೂಡ ಶಾಲಾ ಶಿಕ್ಷಣಕ್ಕೆ ದಾಖಲಿಸುವುದು ವಾಡಿಕೆ. ಆದರೆ, ಹುಸೇನ್ ಶಾಲಾ ದಾಖಲಾತಿಯಿಂದ ವಂಚಿತನಾಗಿ, ಸುಮಾರು 4 ವರ್ಷಗಳಿಂದ ಶಾಲೆಯಿಂದ ದೂರವಾಗಿದ್ದ.

ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರಾಮಚಂದ್ರನ್ ಅವರು, ಶಿಕ್ಷಣದ ಮಹತ್ವ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಮುಂದುವರಿಸುವುದು ಸೂಕ್ತ ಎಂಬುದರ ಬಗ್ಗೆ ಅದೇ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಆತನ ತಂದೆಯ ಮನವೊಲಿಸಿದ್ದಾರೆ.

ಮೌಲಾಹುಸೇನ್‍ಗೆ ಕೆಲವು ಸಲಹೆಗಳನ್ನು ನೀಡಿ ಶಾಲೆಗೆ ಹೋಗಲು ಪ್ರೇರೆಪಿಸಿದ್ದಾರೆ. ಆತನೂ ಶಾಲೆಗೆ ಹೋಗಲು ಒಪ್ಪಿದ್ದಾನೆ. ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಮಾತನಾಡಿ, ಖುದ್ದಾಗಿ ಗಂಗಾವತಿಯ ಇಸ್ಲಾಂಪುರದ ಉರ್ದು ಶಾಲೆಗೆ ಕರೆದುಕೊಂಡು ಹೋಗಿ ದಾಖಲಾತಿ ಮಾಡಿಸಿದ್ದಾರೆ.

4 ವರ್ಷದಿಂದ ಶಾಲೆಯಿಂದ ದೂರವಾಗಿದ್ದ ಹುಸೇನ್‌ಗೆ ಒಂದು ವರ್ಷ ಅವಧಿಯ ಬ್ರಿಡ್ಜ್ ಕೋರ್ಸ್ ಸೇತುಬಂಧದ ಮೂಲಕ ಸಾಮಾನ್ಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಕ್ಕೆ ತಕ್ಕಂತೆ, ಆ ಬಾಲಕನನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಕೂಲಿ ಕೆಲಸದಲ್ಲಿ ತನ್ನ ಭವಿಷ್ಯವನ್ನು ಕಂಡುಕೊಳ್ಳಲು ಹೊರಟಿದ್ದ ಬಾಲಕನನ್ನು ಮರಳಿ ಶಾಲೆಗೆ ದಾಖಲಿಸುವ ಮೂಲಕ ಬಾಲಕ ತನ್ನ ಭವ್ಯ ಭವಿಷ್ಯವನ್ನು ಶಿಕ್ಷಣದ ಮೂಲಕ ರೂಪಿಸಿಕೊಳ್ಳಲು ಸಿಇಓ ರಾಮಚಂದ್ರನ್ ಅವರು ನೆರವು ನೀಡಿದ್ದಾರೆ. [ಮಾಹಿತಿ : ಕೊಪ್ಪಳ ವಾರ್ತೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Koppal zilla panchayat CEO R. Ramachandran rescued 15 year old child labour and admitted to school. Moula Hussain left the school after 5th and working with father at forest department nursery.
Please Wait while comments are loading...