ಬಡತನ ಮೆಟ್ಟಿ ನಿಂತ ಕೊಪ್ಪಳದ ಆಟೋ ಚಾಲಕನ ಮಕ್ಕಳಿಬ್ಬರಿಗೆ MBBS ಸೀಟು: ಶುಲ್ಕ ಕಟ್ಟಲಾಗದೆ ದಾನಿಗಳ ಮೊರೆ ಹೋದ ತಂದೆ

ಛಲವೊಂದಿದ್ದರೆ ಸಾಧನೆಗೆ ಎಂದಿಗೂ ಬಡತನ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ಕೊಪ್ಪಳದ ಈ ಕುಟುಂಬವೇ ಒಂದೊಳ್ಳೆಯ ಉದಾಹರಣೆ. ಹಗಲಿರುಳು ಆಟೋ ರಿಕ್ಷಾ ಓಡಿಸಿ ಸಂಸಾರ ತೂಗಿಸುತ್ತಿರುವ ಕೊಪ್ಪಳದ ಭಾಗ್ಯನಗರದ ನಿವಾಸಿ ಯಲ್ಲಪ್ಪ ಪಡಸಾಲಿ ಅವರ ಮಕ್ಕಳಿಬ್ಬರೂ ತಮ್ಮ ಕಠಿಣ ಪರಿಶ್ರಮದಿಂದ ಪ್ರತಿಷ್ಠಿತ ವೈದ್ಯಕೀಯ ಕೋರ್ಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.

ಒಂದು ಕಡೆ ಮಕ್ಕಳಿಬ್ಬರು ಡಾಕ್ಟರ್ ಆಗಲಿದ್ದಾರೆ ಎಂಬ ಹೆಮ್ಮೆ ತಂದೆಗೆ ಇದ್ದರೆ, ಇನ್ನೊಂದೆಡೆ ಇಬ್ಬರೂ ಮಕ್ಕಳ ಲಕ್ಷಾಂತರ ರೂಪಾಯಿ ಕಾಲೇಜು ಶುಲ್ಕವನ್ನ ಹೇಗೆ ಕಟ್ಟುವುದು ಎಂಬ ಆತಂಕ ಈ ಕುಟುಂಬವನ್ನ ಕಾಡುತ್ತಿದೆ ನೋಡಿ. ಹೊತ್ತಿನ ಊಟಕ್ಕೂ ಪರದಾಡುವ ಕುಟುಂಬವೊಂದರಿಂದ ಇಬ್ಬರು ಪ್ರತಿಭಾವಂತರು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿರುವುದು ಇಡೀ ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

Koppal Auto Driver 2 Children Secure MBBS Seats Father Seeks Financial Help For Education Fees

ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ಜ್ಯೋತಿ ಮತ್ತು ಮಂಜುನಾಥ್

ಯಲ್ಲಪ್ಪ ಪಡಸಾಲಿ ಅವರು ಸಾಮಾನ್ಯ ಆಟೋ ಚಾಲಕರಾಗಿದ್ದರೂ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಎಂದಿಗೂ ರಾಜಿಯಾಗಲಿಲ್ಲ. ಇವರ ಪುತ್ರಿ ಜ್ಯೋತಿ ಪಡಸಾಲಿ ಅವರು ಒಳ್ಳೆ ಓದಿ 2024ರಲ್ಲಿಯೇ ನೀಟ್ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದರು. ಪ್ರಸ್ತುತ ಜ್ಯೋತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ಮಗಳ ಸಾಧನೆಯ ಸಂಭ್ರಮದ ಬೆನ್ನಲ್ಲೇ, ಇದೀಗ 2026ರ ನೀಟ್ ಪರೀಕ್ಷೆಯಲ್ಲಿ ಯಲ್ಲಪ್ಪ ಅವರ ಪುತ್ರ ಮಂಜುನಾಥ್ ಕೂಡ ಅದ್ಭುತ ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ 561ನೇ ರ‍್ಯಾಂಕ್ ಪಡೆಯುವ ಮೂಲಕ ಮಂಜುನಾಥ್ ಅವರು ರಾಜ್ಯದ ಪ್ರತಿಷ್ಠಿತ ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.

ಯಾವುದೇ ದುಬಾರಿ ಕೋಚಿಂಗ್ ಸೆಂಟರ್‌ಗಳ ಮೊರೆ ಹೋಗದೆ, ಕೇವಲ ಸ್ವಂತ ಪರಿಶ್ರಮದಿಂದ ಬಡ ಕುಟುಂಬದ ಈ ಇಬ್ಬರು ಮಕ್ಕಳು ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.

ಶುಲ್ಕ ಪಾವತಿಸಲು ಆಟೋ ಚಾಲಕನ ಪರದಾಟ

ಮಕ್ಕಳ ಈ ಸಾಧನೆ ಪೋಷಕರ ಸಂತಸಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಆದರೆ, ಸದ್ಯ ಅವರ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿ ಅವರ ಕಣ್ಣಲ್ಲಿ ನೀರು ತರಿಸುತ್ತಿದೆ. ಮಗಳು ಜ್ಯೋತಿಯ ಎಂಬಿಬಿಎಸ್ ಮೊದಲ ವರ್ಷದ ಶುಲ್ಕ ಹಾಗೂ ಹಾಸ್ಟೆಲ್ ವೆಚ್ಚ ಭರಿಸಲು ಯಲ್ಲಪ್ಪ ಅವರು ಈಗಾಗಲೇ ಕೈಸಾಲ ಮಾಡಿದ್ದಾರೆ.

ಆಟೋ ಓಡಿಸಿ ಬರುವ ಅಲ್ಪ ಆದಾಯದಲ್ಲಿ ಮನೆ ಬಾಡಿಗೆ ಕಟ್ಟಿ, ಸಂಸಾರ ತೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮಗನಿಗೂ ಎಂಬಿಬಿಎಸ್ ಸೀಟು ಸಿಕ್ಕಿರುವುದು ಅವರ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದೆ.

ಮಗನ ಪ್ರವೇಶಾತಿ, ಕಾಲೇಜು ಶುಲ್ಕ, ಪುಸ್ತಕಗಳು ಮತ್ತು ವಸತಿ ವೆಚ್ಚಕ್ಕಾಗಿ ದೊಡ್ಡ ಮೊತ್ತದ ಹಣದ ಅಗತ್ಯವಿದೆ. "ಮಕ್ಕಳಿಗೆ ಓದುವ ಆಸಕ್ತಿ ಮತ್ತು ಬುದ್ಧಿಶಕ್ತಿ ಇದೆ, ಆದರೆ ಅವರಿಗೆ ಆಸರೆಯಾಗಲು ನನ್ನ ಬಳಿ ಹಣವಿಲ್ಲವಲ್ಲ" ಎಂದು ತಂದೆ ಯಲ್ಲಪ್ಪ ಕಣ್ಣೀರು ಹಾಕುತ್ತಿದ್ದಾರೆ.

ದಾನಿಗಳು ಮತ್ತು ಸರ್ಕಾರದ ನೆರವಿನ ನಿರೀಕ್ಷೆ

ಯಾವುದೇ ಕಾರಣಕ್ಕೂ ಹಣದ ಕೊರತೆಯಿಂದಾಗಿ ಮಕ್ಕಳ ಡಾಕ್ಟರ್‌ ಆಗುವ ಕನಸು ಭಗ್ನವಾಗಬಾರದು ಎಂಬುದು ಯಲ್ಲಪ್ಪ ಅವರ ಆಶಯ. ಹೀಗಾಗಿ, ಸಮಾಜದ ಉದಾರ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸರ್ಕಾರ ತಮ್ಮ ನೆರವಿಗೆ ಬರಬೇಕೆಂದು ಅವರು ಕೇಳಿಕೊಂಡಿದ್ದಾರೆ.

ಹಾಗೆಯೇ ಈ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರು ತಂದೆ ಯಲ್ಲಪ್ಪ ಪಡಸಾಲಿ ಅವರ ಮೊಬೈಲ್ ಸಂಖ್ಯೆ: 7483804247 ಗೆ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+