ಮಾರಣಾಂತಿಕ ಕೊರೊನಾ ವೈರಸ್: ಕೋಡಿಶ್ರೀಗಳ ಬಹುನಿರೀಕ್ಷಿತ ಭವಿಷ್ಯ
ಇಂತದ್ದೊಂದು ಮೆಡಿಕಲ್ ಎಮರ್ಜೆನ್ಸಿ ವಿಶ್ವಕ್ಕೆ ಬರಬಹುದು ಎಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ತಾನೊಂದು ಬಗೆದರೆ ಮಾನವ, ಬೇರೊಂದು ಬಗೆಯುವುದು ದೈವ ಎನ್ನುವ ಮಾತಿನಂತೆ, ಪ್ರಕೃತಿಯ ವಿಕೋಪಕ್ಕೆ ಮಾನವ ಸಮಾಜ ಬೆಚ್ಚಿಬಿದ್ದಿದೆ.
ಯುಗಾದಿ, ಸಂಕ್ರಾಂತಿ, ದಸರಾ ವೇಳೆ ತಮ್ಮ ನುಡಿಗಟ್ಟಿನ ಮೂಲಕ ಭವಿಷ್ಯ ನುಡಿಯುವ ಅರಸೀಕೆರೆ, ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಕೊರೊನಾ ಮಾರಣಾಂತಿಕ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಹಲವು ಜ್ಯೋತಿಷಿಗಳು ಕೊರೊನಾ ವೈರಸಿನ ಆಯಸ್ಸಿನ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಇಂತಹ ವೇಳೆ, ಕೋಡಿಶ್ರೀಗಳು ಕೊರೊನಾ ವಿಚಾರದಲ್ಲಿ ಏನು ಭವಿಷ್ಯ ನುಡಿಯಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು.
ಅದರಂತೇ, ಕೋಡಿಶ್ರೀಗಳು ಈ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಕಳೆದ ಆಗಸ್ಟ್ 2019ರಲ್ಲಿ "ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ" ಎಂದು ಕೋಡಿಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕೊರೊನಾ ಬಗ್ಗೆ ಕೋಡಿಶ್ರೀಗಳು ಹೇಳಿದ್ದಿಷ್ಟು:

ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು
ಜನರಲ್ಲಿ ಭಕ್ತಿಭಾವಗಳು, ದೈವ ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆಯಾಗುತ್ತಿವೆ. ಹೀಗಾಗಿ ಪ್ರಕೃತಿಯೇ ಈ ರೀತಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವವು ಒಂದೊಂದೇ ಸೂಚನೆ ನೀಡುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಮೂಲಕ, ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು ಎಂದು ಕೋಡಿಶ್ರೀಗಳು, ಏಳು ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು.

ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ
"ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ ಎಂದು ನಾನು ಹೇಳಿದ್ದೆ. ಈಗ ಬಂದಿರುವ ಕಾಯಿಲೆ ಬರೀ ಮನುಷ್ಯನಿಗೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಜಡತ್ವದ ವಸ್ತುಗಳಿಗೂ ಆವರಿಸಬಹುದು" ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಕೊರೊನಾಗೆ ಇನ್ನೂ ಯಾರೂ ಅಧಿಕೃತವಾಗಿ ಲಸಿಕೆಯನ್ನು ಕಂಡು ಹಿಡಿದಿಲ್ಲ.

ಭಾರತೀಯರು ಈ ಕಾಯಿಲೆಗೆ ಭಯ ಪಡಬೇಕಾಗಿಲ್ಲ
"ಆದರೆ, ಭಾರತೀಯರು ಈ ಕಾಯಿಲೆಗೆ ಭಯ ಪಡಬೇಕಾಗಿಲ್ಲ. ಸರ್ವ ರೋಗಕ್ಕೂ ಮದ್ದಿರುವ ಭರತ ಪುಣ್ಯ ಭೂಮಿಯಿದು. ಭಾರತೀಯರಿಗೆ ದೇವರ ಮೇಲೆ ನಂಬಿಕೆ ಇರಬೇಕಾಗುತ್ತದೆ. ಎಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೋ, ಅಲ್ಲೇ ಅದನ್ನು ಹುಡುಕಬೇಕು" ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಮುಂಜಾಗೃತೆ, ದೈವ ನಂಬಿಕೆ ಇರಬೇಕಾಗುತ್ತದೆ
"ಸಹಸ್ರ ಸಹಸ್ರ ವರುಷಗಳಿಂದ ಋಷಿ, ಮುನಿ, ಯೋಗಿಗಳು ಜಪತಪದಿಂದ ರಕ್ಷಣೆ ಮಾಡುತ್ತಾ ಬಂದಿರುವ ಭೂಮಿ ನಮ್ಮದು. ಹೀಗಾಗಿ ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ. ಆದರೂ, ಮುಂಜಾಗೃತೆ, ದೈವ ನಂಬಿಕೆ ಇರಬೇಕಾಗುತ್ತದೆ" ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಆದರೆ, ಈ ಕೊರೊನಾ ವೈರಸ್ ಯಾವಾಗ ನಶಿಸುತ್ತದೆ ಎನ್ನುವುದನ್ನು ಶ್ರೀಗಳು ಹೇಳಲಿಲ್ಲ.












Click it and Unblock the Notifications