ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯರನ್ನು ಸ್ಮರಿಸಿದ ಕೊಡವರು

By Vanitha
|
Google Oneindia Kannada News

ಮಡಿಕೇರಿ, ಏಪ್ರಿಲ್,01: ಭಾರತದ ರಕ್ಷಣಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರ 110ನೇ ಜನ್ಮದಿನವನ್ನು ಕೊಡಗಿನ ಹಲವಾರು ಗಣ್ಯರ ಸಮಾಗಮದಲ್ಲಿ ಆಚರಿಸಲಾಗಿದ್ದು, ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ನಗರದ ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಸಹಯೋಗದಲ್ಲಿ ತಿಮ್ಮಯ್ಯ ಅವರ ಹುಟ್ಟುಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು.[ಸಿಯಾಚಿನ್ ಭೀಕರತೆ ಎದುರಿಸಿ ಸಾವು ಗೆದ್ದ ಕೊಡಗಿನ ಯೋಧರು]

Kodavas celebrates General K S Thimayya birthday in Madikeri

ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜಿಒಸಿ ಮೇಜರ್ ಜನರಲ್ ಕೆ.ಎಸ್.ನಿಜ್ಜಾರ್ ಅವರು ಜ.ತಿಮ್ಮಯ್ಯ ಅವರು ದೇಶದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅಪ್ರತಿಮ ವೀರಸೇನಾನಿ. ಅಂದಿನ ದಿನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶ್ರಮಿಸಿದರು. ಭಾರತ-ಪಾಕಿಸ್ತಾನ ಸಂದಿಗ್ಧ ಸಂದರ್ಭದಲ್ಲಿ ಸೇನಾ ಕ್ಷೇತ್ರದಲ್ಲಿ ಚತುರತೆಯಿಂದ ಕಾರ್ಯನಿರ್ವಹಿಸಿದ್ದರು ಎಂದು ಬಣ್ಣಿಸಿದರು.

ಮಡಿಕೇರಿ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಮಾತನಾಡಿ,'ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ನಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದೆ. ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆಯನ್ನು ಯಥಾಸ್ಥಿತಿ ಕಾಪಾಡಿಕೊಂಡು ಸ್ಮಾರಕ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ' ಎಂದು ಹೇಳಿದರು.[ವೀರಯೋಧ ಕೊಡಗಿನ ಪುತ್ರ ಕಾರ್ಯಪ್ಪನವರಿಗೆ 'ಸೆಲ್ಯೂಟ್']

Kodavas celebrates General K S Thimayya birthday in Madikeri

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಮಾತನಾಡಿ 'ಸರ್ಕಾರ ಮತ್ತು ಜಿಲ್ಲಾಡಳಿತ ನೆರವಿನಿಂದ ನಿರ್ಮಾಣವಾಗುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದು, ಐದೂವರೆ ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ' ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಕೆ.ಸಿ.ಸುಬ್ಬಯ್ಯ ಅವರು ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದು, ಕಾಮಗಾರಿ ಆರಂಭವಾಗಿದೆ. ಸ್ಮಾರಕ ಭವನ ನಿರ್ಮಾಣ ಸಂಬಂಧ ಹೆಚ್ಚಿನ ಅನುದಾನಕ್ಕೆ ಸರ್ಕಾರವನ್ನು ಕೋರಲಾಗಿದೆ' ಎಂದರು.[ಕಲಬುರ್ಗಿಯ ಯೋಧನೊಂದಿಗೇ ಬೂದಿಯಾದ ಸಾವಿನ ರಹಸ್ಯ]

Kodavas celebrates General K S Thimayya birthday in Madikeri

ಇದೇ ಸಂದರ್ಭ ಬೊಳಕಾಟ್ ಪ್ರದರ್ಶನ, ಮುಕ್ಕೋಡ್ಲು ತಂಡದವರಿಂದ ಕತ್ತಿಯಾಟ್ ಪ್ರದರ್ಶನ, ನಾಲಡಿ ಗ್ರಾಮದ ಕುಡಿಯರ ಬುಡಕಟ್ಟು ನೃತ್ಯ ಪ್ರದರ್ಶನ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ವಿದ್ಯಾರ್ಥಿನೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಛಾಯಾಚಿತ್ರ ಪ್ರದರ್ಶನ

ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್‍ನಲ್ಲಿ ಜನರಲ್ ತಿಮ್ಮಯ್ಯ ಅವರು ಸೇನಾ ಕರ್ತವ್ಯದ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೊಂದಿಗಿನ ಸಂಭಾಷಣೆ, ಬ್ರಿಟೀಷ್ ಸೇನಾಧಿಕಾರಿಯೊಂದಿಗೆ ಮಾತುಕತೆ, ಕೊಡಗಿಗೆ ಭೇಟಿ ಮತ್ತಿತರ ಅಪರೂಪದ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು.[ಪ್ರಾಣ ಪಣಕ್ಕಿಟ್ಟು ಹೋರಾಡಿದ ಸೈನಿಕನ ಕಥೆ ವ್ಯಥೆ]

ಈ ಜನ್ಮ ದಿನಾಚರಣೆಯಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಬಂಗೇರ, ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಮೇಜರ್ ಬಿ.ಎ.ನಂಜಪ್ಪ ಮತ್ತಿತರರು ಉಪಸ್ಥಿತಿಯಿದ್ದರು.

ಜನರಲ್ ಕೆಎಸ್ ತಿಮ್ಮಯ್ಯ ವ್ಯಕ್ತಿ ಚಿತ್ರ:

ಜನರಲ್ ಕೊದಂಡೇರ ಸುಬ್ಬಯ್ಯ ತಿಮ್ಮಯ್ಯ ಅವರು 1906ರಲ್ಲಿ ಮಡಿಕೇರಿಯಲ್ಲಿ ಚೆಪ್ಪೂಡಿ ಚಿತ್ವಾ ಅವರ ಮಗನಾಗಿ ಜನಿಸಿದರು. 1957 ರಿಂದ 61ರವರೆಗೆ ಭಾರತದ ಭೂ ಸೇನೆಯ ದಂಡನಾಯಕರಾಗಿದ್ದರು. ಸೈನಿಕರ ವೀರತ್ವವನ್ನು ರಕ್ತಗತವಾಗವಾಗಿ ಪಡೆದ ಇವರು ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದರು.

ಅಣ್ಣ ಪೊನ್ನಪ್ಪ ಮತ್ತು ತಮ್ಮ ಸೋಮಯ್ಯ ಅವರ ಒಡನಾಟದಲ್ಲಿ ಬೆಳೆದ ತಿಮ್ಮಯ್ಯ ಅವರು 1926ರಲ್ಲಿ ತಮ್ಮ ಸೈನಿಕ ವೃತ್ತಿಗೆ ಮೊದಲ ಹೆಜ್ಜೆ ಇರಿಸಿದರು. 1935ರಲ್ಲಿ ಜನವರಿ ತಿಂಗಳಲ್ಲಿ ನೀನಾ ಕಾರಿಯಪ್ಪರವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟರು. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಇವರು 1957ರಲ್ಲಿ ಭಾರತೀಯ ಸೇನೆಯ ಆರನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಸತತ 35 ವರ್ಷಗಳ ಕಾಲ ಭಾರತೀಯ ಸೇನಾ ಜವಾಬ್ದಾರಿ ಹೊತ್ತ ತಿಮ್ಮಯ್ಯ ಅವರು 1961ರಲ್ಲಿ ನಿವೃತ್ತಿ ಪಡೆದುಕೊಂಡರು. ಭಾರತೀಯ ಸೇನೆಯಿಂದ ನಿವೃತ್ತಿಯಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಗ್ರೀಕಿನ ಸೈಪ್ರಸ್ ನಲ್ಲಿದ್ದರು. 1965ರ ಡಿಸೆಂಬರ್ 17ರಲ್ಲಿ ಸೈಪ್ರಸ್ ನಲ್ಲಿಯೇ ಕೊನೆಯುಸಿರೆಳೆದರು.

English summary
Kodavas salute General Kodendera Subayya Thimayyas on his 110 birthday in Madikeri on Thursday, March 31st. KS Thimayya was a soldier of Indian army who served as Chief of Army Staff from 1957 to 1961.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X