ಗಣರಾಜ್ಯೋತ್ಸವ: ದೆಹಲಿ ರಾಜಪಥದಲ್ಲಿ ಘಮ್ಮೆನ್ನಲಿದೆ ಕೊಡಗು ಕಾಫಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಡಿಕೇರಿ,ಜನವರಿ,22: ದೆಹಲಿಯ ರಾಜಪಥ ಜನವರಿ 26ರಂದು ನಡೆಯುವ 66ನೇ ಗಣರಾಜ್ಯೋತ್ಸವಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದ್ದು, ಅದರಲ್ಲಿ ನಡೆಯುವ ಪೆರೇಡ್ ನಲ್ಲಿ ಕರ್ನಾಟಕದ ಕೊಡಗಿನ ಕಾಫಿ ಘಮ್ಮೆನ್ನಲಿದೆ.

ಗಣರಾಜ್ಯೋತ್ಸವದಲ್ಲಿ ನಡೆಯುವ ಸ್ತಬ್ದ ಚಿತ್ರ ಮೆರವಣಿಗೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಗಿನ ಕಾಫಿ ಬೆಳೆಗೆ ಸಂಬಂಧಿಸಿದ ಸ್ತಬ್ದ ಚಿತ್ರ ತಯಾರು ಮಾಡಲಾಗಿದೆ. ಆ ಮೂಲಕ ಕೊಡಗಿನ ಕಾಫಿ ಮತ್ತು ಸಂಸ್ಕೃತಿಯನ್ನು ರಾಷ್ಟ್ರ ಮಾತ್ರವಲ್ಲದೆ ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.[ಚಿತ್ರಗಳು : ರಾಜಪಥ್ ನಲ್ಲಿ ಫ್ರಾನ್ಸ್ ಸೈನಿಕರ ತಾಲೀಮು]

Kodagu coffee spread its fragrance in the republic day at Rajpath, New delhi

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಳೆದ 6 ವರ್ಷಗಳಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ಪ್ರತಿಬಿಂಬಿಸುತ್ತಾ ಬರಲಾಗಿದ್ದು, ಆ ನಿಟ್ಟಿನಲ್ಲಿ ಈ ವರ್ಷ ಕೊಡಗಿನ ಕಾಫಿ ಸ್ತಬ್ಧಚಿತ್ರ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

ವಿಶ್ವದಲ್ಲಿ ಕಾಫಿಗೆ ಎಷ್ಟನೇ ಸ್ಥಾನ?

ಕೊಡಗು ಪ್ರಾಕೃತಿಕ ಸೌಂದರ್ಯದ ತವರು, ದಕ್ಷಿಣದ ಕಾಶ್ಮೀರ, ಗಿರಿ-ಕಂದರಗಳ ನಾಡು, ನಿತ್ಯಹರಿದ್ವರ್ಣದ ಬೀಡು, ಅಪರೂಪದ ಸಸ್ಯ ಸಂಪತ್ತನ್ನು ತನ್ನ ಒಡಲೊಳಗೆ ಇರಿಸಿಕೊಂಡಿರುವ ಕರ್ನಾಟಕದ ಅತ್ಯಂತ ವಿಶಿಷ್ಟ ಜಿಲ್ಲೆಯಾದ ಇದು ಭಾರತದಲ್ಲಿಯೇ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುವ ಜಿಲ್ಲೆ.

ವಿಶ್ವದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುತ್ತಿರುವ ಪ್ರದೇಶಗಳಲ್ಲಿ ಕೊಡಗಿಗೆ 6ನೇ ಸ್ಥಾನ. ಹಲವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಫಿ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ಯಮದಲ್ಲಿ ಮಹಿಳೆಯರದ್ದೇ ಹೆಚ್ಚಿನ ಪಾಲು ಇರುವುದು ಗಮನಾರ್ಹ. ಕಾಫಿ ಉತ್ಪಾದನೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ಲಾಭ ಮತ್ತು ಸ್ಥಳೀಯರು ಕಾಫಿ ಜೊತೆಗಿನ ಸಾಂಸ್ಕೃತಿಕ ನಂಟು. ಹೀಗೆ ಕೊಡಗಿನ ವೈಶಿಷ್ಟ್ಯತೆಯನ್ನು ಸ್ತಬ್ದ ಚಿತ್ರಗಳ ಮೂಲಕ ಸಾರುವುದು ಕೂಡ ಪ್ರಮುಖ ಉದ್ದೇಶವಾಗಿದೆ.[ಕಿಲಕಿಲನೆ ನಗೆ ಬೀರುವ ಲಾಲ್ಬಾಗ್ ಪುಷ್ಪಲೋಕ ನೋಡಿ ಬನ್ನಿ]

Kodagu coffee spread its fragrance in the republic day at Rajpath, New delhi

ಸ್ತಬ್ದ ಚಿತ್ರ ಹೇಗಿರುತ್ತದೆ? ಅದರಲ್ಲಿ ಏನೆಲ್ಲ ವಿಶೇಷಗಳಿವೆ?

ಈ ಸ್ತಬ್ಧ ಚಿತ್ರದಲ್ಲಿ ಮುಖ್ಯವಾಗಿ ಕಾಫಿ ಬೀಜ ಬಿತ್ತನೆ, ಕಾಫಿ ಬೆಳೆಯುವುದು, ಕಾಫಿಪುಡಿ ತಯಾರಿಕೆ ಸೇರಿದಂತೆ ಕಾಫಿ ಉತ್ಪಾದನೆಯ ವಿವಿಧ ಹಂತಗಳನ್ನು ತೋರಿಸಲಾಗುತ್ತದೆ. ಸ್ತಬ್ದ ಚಿತ್ರದ ಮುಂಭಾಗದಲ್ಲಿ ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಕಾಫಿ ಬೆರೆಸುತ್ತಿರುವ ದೃಶ್ಯವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ.

ವಿಶ್ವದ 60 ರಾಷ್ಟ್ರಗಳು ಬಳಸುತ್ತಿರುವ ಕಾಫಿ ಹೇಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬ ವಿವರಣೆಯೂ ಇರಲಿದೆ. ಜೊತೆಗೆ ಕೊಡಗಿನ 8 ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಂಪ್ರದಾಯಿಕ ಕೊಡವ ನೃತ್ಯದ ಮೂಲಕ ಸ್ತಬ್ಧ ಚಿತ್ರಕ್ಕೆ ಕಳೆ ಕಟ್ಟಲಿದ್ದಾರೆ.

ಸ್ತಬ್ಧಚಿತ್ರ ಸಾಗುವ ವೇಳೆ ಕಾಫಿಯ ಸುಗಂಧವನ್ನು ಜನರಿಗೆ ತಲುಪಿಸಲು ಬೃಹತ್ ಗಾತ್ರದ ಗ್ಯಾಸ್ ಕಂಟೇನರ್ ಮೂಲಕ ಕಾಫಿಯ ಪರಿಮಳ ಹೊರಸೂಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದೆ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]

ಇನ್ನು ಸ್ತಬ್ದ ಚಿತ್ರಕ್ಕೆ ಕಲಾ ನಿರ್ದೇಶಕರಾದ ಶಶಿಧರ ಅಡಪ ಮತ್ತು ಸತೀಶ್ ವಿನ್ಯಾಸ ಮಾಡುವ ಮೂಲಕ, ಪ್ರವೀಣ್ ಡಿ.ರಾವ್ ಕೊಡಗು ಶೈಲಿಯ ಹಿನ್ನೆಲೆ ಸಂಗೀತ ಸಂಯೋಜಿಸಿವುದರೊಂದಿಗೆ ಜೀವ ತುಂಬಿದ್ದಾರೆ. ಜ.26ರಂದು ದೆಹಲಿಯ ರಾಜಪಥದಲ್ಲಿ ಸಾಗುವ ರಾಷ್ಟ್ರದ ನೂರಾರು ಸ್ತಬ್ದ ಚಿತ್ರಗಳ ನಡುವೆ ಕೊಡಗಿನ ಸ್ತಬ್ದಚಿತ್ರವನ್ನು ನೋಡುತ್ತಾ ಕಾಫಿ ಕುಡಿಯುವುದನ್ನು ಮರೆಯದಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kodagu coffee will spread its fragrance in the 66th Republic Day at Raipath, New delhi on January 26th. Kodagu will ready to participate tablos in New delhi. Kodagu varta ilake support to people create some toys.
Please Wait while comments are loading...