ಮಡಿಕೇರಿಯಲ್ಲಿ ಮಂಜಿನಂತೆ ಕರಗಿದ ಬಿಜೆಪಿ ಬೆಂಕಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಕೊಡಗು, ಡಿಸೆಂಬರ್ 14 : ಕೊಡಗಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್.ಜಿ.ಮೇದಪ್ಪ ಅವರು ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಆ ಮೂಲಕ ಜಿಲ್ಲೆಯ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯದ ಬೆಂಕಿ ಮೇಲ್ನೋಟಕ್ಕೆ ಆರಿದಂತಾಗಿದೆ.

ಕೊಡಗು ಬಿಜೆಪಿಯ ಭದ್ರಕೋಟೆಯಾಗಿದ್ದು, ವಿಧಾನಪರಿಷತ್ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುಜಾಕುಶಾಲಪ್ಪ ಅವರ ನಾಮಪತ್ರ ತಿರಸ್ಕಾರವಾಗಿತ್ತು. ನಾಮಪತ್ರ ತಿರಸ್ಕಾರವಾಗುವ ಸುಳಿವು ಪಡೆದಿದ್ದ ಪಕ್ಷ ಸುನೀಲ್ ಸುಬ್ರಮಣಿ ಅವರಿಂದ ಎರಡನೇ ನಾಮಪತ್ರ ಸಲ್ಲಿಕೆ ಮಾಡಿಸಿತ್ತು. ಅದು ಸ್ವೀಕೃತಗೊಂಡಿತ್ತು. [ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ]

kodagu

ಆದರೆ, ಪಕ್ಷದಲ್ಲಿ ಪ್ರಭಾವಿ ಮುಖಂಡರಾಗಿ ವಿಧಾನಪರಿಷತ್ ಸದಸ್ಯರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಸ್.ಜಿ.ಮೇದಪ್ಪ ಅವರು ಬಂಡಾಯವಾಗಿ ಸ್ಪರ್ಧಿಸಿದ್ದು ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. [ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಗೆ ಕಾದಿದೆಯಾ ಕಂಟಕ?]

ಪಕ್ಷದ ಹಿರಿಯ ನಾಯಕರು ಎಸ್.ಜಿ.ಮೇದಪ್ಪ ಅವರ ಮನವೊಲಿಸುವ ಪ್ರಯತ್ನ ಯಶಸ್ವಿಯಾಗಿದ್ದು, ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಅಲ್ಲದೆ ಪಕ್ಷದ ಅಭ್ಯರ್ಥಿ ಸುನೀಲ್ ಸುಬ್ರಮಣಿ ಅವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. [ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ನಮ್ಮದೇ : ಸಿದ್ದರಾಮಯ್ಯ]

ಯಾವುದೇ ಬೇಡಿಕೆ ಇಟ್ಟಿಲ್ಲ : ನಾಮಪತ್ರ ವಾಪಸ್ ಪಡೆದ ಬಳಿಕ ಮಾತನಾಡಿದ ಮೇದಪ್ಪ ಅವರು, 'ತಾನು ಸುಮಾರು 25 ವರ್ಷದಿಂದ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಂತೆ ಪಕ್ಷದ ಬೆಳವಣಿಗೆಗೆ ಶ್ರಮ ವಹಿಸಿದ್ದೇನೆ. ಪಕ್ಷ ತನಗೆ ಸಾಕಷ್ಟು ನೀಡಿದೆ, ಪಕ್ಷದಲ್ಲಿ ನಿಷ್ಠಾವಂತನಾಗಿ ಸೇವೆ ಸಲ್ಲಿಸಿದ್ದರಿಂದ ತನಗೆ ತೃಪ್ತಿ ಸಿಕ್ಕಿದೆ' ಎಂದು ಹೇಳಿದ್ದಾರೆ.

'ತಾನು ನಾಮಪತ್ರ ಸಲ್ಲಿಸುವ ಮುನ್ನವೂ ಪಕ್ಷದ ವರಿಷ್ಟರೊಂದಿಗೆ ಚರ್ಚಿಸಿ ಅವರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದೆ. ಇದೀಗ ಪಕ್ಷದ ವರಿಷ್ಟರೊಂದಿಗೆ ಚರ್ಚಿಸಿಯೇ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿರುವುದಾಗಿ' ಮೇದಪ್ಪ ತಿಳಿಸಿದ್ದಾರೆ. 'ತಾನು ಎಂದಿಗೂ ಪಕ್ಷಕ್ಕೆ ಬದ್ದನಾಗಿರುವುದರಿಂದಲೇ ಅವರ ಆದೇಶದಂತೆ ನಾಮಪತ್ರವನ್ನು ಹಿಂಪಡೆದಿದ್ದೇನೆ. ಪಕ್ಷದ ವರಿಷ್ಟರಲ್ಲಿ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಕಣದಲ್ಲಿರುವವರು : ಬಿಜೆಪಿ-ಸುನೀಲ್ ಸುಬ್ರಮಣಿ, ಕಾಂಗ್ರೆಸ್-ಎಚ್.ಎಸ್.ಚಂದ್ರಮೌಳಿ, ಜೆಡಿಎಸ್-ಸಂಕೇತ್ ಪೂವಯ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kodagu BJP rebel candidate S.G.Medappa convinced and decided to withdraw nomination from legislative council polls. Election will be held on December 27, 2015.
Please Wait while comments are loading...