'ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಬೆಂಗಳೂರು, ಮಾರ್ಚ್ 19 : ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಬಜೆಟ್ ನಂತರದ ಚರ್ಚೆಯಲ್ಲಿ ಎತ್ತಿನ ಹೊಳೆ ಯೋಜನೆ ಮೇಲೆ ಭರಪೂರ ಮಾತು ಹರಿದುಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎತ್ತಿನ ಹೊಳೆ ಯೋಜನೆಯ ಬಗ್ಗೆ ಒಂದಷ್ಟು ವಿವರಗಳು ಇಲ್ಲಿವೆ.

ಚಿಕ್ಕಮಗಳೂರಿನ ಸಂಸೆಯಲ್ಲಿ ಉಗಮವಾಗುವ ನೇತ್ರಾವತಿ ತನ್ನೊಳಗೆ ಹಲವು ಉಪನದಿಗಳನ್ನು ಸೇರ್ಪಡೆ ಮಾಡಿಕೊಂಡು ಉಪ್ಪಿನಂಗಡಿ ಸಮೀಪ ಕುಮಾರಧಾರ ನದಿಯೊಂದಿಗೆ ಸೇರಿ ಸಮುದ್ರದ ಕಡೆ ಹರಿಯುತ್ತದೆ. ಇದರಿಂದ ಸುಮಾರು 200 ಟಿಎಂಸಿಯಷ್ಟು ನೀರು ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತದೆ. [ಎತ್ತಿನಹೊಳೆ ಯೋಜನೆಯ ಟೆಂಡರ್ ಪಾರದರ್ಶಕವಾಗಿದೆ]

ನೀರಾವರಿ ತಜ್ಞ ದಿ.ಡಾ.ಜಿ.ಎಸ್.ಪರಮಶಿವಯ್ಯ ಅವರ ವರದಿಯಲ್ಲಿರುವುದು ಇದೇ. ಈ ವರದಿಯನ್ನಾಧರಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ರೈತರು ಹೋರಾಟ ಮಾಡುತ್ತಿದ್ದರು. ಹೋರಾಟಕ್ಕೆ ಅಂದಿನ ಎಸ್.ಎಂ ಕೃಷ್ಣ ನೇತೃತ್ವದ ಸ್ಪಂದನೆ ಸೂಚಿಸಿತು.

ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಮತ್ತು ಸಮೀಕ್ಷೆ ನಡೆಸುವಂತೆ ಸೂಚಿಸಿತು.ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ನೀಡಿತು. ಜಪಾನ್ ಮೂಲದ ಸಂಸ್ಥೆಯೊಂದಕ್ಕೆ ಸಮೀಕ್ಷೆ ನಡೆಸುವ ಗುತ್ತಿಗೆಯನ್ನು ನೀಡಲಾಯಿತು.

ಕರಾವಳಿ ಜನರ ವಿರೋಧ : ಸರ್ಕಾರದ ನಿರ್ಧಾರಕ್ಕೆ ಕರಾವಳಿ ಜನರ ವಿರೋಧ ವ್ಯಕ್ತವಾಯಿತು. ನೇತ್ರಾವತಿ ನದಿಯನ್ನು ಬಯಲುಸೀಮೆಯತ್ತ ತಿರುಗಿಸುವ ಮೂಲಕ ಸರ್ಕಾರ ಕರಾವಳಿ ಪ್ರದೇಶವನ್ನು ಬಂಜರು ಮಾಡಲು ಹೊರಟಿದೆ. ನದಿಯ ನೀರು ಸಮುದ್ರ ಸೇರದೇ ಹೋದರೆ ಮೀನುಗಳ ಸಂತಾನೋತ್ಪತ್ತಿ ನಡೆಯುವುದಿಲ್ಲ. ಇದರಿಂದ ಕರಾವಳಿ ಜನರ ಬೆನ್ನೆಲುಬೇ ಮುರಿದಂತಾಗುತ್ತದೆ ಎಂದು ಸರ್ಕಾರದ ವಿರುದ್ಧ ಆಂದೋಲನ ಆರಂಭಿಸಿದರು. [ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ]

ಇದರಿಂದಾಗಿ ಸರ್ಕಾರ ಯೋಜನೆಯ ಸಮೀಕ್ಷಾ ಕಾರ್ಯಕ್ಕೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿತು. ಇದರಿಂದ ಯೋಜನೆಗೆ ಆರಂಭದಲ್ಲೇ ಬಾಲಗ್ರಹ ಹಿಡಿಯಿತು. ಮತ್ತೊಂದು ಕಡೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೀರಿಗಾಗಿ ಹೋರಾಟದ ರೂಪುರೇಷೆ ಸಿದ್ಧಪಡಿಸತೊಡಗಿದರು. ಬಯಲುಸೀಮೆಗೆ ಅದರಲ್ಲೂ ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕೆಂದು ಆಗ್ರಹಿಸಿ ಬಾಗೇಪಲ್ಲಿಯಿಂದ ಬೆಂಗಳೂರಿನವರೆಗೆ ನೂರಾರು ರೈತರೊಂದಿಗೆ ಪಾದಯಾತ್ರೆ ಆರಂಭಿಸಿದರು.

yettinahole project

ಇದರ ನಡುವೆ ತಮ್ಮ ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾದ್ದರಿಂದ ಬೇಸರಗೊಂಡ ನೀರಾವರಿ ತಜ್ಞ ಪರಮಶಿವಯ್ಯ ಅವರು ಕರಾವಳಿ ಪ್ರದೇಶದ ಜನರ ಅಭಿಪ್ರಾಯ, ಪರಿಸರ ತಜ್ಞರ ವರದಿಯನ್ನು ಆಧರಿಸಿ ಮತ್ತೊಮ್ಮೆ ಅಧ್ಯಯನ ಆರಂಭಿಸಿದರು. ಸುದೀರ್ಘ ಒಂದು ವರ್ಷ ಕಾಲ ಅಧ್ಯಯನ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಅವರು ತಮ್ಮದೇ ಆದ ಯೋಜನೆಯನ್ನು ಮಾರ್ಪಡಿಸಿದರು. [ಎತ್ತಿನಹೊಳೆ ಯೋಜನೆಗೆ ತಡೆಯಾಜ್ಞೆ]

ಪರಿಷ್ಕೃತ ಯೋಜನೆಗೆ ಪಶ್ಚಿಮ ವಾಹಿನಿ ಎಂದು ಹೆಸರಿಟ್ಟ ಅವರು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ಶರಾವತಿ, ಅಘನಾಶಿನಿ, ನೇತ್ರಾವತಿ, ಕುಮಾರಧಾರ ಸೇರಿದಂತೆ ಹಲವು ನದಿಗಳ ನೀರಿನ ಉಪಯೋಗದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದರು. ಆದರೆ, ಆ ವೇಳೆಗೆ ಚುನಾವಣೆ ನಡೆದು ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ ಪತನಗೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು.

ನೂತನ ಸರ್ಕಾರದ ಮನವೊಲಿಕೆಗಾಗಿ ಪರಮಶಿವಯ್ಯ, ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವು ನಾಯಕರು ಪ್ರಯತ್ನ ಪಟ್ಟರು. ಆದರೆ, ಈ ವರದಿಯ ಬಗ್ಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಲಿಲ್ಲ. ಶ್ರೀರಾಮರೆಡ್ಡಿ ಆರಂಭಿಸಿದ್ದ ಹೋರಾಟ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ತೀವ್ರ ಸ್ವರೂಪ ಪಡೆದರೆ, ತುಮಕೂರಿನಲ್ಲಿ ಸಂಸದ ಬಸವರಾಜು ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. [ಎತ್ತಿನ ಹೊಳೆ ಯೋಜನೆ : ಸಚಿವ ಖಾದರ್ ಕೊಟ್ಟ ಉತ್ತರ]

ನೀರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ : ನೀರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೋರಾಟಗಾರರು ಘೋಷಿಸಿದರು. ಬೇರೆ-ಬೇರೆ ಪ್ರದೇಶಗಳಲ್ಲಿ ನೀರಿಗಾಗಿ ಹೋರಾಟ ನಡೆಸುತ್ತಿದ್ದವರೆಲ್ಲಾ ಒಂದೆಡೆ ಸೇರಿ ಸರ್ಕಾರದ ಮೇಲೆ ಒತ್ತಡ ಹೇರುವ ತೀರ್ಮಾನಕ್ಕೆ ಬಂದ ಪರಿಣಾಮ ದಕ್ಷಿಣ ಕಾಶಿ ಎಂದೇ ಪರಿಗಣಿಸಲ್ಪಡುವ ನಂದಿ ಬೆಟ್ಟದ ತಪ್ಪಲಿನಲ್ಲಿ ಹೋರಾಟಗಾರರೆಲ್ಲಾ ಸಭೆ ಸೇರಿದರು.

ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಯಸಾಧನೆ ಮಾಡಿಕೊಳ್ಳುವ ದೃಷ್ಟಿಯಿಂದ ತಮ್ಮ ಹೋರಾಟವನ್ನು ರಾಜಕೀಯ ಮುಕ್ತಗೊಳಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡು, ಬಯಲು ಸೀಮೆಗಳ 'ಶಾಶ್ವತ ನೀರಾವರಿ ಹೋರಾಟ ಸಮಿತಿಯ' ಹೆಸರಿನಲ್ಲಿ ವೇದಿಕೆಯೊಂದನ್ನು ಹುಟ್ಟು ಹಾಕಿ, ನೋಂದಣಿ ಮಾಡಿಸಿದರು. ಸಂಘಟನೆ ನೋಂದಣಿ ಮಾಡಿಸಿದ ನಂತರ, ಸಂಘಟನೆಯ ಪ್ರಮುಖರು ಕೋಲಾರ, ಚಿಕ್ಕಬಳ್ಳಾಪುರ,ತುಮುಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಚರಿಸಿ ಹೋರಾಟದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ವಿದ್ಯಮಾನ ನಡೆದು, ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ನೂತನವಾಗಿ ಬಿಜೆಪಿ-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಹಾಗೆಯೇ ರಾಜ್ಯದಲ್ಲಿ ಹಲವಾರು ರಾಜಕೀಯ ವಿದ್ಯಮಾನಗಳು ನಡೆದು ಸಂಸದ ಜಿ.ಎಸ್. ಬಸವರಾಜು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಅಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು.

ಯಡಿಯೂರಪ್ಪ ಆಪ್ತ ವಲಯದಲ್ಲಿದ್ದ ಅವರು, ನೀರಾವರಿ ತಜ್ಞ ಪರಮಶಿವಯ್ಯ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರು ಮತ್ತು ಸರ್ಕಾರದ ಹಲವು ಪ್ರತಿನಿಧಿಗಳೊಂದಿಗೆ ಹಲವು ಸಭೆ ನಡೆಸುವಲ್ಲಿ ಯಶಸ್ವಿಯಾದರು. ಪರಿಣಾಮ ಅಂದಿನ ಸರ್ಕಾರ ಪರಮಶಿವಯ್ಯ ವರದಿ ಆಧರಿಸಿ ಪಶ್ಚಿಮ ವಾಹಿನಿ ಯೋಜನೆ ಜಾರಿ ಸಂಬಂಧ ಸಮೀಕ್ಷೆ ನಡೆಸಲು, ಬಜೆಟ್‌ನಲ್ಲಿ ಅನುದಾನ ಘೋಷಿಸಿತು. ಮತ್ತೆ ಯೋಜನೆ ಕುರಿತಂತೆ ಜಪಾನ್‌ನ ಸಂಸ್ಥೆ ಸಮೀಕ್ಷೆ ನಡೆಸಿತು. ಮತ್ತೊಂದೆಡೆ ಹೈದರಾಬಾದ್ ಮೂಲದ ಸಂಸ್ಥೆಯೊಂದೂ ಕೂಡ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತು.

ಈ ಎರಡೂ ವರದಿಯಲ್ಲಿ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನ ಅಷ್ಟೊಂದು ಸುಲಭವಲ್ಲ. ಇದಕ್ಕೆ ಅಪಾರ ಹಣ ಬೇಕಾಗುತ್ತದೆ. ಬಯಲು ಸೀಮೆ ಮತ್ತು ಪಶ್ಚಿಮಘಟ್ಟದ ಹಲವೆಡೆ ಮುಳುಗಡೆಯಾಗಲಿದೆ. ಇದಕ್ಕೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತೊಡಕಾಗಲಿದೆ. ಇದರ ಬದಲಿಗೆ ಭದ್ರಾ ಮೇಲ್ದಂಡೆ ಸೇರಿದಂತೆ ಬಿಡಿ ಬಿಡಿಯಾಗಿ ಕೆಲವು ಯೋಜನೆ ರೂಪಿಸಿ, ಬಯಲು ಸೀಮೆಯ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದೆಂಬ ಶಿಫಾರಸುಗಳನ್ನು ಮಾಡಿತು.

ಸರ್ಕಾರ ಈ ಶಿಫಾರಸುಗಳ ಬಗ್ಗೆ ಅಧ್ಯಯನ ನಡೆಸುತ್ತಿರುವಾಗಲೇ ಈ ಹಿಂದಿನ ಸರ್ಕಾರ ಸಕಲೇಶಪುರದ ಗುಂಡ್ಯದ ಬಳಿ ಸ್ಥಾಪಿಸಲು ಯೋಚಿಸಿದ್ದ ಗುಂಡ್ಯ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತು. ಈ ಯೋಜನೆ ಕುರಿತಂತೆ ಅಧ್ಯಯನ ನಡೆಸಿದ ಸಮಿತಿ ಗುಂಡ್ಯದಲ್ಲಿ ಜಲವಿದ್ಯುತ್ ಉತ್ಪಾದಿಸಿದ ನಂತರ ನೀರು ಕುಮಾರಧಾರ ಮೂಲಕ ಸಮುದ್ರ ಸೇರುತ್ತದೆ. ಅದನ್ನು ತಡೆಹಿಡಿದು ಹೇಮಾವತಿ ಸೇರುವಂತೆ ಕೆಲ ಜಲಾಶಯಗಳಿಗೆ ಸೇರ್ಪಡೆ ಮಾಡಬಹುದು ಎಂಬ ಅಭಿಪ್ರಾಯ ನೀಡಿತು.

ಈ ಅಭಿಪ್ರಾಯದ ಆಧಾರದಲ್ಲಿ ಕಾರ್ಯನಿರ್ವಹಿಸಿದ ಪರಿಸರ ತಜ್ಞ ಕ್ಯಾಪ್ಟನ್ ರಾಜುರಾವ್, ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ನೇತೃತ್ವದ ತಂಡಗಳು 'ಎತ್ತಿನಹೊಳೆ' ಎಂಬ ಹೊಸ ಪರಿಕಲ್ಪನೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yettinahole drinking water project will provide water to drought hit Kolar, Chickballapur, Ramanagaram, Tumakuru, Bengaluru Rural, and Hassan districts. Karnataka Neeravari Nigam Limited (KNNL) taken up the project.
Please Wait while comments are loading...