ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತಿನ ಹೊಳೆ ಯೋಜನೆ ನೀರಿನ ಲಭ್ಯತೆಯ ಬಗ್ಗೆ ಆತಂಕ

By ಶಂಭು ಹುಬ್ಬಳ್ಳಿ
|
Google Oneindia Kannada News

'ಎತ್ತಿನಹೊಳೆ' ಎನ್ನುವುದು ಗುಂಡ್ಯ ಸಮೀಪದಲ್ಲಿ ಜನ್ಮ ತಾಳುವ ಎತ್ತಿನಹಳ್ಳ. ಇದು ಹಲವು ಹಳ್ಳಗಳನ್ನು ಸೇರಿಸಿಕೊಂಡು ಎತ್ತಿನಹೊಳೆಯಾಗಿ ಕುಮಾರಧಾರಾವನ್ನು ಸೇರುತ್ತದೆ. ಈ ಎತ್ತಿನಹಳ್ಳ ಉಗಮವಾಗುವ ಸಕಲೇಶಪುರದ ಪಶ್ಚಿಮಘಟ್ಟ ಅರಣ್ಯ ಪ್ರದೇಶ, ಮುಂಗಾರು ಅವಧಿಯಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಮಳೆಗಾಲದ ಅವಧಿಯಲ್ಲಿ ಇಲ್ಲಿ ದಿನವೊಂದಕ್ಕೆ ಬೀಳುವ ಮಳೆಯ ಸರಾಸರಿ ಪ್ರಮಾಣ 3072 ಮಿ.ಮೀ.

ಮಳೆಗಾಲದ ಅವಧಿಯಲ್ಲಿ ಈ ಹಳ್ಳ ತುಂಬಿ ಹರಿಯುತ್ತದೆ. ತುಂಬಿ ಹರಿಯುವ ಹಳ್ಳದ ಸಮೀಪದಲ್ಲಿ ಒಡ್ಡುಗಳನ್ನು ನಿರ್ಮಿಸಿ, ಹಳ್ಳದ ನೀರು ಒಡ್ಡು ಸೇರುವಂತೆ ಮಾಡುವುದು, ತುಂಬಿದ ಒಡ್ಡುಗಳಿಂದ ನೀರನ್ನು ವಿದ್ಯುತ್ ಸೋಲಾರ್ ಅಳವಡಿಸಿ, ಕೆಳಭಾಗದಲ್ಲಿನ ಜಲಾಶಯ ಸೇರುವಂತೆ ಮಾಡುವುದು. ಅನಂತರ ಕೊಳವೆ ಮಾರ್ಗದ ಮೂಲಕ ಹಾಸನದ ಅರಸೀಕೆರೆಯ ಹಲವು ಕೆರೆಗಳನ್ನು ತುಂಬಿಸಿ, ರಾಮನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಪ್ರಮುಖ ತಿರುಳು. [ತಡೆಯಾಜ್ಞೆ ಇದ್ದರೂ ಎತ್ತಿನಹೊಳೆ ಕಾಮಗಾರಿ ನಿಂತಿಲ್ಲ!]

ಎತ್ತಿನ ಹಳ್ಳ ಉಗಮವಾಗುವ ಪ್ರದೇಶದಲ್ಲಿರುವ ಹೊಂಗಡಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ ಮತ್ತು ಕೇರಿ ಹಳ್ಳಗಳ ನೀರು ಸಂಗ್ರಹಣಕ್ಕೆ 8 ಒಡ್ಡುಗಳನ್ನು ನಿರ್ಮಿಸಲಾಗುವುದು. ಈ ಒಡ್ಡುಗಳ ನೀರೆತ್ತಲು ಬೃಹತ್ ಸಾಮರ್ಥ್ಯದ ವಿದ್ಯುತ್ ಸೋಲಾರ್ ಅಳವಡಿಸಲಾಗುವುದು. ಅನಂತರ ದೊಡ್ಡ ಗಾತ್ರದ ಪೈಪ್‌ಗಳ ಮೂಲಕ ಒಡ್ಡುಗಳಲ್ಲಿನ ನೀರನ್ನು ಸಕಲೇಶಪುರದ ಹರಪನಹಳ್ಳಿ ಸಮೀಪ ಬ್ಯಾರೇಜ್ ನಿರ್ಮಿಸಿ ಅಲ್ಲಿಗೆ ಸೇರುವಂತೆ ಮಾಡಲಾಗುವುದು. [ಎತ್ತಿನಹೊಳೆ ಯೋಜನೆ: ವೀರಪ್ಪ ಮೊಯ್ಲಿಗೆ ಬಹಿರಂಗ ಪತ್ರ]

ಅಲ್ಲಿಂದ ಕೊಳವೆಗಳ ಮೂಲಕ ಗುರುತ್ವಾಕರ್ಷಣೆಯಿಂದ ನೀರನ್ನು ಹರಿಸುವ ವ್ಯವಸ್ಥೆ ಮಾಡಲಾಗುವುದು. ಕೊಳವೆಗಳ ಮೂಲಕ ಈ ರೀತಿ ಸಾಗುವ ನೀರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಸಮೀಪ ನಿರ್ಮಿಸಲಿರುವ ಅಣೆಕಟ್ಟೆಯನ್ನು ಸೇರಲಿದೆ. ಸುಮಾರು ಸುಮಾರು 5.78 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಲಾಗಿದೆ. [ಎತ್ತಿನಹೊಳೆ ಪರಿಹಾರಕ್ಕೆ ಮುಂದಾದ ಪೇಜಾವರ ಶ್ರೀ]

ಒಟ್ಟಾರೆ ಈ ಯೋಜನೆಯಿಂದ 24.01 ಟಿಎಂಸಿ ನೀರು ಲಭ್ಯವಾಗಲಿದ್ದು, ಇದಕ್ಕಾಗಿ 1,291 ಕೋಟಿ ರೂಪಾಯಿ ವೆಚ್ಚವಾಗಲಿದೆ. ಯೋಜನೆಯ ಕಾಮಗಾರಿಗಳಿಗೆ ಮೊದಲ ಹಂತದಲ್ಲಿ ಒಟ್ಟು 235 ಹೆಕ್ಟರ್ ಭೂಮಿ ಅಗತ್ಯವಿದೆ. ಎರಡನೇ ಹಂತದಲ್ಲಿ 4,900 ಹೆಕ್ಟರ್ ಭೂಮಿ ಬೇಕು. ಸುಮಾರು 40 ಎಕರೆ ಅರಣ್ಯ ಪ್ರದೇಶ ಕೂಡ ಮುಳುಗಡೆಯಾಗಲಿದೆ. ಕಿರು ಜಲಾಶಯ ಅಥವಾ ಒಡ್ಡುಗಳಿಂದ ನೀರೆತ್ತಲು ವಾರ್ಷಿಕ 274 ಮೆಗಾವಾಟ್ ವಿದ್ಯುತ್ ಅಗತ್ಯವಿದೆ. ಇಷ್ಟೆಲ್ಲಾ ವೆಚ್ಚದ ನಂತರ ಸುಮಾರು 68.35 ಲಕ್ಷ ಜನರಿಗೆ ಯೋಜನೆಯಿಂದ ಲಾಭವಾಗಲಿದೆ ಎಂದು ಸರ್ಕಾರ ಅಂದಾಜು ಮಾಡಿದೆ. [ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]

netravati

ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿಗೆ ಶಂಕುಸ್ಥಾಪನೆ ನಡೆದಿದೆ. ಭೂಸ್ವಾಧೀನ ಪ್ರಕ್ರಿಯೆ ಅಗತ್ಯವಿಲ್ಲದ ಕಡೆ ಕಾಮಗಾರಿ ಕೂಡ ಬಹುತೇಕ ಪೂರ್ಣಗೊಂಡಿದ್ದು, ಅರಣ್ಯ ಪ್ರದೇಶ ಹಾಗೂ ಖಾಸಗಿ ಭೂಮಿ ಸ್ವಾಧೀನ ಕುರಿತಂತೆ ಮಾತುಕತೆ ನಡೆದಿದೆ. ಈ ಯೋಜನೆಗೂ ಕರಾವಳಿಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿ ಪ್ರದೇಶದಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಈ ಹೋರಾಟವನ್ನು ಬೆಂಬಲಿಸಿದ್ದಾರೆ. ಮತ್ತೊಂದೆಡೆ ಬಯಲುಸೀಮೆಯಲ್ಲಿ ಯೋಜನೆಯನ್ನು ವಿರೋಧಿಸಲಾಗುತ್ತಿದೆ. ಪ್ರಮುಖವಾಗಿ ಯೋಜನೆಗೆ ತಗಲುವ ವೆಚ್ಚ, ಅರಣ್ಯ ಭೂಮಿಯ ಮುಳುಗಡೆ ಹಾಗೂ ನೀರಿನ ಲಭ್ಯತೆಯ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.[ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ]

ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನಡೆಸಿರುವ ಅಧ್ಯಯನದ ಪ್ರಕಾರ, ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗಡಹಳ್ಳಿ ಪ್ರದೇಶದಲ್ಲಿ ಅಷ್ಟು ನೀರಿನ ಉತ್ಪಾದನೆ ಇಲ್ಲ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಇಲ್ಲಿ ಉತ್ಪಾದನೆಯಾಗುವ ನೀರಿನ ಪ್ರಮಾಣ ಕೇವಲ 15 ಟಿಎಂಸಿ ಮಾತ್ರ.

ಹೀಗಿರುವಾಗ ಮಳೆಗಾಲದ ಅವಧಿಯಲ್ಲಿ ಕಿರುಜಲಾಶಯಗಳಿಗೆ ಬೃಹತ್ ಸೋಲಾರ ಬಳಸಿ, ನೀರು ಭರ್ತಿ ಮಾಡಿ, 24.01 ಟಿಎಂಸಿ ನೀರು ಸಂಗ್ರಹಿಸುವುದು ಅಸಾಧ್ಯ. ಹೀಗಾಗಿ ಯೋಜನೆಗೆ ಹಣ ಪೋಲಾಗುತ್ತದೆ ಎಂದು ಹೇಳಿದ್ದಾರೆ. ಇದು ಬಯಲು ಸೀಮೆಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯೋಜನೆ ಜಾರಿಗೊಂಡರೂ ತಮಗೆ ನೀರು ಸಿಗುವುದಿಲ್ಲ. ನೀರಾವರಿಗೆ ಇರಲಿ, ಕುಡಿಯಲೂ ಸಹ ನೀರು ಸಿಗುವುದಿಲ್ಲ ಎಂಬ ಆತಂಕ ತೀವ್ರಗೊಂಡಿದೆ.

ಇದರ ಪರಿಣಾಮ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತೆ ಹೋರಾಟದ ಅಖಾಡ ಪ್ರವೇಶಿಸಿದೆ. ಎತ್ತಿನ ಹೊಳೆ ಯೋಜನೆ ಹೊರತುಪಡಿಸಿ, ಪರಮಶಿವಯ್ಯ ವರದಿ ಆಧರಿಸಿ ಪಶ್ಚಿಮ ವಾಹಿನಿ ಯೋಜನೆ ರೂಪಿಸಬೇಕು. ಈ ಮೂಲಕ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಕ್ಷಾತೀತವಾದ ವೇದಿಕೆ ಚಿಕ್ಕಬಳ್ಳಾಪುರ ಚದುಲಪುರ ಗೇಟ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆಯ ನೀರಿನ ದಾಹ ಇಂಗುವುದಿಲ್ಲ. ಇದಕ್ಕಾಗಿ ಪರ್ಯಾಯ ಯೋಜನೆ ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ ಪ್ರತಿಭಟನಾಕಾರರು ಪ್ರತಿದಿನ ಕೆಲ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಸರ್ಕಾರಕ್ಕೆ ಬಿಸಿ
ಮುಟ್ಟಿಸತೊಡಗಿದರು.

ಇದೀಗ ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನೀರನ್ನು ಕೋಲಾರ ದೊಡ್ಡಬಳ್ಳಾಪುರದ ಕಡೆಗೆ ಪೂರೈಸುವ ಯೋಚನೆಯನ್ನು ಸರಕಾರ ಮಾಡುತ್ತಿದೆ. ಅದು ಕಾರ್ಯಗತಗೊಳ್ಳಲು ಏನೇನು ಅಡಚಣೆಗಳಿವೆಯೋ ಕಾದು ನೋಡಬೇಕು.

English summary
Karnataka Neeravari Nigam Limited (KNNL) in his clarification said that, 24 TMC of water is available on Yettinahole drinking water project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X