Virat Kohli: ಇನ್ಮುಂದೆ ನಮಗೆ ವಿರಾಟ್ ಕೊಹ್ಲಿಯಂತಹ ಆಟಗಾರ ಸಿಗುವುದಿಲ್ಲ ಎಂದ ದಿನೇಶ್ ಕಾರ್ತಿಕ್: ಭಾರಿ ವೈರಲ್
Virat Kohli: ಐಪಿಎಲ್ 2026ರ ಸೀಸನ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆಯೇ ಕೊಹ್ಲಿ ಅವರ ಆಟದ ಬಗ್ಗೆ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸದ್ಯ ಎಲ್ಲಡೆ ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ ಅವರು, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ಕಲೆ ಹೊಂದಿರುವ ಟೀಂ ಇಂಡಿಯಾ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಪ್ರತಿ ವರ್ಷವೂ ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಈಗಿನ ಟಿ20 ಕ್ರಿಕೆಟ್‌ನ ವೇಗಕ್ಕೆ ತಕ್ಕಂತೆ ಅವರು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಳ್ಳುವ ಸಾಮರ್ಥ್ಯವನ್ನು ಡಿಕೆ ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಶ್ಲಾಘಿಸಿದ ದಿನೇಶ್ ಕಾರ್ತಿಕ್
"ವಿರಾಟ್ ಕೊಹ್ಲಿ ಅವರು ಪಂದ್ಯದ ದಿನಗಳಲ್ಲಿ ಮಾತ್ರವಲ್ಲದೆ, ಅಭ್ಯಾಸದ ಅವಧಿಯಲ್ಲೂ ಅತ್ಯಂತ ಶಿಸ್ತು ಮತ್ತು ಕ್ರಮಬದ್ಧವಾದ ಯೋಜನೆಯನ್ನು ಹೊಂದಿರುತ್ತಾರೆ. ಅವರು ಅಭ್ಯಾಸ ಮಾಡುವ ರೀತಿಯನ್ನು ಹತ್ತಿರದಿಂದ ನೋಡುವುದೇ ಯುವ ಆಟಗಾರರಿಗೆ ಒಂದು ದೊಡ್ಡ ಕಲಿಕೆಯ ಅನುಭವ. ಅಂತಹ ದಿಗ್ಗಜ ಆಟಗಾರನೊಂದಿಗೆ ಸಮಯ ಕಳೆಯುವುದು ಅದೃಷ್ಟ. ಈಗ ಯುವ ಪ್ರತಿಭೆಗಳು ಅತಿ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದರೂ, ಕೊಹ್ಲಿ ಅವರಿಗೆ ಸಮನಾಗಿ ಪ್ರದರ್ಶನ ನೀಡುತ್ತಿರುವುದೇ ಒಂದು ಅದ್ಭುತ," ಎಂದು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿ ಸಾಮರ್ಥ್ಯ ಹೀಗಿದೆ
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಅವರನ್ನು ಕ್ರಿಕೆಟ್‌ನ ಮೂರೂ ಮಾದರಿಯಲ್ಲೂ (ಟೆಸ್ಟ್, ಏಕದಿನ ಮತ್ತು ಟಿ20) ಸ್ಥಿರವಾಗಿ ಪ್ರದರ್ಶನ ನೀಡಬಲ್ಲ ಅಪರೂಪದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೂರೂ ಮಾದರಿಗಳಲ್ಲಿ ನಂ.1 ಸ್ಥಾನಕ್ಕೇರಿದ ವಿಶ್ವದ ಪ್ರಮುಖ ಬ್ಯಾಟರ್‌ಗಳಲ್ಲಿ ಕೊಹ್ಲಿ ಕೂಡ ಒಬ್ಬರು.
ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟವನ್ನು ಬದಲಿಸಿಕೊಳ್ಳುವ ಅವರ ಅದ್ಭುತ ಕೌಶಲ್ಯವು ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ವಿ ಆಟಗಾರನನ್ನಾಗಿ ಮಾಡಿದೆ. ಟೆಸ್ಟ್ ಪಂದ್ಯಗಳ ತಾಳ್ಮೆ ಇರಲಿ ಅಥವಾ ಟಿ20 ಕ್ರಿಕೆಟ್‌ನ ವೇಗವಿರಲಿ ಕೊಹ್ಲಿ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಉನ್ನತ ಮಟ್ಟದ ಶಿಸ್ತು ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡಿದ್ದಾರೆ. ಐಪಿಎಲ್ 2026ರ ಸೀಸನ್‌ನಲ್ಲಿಯೂ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಆರ್‌ಸಿಬಿ ತಂಡದ ಪರ ಪ್ರಮುಖ ರನ್ ಸರದಾರನಾಗಿ ಹೊರಹೊಮ್ಮಿದ್ದಾರೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಕ್ರೀಡಾ ನಿರೂಪಕಿ ಮಾಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡುತ್ತಾ ದಿನೇಶ್ ಕಾರ್ತಿಕ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಒಂದೇ ರೀತಿಯ ಕೌಶಲ್ಯಗಳನ್ನು ಇಟ್ಟುಕೊಂಡು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ತುಂಬಾ ಕಷ್ಟ. ಏಕೆಂದರೆ ಪ್ರತಿ ಮಾದರಿಯ ನಡುವೆ ತುಂಬಾ ವ್ಯತ್ಯಾಸಗಳಿವೆ. ಟಿ20ಯಲ್ಲಿ ಮಿಂಚಲು ಬೇಕಾದ ಕೌಶಲ್ಯಗಳು ಟೆಸ್ಟ್ ಕ್ರಿಕೆಟ್‌ಗೆ ಬೇಕಾದ ಕೌಶಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ಆದ್ದರಿಂದ ಭವಿಷ್ಯದಲ್ಲಿ ಮೂರೂ ಮಾದರಿಗಳಲ್ಲಿ ಆಡಬಲ್ಲ ಬ್ಯಾಟರ್‌ಗಳು ಅಥವಾ ಬೌಲರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆಂದು ನನಗನ್ನಿಸುವುದಿಲ್ಲ," ಎಂದು ಅವರು ಹೇಳಿದ್ಧಾರೆ.
'ಇನ್ನೊಬ್ಬ ವಿರಾಟ್ ಕೊಹ್ಲಿ ಸಿಗುವುದಿಲ್ಲ'
ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಏಕಕಾಲದಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದ ಅಪರೂಪದ ಬ್ಯಾಟರ್‌ಗಳಲ್ಲಿ ಕೊಹ್ಲಿ ಒಬ್ಬರು ಎಂದು ಮಾಯಂತಿ ಅವರು ನೆನಪಿಸಿದಾಗ ಇದಕ್ಕೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿ, "ಹೌದು ವಿರಾಟ್ ಕೊಹ್ಲಿ ಅಂತಹ ಆಟಗಾರ ಮತ್ತೊಬ್ಬರಿಲ್ಲ. ನಾನು ನಿಮಗೆ ಭರವಸೆ ನೀಡಬಲ್ಲೆ, ಇನ್ಮುಂದೆ ನಮಗೆ ಮತ್ತೊಬ್ಬ ವಿರಾಟ್ ಕೊಹ್ಲಿ ಸಿಗುವುದಿಲ್ಲ. ಅವರ ಸಾಧನೆಗಳು ಕ್ರೀಡಾಲೋಕದ ದಂತಕಥೆಯಾಗಿ ಉಳಿಯುತ್ತವೆ," ಎಂದು ಕಾರ್ತಿಕ್ ಹೇಳಿದರು.
ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ಸಾಧನೆ
2024 ಮತ್ತು 2025ರ ಸೀಸನ್‌ಗಳಂತೆಯೇ ಐಪಿಎಲ್ 2026 ರಲ್ಲೂ ವಿರಾಟ್ ಕೊಹ್ಲಿ ಸದ್ಯ ಆರ್‌ಸಿಬಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಇದುವರೆಗೆ 54ರ ಸರಾಸರಿ ಮತ್ತು 165ರ ಸ್ಟ್ರೈಕ್ ರೇಟ್‌ನಲ್ಲಿ 379 ರನ್ ಗಳಿಸಿದ್ದಾರೆ. ಪ್ರಸ್ತುತ ಅವರು ಐಪಿಎಲ್ 2026ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಅವರು ಹಲವು ಬಾರಿ ಆರೆಂಜ್ ಕ್ಯಾಪ್ ಧರಿಸಿದ್ದರು. ಟೂರ್ನಿಯಲ್ಲಿ ಇದುವರೆಗೆ 3 ಅರ್ಧಶತಕಗಳನ್ನು ಬಾರಿಸಿದ್ದು, 81 ರನ್ ಅವರ ಗರಿಷ್ಠ ಮೊತ್ತವಾಗಿದೆ. ಅಲ್ಲದೆ ಈ ಟೂರ್ನಿಯಲ್ಲಿ ಜಂಟಿಯಾಗಿ ಅತಿ ಹೆಚ್ಚು ಬೌಂಡರಿಗಳನ್ನು ಸಿಡಿಸಿದ ದಾಖಲೆಯನ್ನೂ ಅವರು ಹೊಂದಿದ್ದಾರೆ.












Click it and Unblock the Notifications