ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಮಾಜಿ ಶಾಸಕ
ಬೆಂಗಳೂರು, ಜನವರಿ 07 : "ನಾನು ಕೂಡಾ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ. ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರಿಗೆ ಈ ಕುರಿತು ಪತ್ರ ಬರೆದಿದ್ದೇನೆ" ಎಂದು ಮಾಜಿ ಶಾಸಕ ಕೆ. ಎನ್. ರಾಜಣ್ಣ ಹೇಳಿದರು.
ಕೆಪಿಸಿಸಿ ಅಧ್ಯಕ್ಷರು ಯಾರು?ಎಂದು ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮಧುಗಿರಿ ಕ್ಷೇತ್ರದ ಮಾಜಿ ಶಾಸಕರು ಹುದ್ದೆಯ ಆಕಾಂಕ್ಷಿ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
"ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ನಾನು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದೇನೆ. ಈ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಜನವರಿ 9ರಂದು ದೆಹಲಿಗೆ ತೆರಳಲಿದ್ದೇನೆ" ಎಂದರು.

"ನಾನು ದೆಹಲಿಗೆ ಹೋಗುವ ಮೊದಲು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಇಲ್ಲವಾದಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ" ಎಂದು ಕೆ. ಎನ್. ರಾಜಣ್ಣ ಹೇಳಿದರು.
15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಹೈಕಮಾಂಡ್ ಚಾಲನೆ ನೀಡಿದೆ.
ಡಿ. ಕೆ. ಶಿವಕುಮಾರ್, ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಎಂ. ಬಿ. ಪಾಟೀಲ್ ಹೆಸರು ಕೇಳಿ ಬರುತ್ತಿದೆ.












Click it and Unblock the Notifications