• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಕೆಎಂಎಫ್ ಚುನಾವಣೆ: ಬಾಲಚಂದ್ರ ಜಾರಕಿಹೊಳಿಗೆ 'ಹಾಲಿನ ಅಭಿಷೇಕ'?

|

ಬೆಂಗಳೂರು, ಆಗಸ್ಟ್ 31: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನದ ಚುನಾವಣೆ ಶನಿವಾರ ನಡೆಯಲಿದೆ. ಆದರೆ, ಜಿದ್ದಾಜಿದ್ದಿನ ಪೈಪೋಟಿಯ ನಿರೀಕ್ಷೆಯಲ್ಲಿದ್ದ ಈ ಚುನಾವಣೆ ಏಕಪಕ್ಷೀಯ ಫಲಿತಾಂಶ ನೀಡುವ ಸೂಚನೆ ಕೊಟ್ಟಿದೆ.

ಕೆಎಂಎಫ್‌ನಲ್ಲಿ ದೊಡ್ಡ ಪ್ರಾಬಲ್ಯ ಹೊಂದಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಬಲ ಕುಗ್ಗಿಸಲಾಗಿದೆ. ಎರಡು ಬಾರಿ ಅಧ್ಯಕ್ಷರಾಗಿದ್ದ ಅವರು, ಮತ್ತೆ ಅಧ್ಯಕ್ಷ ಸ್ಥಾನ ತಮ್ಮ ಕೈಯಲ್ಲಿ ಇರಬೇಕು ಎಂಬ ಕಾರಣಕ್ಕೆ ಲಾಬಿ ನಡೆಸಿದ್ದರು. ಈ ನಡುವೆ ಬಿಜೆಪಿ ಕೆಎಂಎಫ್‌ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಷ್ಟೇ ಮಹತ್ವದ್ದೆಂದು ಪರಿಗಣಿಸಲಾಗಿರುವ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

ಎಚ್‌.ಡಿ.ರೇವಣ್ಣ ಬಲ ಕುಗ್ಗಿಸಲು ಯಡಿಯೂರಪ್ಪ ಹೊಸ ಹೆಜ್ಜೆ!

ರೇವಣ್ಣ ಅವರ ನಿಯಂತ್ರಣದಲ್ಲಿದ್ದ ಮಂಡಳದ ನಿರ್ದೇಶಕರು ಈಗ ಜಾರಕಿಹೊಳಿ ಅವರ ಪಾಳಯಕ್ಕೆ ಬಂದಿದ್ದಾರೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವು ಸುಲಭವಾಗಲಿದೆ. ಶನಿವಾರದ ಚುನಾವಣೆ ವೇಳೆ ಯಾವುದೇ ಪವಾಡಗಳು ನಡೆಯದೆ ಇದ್ದರೆ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಗದ್ದುಗೆಗೆ ಏರುವುದು ನಿಶ್ಚಿತ.

ಮಧ್ಯಾಹ್ನ 2 ಗಂಟೆಗೆ ಫಲಿತಾಂಶ

ಮಧ್ಯಾಹ್ನ 2 ಗಂಟೆಗೆ ಫಲಿತಾಂಶ

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಅಲ್ಲಿಯವರೆಗೂ ಅವಕಾಶವಿರಲಿದೆ. ಬಳಿಕ ಸಲ್ಲಿಕೆಯಾದ ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಮಧ್ಯಾಹ್ನ 1.45ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯಲಿದೆ. 2 ಗಂಟೆ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.

ಜಾರಕಿಹೊಳಿ ಅವಿರೋಧ ಆಯ್ಕೆ ಖಚಿತ

ಜಾರಕಿಹೊಳಿ ಅವಿರೋಧ ಆಯ್ಕೆ ಖಚಿತ

ಮಂಡಳದ 16 ನಿರ್ದೇಶಕರಲ್ಲಿ ತಮ್ಮೊಂದಿಗೆ 11 ನಿರ್ದೇಶಕರು ಇದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಳ್ಳುವ ಇಬ್ಬರು ಅಧಿಕಾರಿಗಳು ಭಾಗವಹಿಸಲಿದ್ದಾರೆ ಅವರು ಸರ್ಕಾರದ ಪ್ರತಿನಿಧಿಗಳಾಗಿರುವುದರಿಂದ ಸಹಜವಾಗಿಯೇ ಬಾಲಚಂದ್ರ ಜಾರಕಿಹೊಳಿ ಅವರ ಬಲ ಹೆಚ್ಚಲಿದೆ. ಹೀಗಾಗಿ ಅತ್ಯಧಿಕ ಬೆಂಬಲ ಹೊಂದಿರುವ ಅವರು ಅವಿರೋಧವಾಗಿಯೇ ಆಯ್ಕೆಯಾಗುವ ಸಾಧ್ಯತೆ ಇದೆ.

ಬೆಂಬಲ ಕಳೆದುಕೊಂಡ ರೇವಣ್ಣ

ಬೆಂಬಲ ಕಳೆದುಕೊಂಡ ರೇವಣ್ಣ

ನಾಮಪತ್ರ ಸಲ್ಲಿಕೆ ಮಾಡಲು ಸೂಚಕರು ಹಾಗೂ ಅನುಮೋದಕರಾಗಿ ಇಬ್ಬರು ನಿರ್ದೇಶಕರ ಸಹಿಯ ಅಗತ್ಯವಿರುತ್ತದೆ. ಆದರೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಎಚ್ ಡಿ ರೇವಣ್ಣ ಅವರ ಪರವಾಗಿ ಇರುವುದು ಒಬ್ಬರೇ ನಿರ್ದೇಶಕರ ಬೆಂಬಲ. ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಅವರ ಸಹೋದರ ಮಾರುತಿರಾವ್ ಕಾಶಂಪುರ ಅವರ ಬೆಂಬಲ ಮಾತ್ರ ರೇವಣ್ಣ ಅವರಿಗೆ ಇದೆ. ಹೀಗಾಗಿ ಅವರಿಗೆ ಸೂಚಕರು ಸಿಕ್ಕರೂ ಅನುಮೋದಕರಿಲ್ಲದೆ ಸ್ಪರ್ಧಿಸುವುದೇ ಅಸಾಧ್ಯವಾಗಲಿದೆ.

ಏಕಾಂಗಿಯಾದ ಭೀಮಾನಾಯ್ಕ್

ಏಕಾಂಗಿಯಾದ ಭೀಮಾನಾಯ್ಕ್

ಹಗರಿಬೊಮ್ಮನಹಳ್ಳಿ ಕಾಂಗ್ರೆಸ್‌ನ ಶಾಸಕ ಭೀಮಾನಾಯ್ಕ್ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಎಚ್ ಡಿ ರೇವಣ್ಣ ಅವರ ಪ್ರಭಾವಳಿ ನಡುವೆಯೂ ಅಧ್ಯಕ್ಷ ಗಾದಿಗೆ ಲಾಬಿ ನಡೆಸುವ ಪ್ರಯತ್ನ ನಡೆಸಿದ್ದರು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೂ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಅವರ ಬೆಂಬಲ ಪಡೆಯಲು ಪ್ರಯತ್ನಿಸಿದ್ದರು. ಅದು ಫಲ ಕೊಟ್ಟಿಲ್ಲ. ಹೀಗಾಗಿ ಭೀಮಾನಾಯ್ಕ್ ಒಬ್ಬಂಟಿಯಾಗಿದ್ದು, ಅವರಿಗೆ ಸೂಚಕರೂ ಇಲ್ಲ, ಅನುಮೋದಕರೂ ಇಲ್ಲದಂತಾಗಿದೆ. ಈ ಕಾರಣದಿಂದ ರೇವಣ್ಣ ಮತ್ತು ಭೀಮಾನಾಯ್ಕ್ ಇಬ್ಬರೂ ನಾಮಪತ್ರ ಸಲ್ಲಿಸಿದರು ಕೂಡ ಅವು ಅಂಗೀಕಾರ ಆಗುವುದಿಲ್ಲ. ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧ ಆಯ್ಕೆ ಸುಲಭವಾಗಲಿದೆ.

ಚುನಾವಣೆ ಮುಂದೂಡಿದ್ದ ಸರ್ಕಾರ

ಚುನಾವಣೆ ಮುಂದೂಡಿದ್ದ ಸರ್ಕಾರ

ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯು ಜುಲೈ 29ರಂದೇ ನಡೆಯಬೇಕಿತ್ತು. ಶತಾಯಗತಾಯ ಅದರ ಹಿಡಿತವನ್ನು ತಾವೇ ಹೊಂದಬೇಕು ಎಂದು ರೇವಣ್ಣ ಅವರು, ಎದುರಾಳಿಗಳಿಗೆ ಬೆಂಬಲ ಸಿಗಬಾರದು ಎಂಬ ಕಾರಣಕ್ಕೆ ಎಂಟು ನಿರ್ದೇಶಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರು. ಇದಕ್ಕೆಪ್ರತಿತಂತ್ರ ಹೂಡಿದ್ದ ಬಿಜೆಪಿ ಸರ್ಕಾರ ಅಂದು ನಡೆಯಬೇಕಿದ್ದ ಚುನಾವಣೆಯನ್ನೇ ಮುಂದೂಡಿತ್ತು. ರೇವಣ್ಣ ಅವರು ಕೂಡಲೇ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿದ್ದರೂ ಅವರಿಗೆ ಪ್ರಯೋಜನವಾಗಿರಲಿಲ್ಲ. ಈ ನಡುವೆ ರೇವಣ್ಣ ಅವರ ಜತೆಗಿದ್ದ ನಿರ್ದೇಶಕರನ್ನು ಬಾಲಚಂದ್ರ ಜಾರಕಿಹೊಳಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದಾರೆ.

English summary
BJP Arabhavi MLA Balachandra Jarkiholi likely to be elected as KMF president. The election will be held on August 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X