Nandini Milk Price Hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ನಂದಿನಿ ಹಾಲಿನ ದರ ಹೆಚ್ಚಳ! ಯಾವ ಪ್ಯಾಕೆಟ್‌ಗೆ ಎಷ್ಟು?
ಬೆಂಗಳೂರು, ಜೂನ್. 25: ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation) ನಂದಿನಿ ಹಾಲಿನ ದರ ಏರಿಕೆಯನ್ನು ಘೋಷಿಸಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಎಳೆದಿದ್ದ ಕರ್ನಾಟಕ ಸರ್ಕಾರ, ಈಗ ಹಾಲಿನ ದರ ಏರಿಕೆ ಮಾಡಿ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.
ದರ ಏರಿಕೆಯಿಂದ ಪ್ರತಿ ಲೀಟರ್ ಹಾಲಿಗೆ 2.10 ರೂಪಾಯಿ ಹೆಚ್ಚಳವಾಗಲಿದೆ. ಬೆಲೆ ಹೊಂದಾಣಿಕೆಯ ಜೊತೆಗೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಒದಗಿಸಲು ನಂದಿನಿ ಹಾಲಿನ ಪ್ರತಿ ಪ್ಯಾಕೆಟ್ ಈಗ 50 ಮಿಲಿ ಹೆಚ್ಚು ಹಾಲನ್ನು ಹೊಂದಿರುತ್ತದೆ. ಉದಾಹರಣೆಗೆ, ಅರ್ಧ-ಲೀಟರ್ ಪ್ಯಾಕೆಟ್ ಈ ಮೊದಲು 500 ಮಿಲಿ ಹಾಲು ಹೊಂದಿರುತ್ತಿತ್ತು. ನಾಳೆಯಿಂದ 550 ಮಿಲಿ ಹಾಲನ್ನು ಹೊಂದಿರುತ್ತದೆ. ಬೆಲೆ ಏರಿಕೆಯ ಜೊತೆಗೆ ಗ್ರಾಹಕರಿಗೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವನ್ನು ನೀಡುತ್ತಿದೆ. ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗಿದ್ದು, ಮೊಸರಿಗೆ ಈ ಹಿಂದಿನ ದರವೆ ಅನ್ವಯವಾಗಲಿದೆ.

ಹಾಲು ಹೆಚ್ಚಳ ಮಾಡಿ, ದರ ಏರಿಕೆ ಮಾಡಿದ ಕೆಎಂಎಫ್
ಬೆಲೆ ಏರಿಕೆ ಬ್ಗಗೆ ಸುದ್ದಿಗೋಷ್ಠಯಲ್ಲಿ ಮಾತನಾಡಿರುವ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ "ಇಷ್ಟು ದಿನ ಅರ್ಧ ಲೀಟರ್ ಪ್ಯಾಕೇಟ್ ನಲ್ಲಿ 500 ಎಂಎಲ್ ಹಾಲು ಇರುತ್ತಿತ್ತು, ಇನ್ನು ಮುಂದೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಪ್ಯಾಕೇಟ್ ನಲ್ಲಿ ಸಿಗಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ ಎರಡು ರೂಪಾಯಿ ಹೆಚ್ಚಳ ಮಾಡುತ್ತಿದ್ದೇವೆ. ಹಾಲು ಹೆಚ್ಚಳ ಮಾಡಿದ್ದಕ್ಕೆ 2 ರೂಪಾಯಿ ದರ ಏರಿಕೆ ಮಾಡಿದ್ದೇವೆ. ಸಾವಿರ ಎಂಎಲ್ ಬರ್ತಿದ್ದ ಹಾಲು ಇನ್ಮೇಲೆ ಸಾವಿರದ ಐವತ್ತು ಎಂಎಲ್ ಗೆ ಏರಿಕೆಯಾಗಲಿದೆ" ಎಂದು ಮಾಹಿತಿ ನೀಡಿದರು.
ಮುಂದುವರಿದು "ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. ಪ್ರತಿದಿನ 98,17,000 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆಯೇ ಸರಿ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ" ಎಂದರು.

ಹಾಲಿನ ಹೊಸ ದರ ಹೇಗಿದೆ.?
* ನೀಲಿ ಪ್ಯಾಕೆಟ್ ಹಾಲು - 42 ರಿಂದ 44 ರೂಪಾಯಿಗೆ ಏರಿಕೆ
* ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) - 43 ರಿಂದ 45 ರೂಪಾಯಿಗೆ ಏರಿಕೆ
* ಆರೆಂಜ್ ಪ್ಯಾಕೆಟ್ ಹಾಲು - 46 ರಿಂದ 48 ರೂಪಾಯಿಗೆ ಏರಿಕೆ
* ಆರೆಂಜ್ ಸ್ಪೆಷಲ್ ಹಾಲು- 48 ರಿಂದ 50 ರೂಪಾಯಿಗೆ ಏರಿಕೆ
* ಶುಭಂ ಹಾಲು - 48 ರಿಂದ 50 ರೂಪಾಯಿಗೆ ಏರಿಕೆ
* ಸಮೃದ್ದಿ ಹಾಲು - 51 ರಿಂದ 53 ರೂಪಾಯಿಗೆ ಏರಿಕೆ
* ಶುಭಂ (ಟೋನ್ಡ್ ಹಾಲು) - 49 ರಿಂದ 51 ರೂಪಾಯಿಗೆ ಏರಿಕೆ
* ಸಂತೃಪ್ತಿ ಹಾಲು - 55 ರಿಂದ 57 ರೂಪಾಯಿಗೆ ಏರಿಕೆ
* ಶುಭಂ ಗೋಲ್ಡ್ ಹಾಲು- 49 ರಿಂದ 51 ರೂಪಾಯಿಗೆ ಏರಿಕೆ
* ಶುಭಂ ಡಬಲ್ ಟೋನ್ಡ್ ಹಾಲು - 41 ರಿಂದ 43 ರೂಪಾಯಿಗೆ ಏರಿಕೆ












Click it and Unblock the Notifications