Breaking; ಕೆಂಪೇಗೌಡ ಪ್ರತಿಮೆ, ಸಿಎಂ ಜೊತೆ ಗುರುವಾರ ಮೋದಿ ಸಭೆ
ಬೆಂಗಳೂರು, ಅಕ್ಟೋಬರ್ 26; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ನವೆಂಬರ್ 11ರಂದು ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ನವೆಂಬರ್ 11ರಂದು ಬೆಂಗಳೂರು ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮವಿದೆ. ಈ ಕಾರ್ಯಕ್ರಮದ ಕುರಿತು ಚರ್ಚಿಸಲು ಮೋದಿ ಗುರುವಾರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದ ವಿವರಗಳನ್ನು ನರೇಂದ್ರ ಮೋದಿಗೆ ಬಸವರಾಜ ಬೊಮ್ಮಾಯಿ ವಿವರಿಸಲಿದ್ದಾರೆ. ಇದರ ಜೊತೆಗೆ ನವೆಂಬರ್ 11ರಂದು ಬೆಂಗಳೂರಿನಲ್ಲಿ ಬೇರೆ ಯಾವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಮುಖ್ಯಮಂತ್ರಿಗಳ ಸಭೆ; ಗುರುವಾರ ಪ್ರಧಾನಿಗಳ ಜೊತೆ ಸಭೆ ಇರುವ ಹಿನ್ನಲೆಯಲ್ಲಿ ಬುಧವಾರ ಸಂಜೆ 7ಕ್ಕೆ ಮುಖ್ಯಮಂತ್ರಿಗಳು ಪೂರ್ವಭಾವಿ ಸಭೆ ಕರೆದಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 21 ರಿಂದ ನವೆಂಬರ್ 7ರ ತನಕ ರಾಜ್ಯಾದ್ಯಂತ ಮೃತ್ತಿಕಾ ಸಂಗ್ರಹ ಅಭಿಯಾನ ನಡೆಸುತ್ತಿದೆ.
ಈ ಅಭಿಯಾನದ ಅಂಗವಾಗಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆ, ಕಲ್ಯಾಣಿ, ನದಿ, ಪುಷ್ಕರಣಿ, ಪುಣ್ಯ ಪುರುಷರ ಸಮಾಧಿಗಳ ಪವಿತ್ರ ಮಣ್ಣನ್ನು ಸಂಗ್ರಹ ಮಾಡಲಾಗುತ್ತಿದೆ. 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯ ಜೊತೆಗೆ ಥೀಮ್ ಪಾರ್ಕ್ ಸಹ ನಿರ್ಮಾಣ ಮಾಡಲಾಗಿದೆ.
23 ಎಕರೆ ಪ್ರದೇಶದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡರ ಕಂಚಿನ ಪ್ರತಿಮೆಗೆ ಸುಮಾರು 85 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಕೆಂಪೇಗೌಡರ ಕೈಯಲ್ಲಿರುವ ಖಡ್ಗ 4 ಸಾವಿರ ಕೆಜಿ ತೂಕವಿದೆ. ದೆಹಲಿಯಿಂದ ಅದನ್ನು ಬೆಂಗಳೂರಿಗೆ ತರಲಾಗಿದೆ. ನೋಯ್ಡಾ ಮೂಲದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.












Click it and Unblock the Notifications