ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆರು ತಿಂಗಳಲ್ಲಿ 16 ದಶಲಕ್ಷ ಜನರ ಭೇಟಿ
ಬೆಂಗಳೂರು, ನ. 11 : ಎಲ್ಲರ ಕಣ್ಣು ಇಂದು ಬೆಂಗಳೂರು ವಿಮಾನ ನಿಲ್ದಾಣದತ್ತವೇ ಇದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಇದರ ನಡುವೆ ಲಕ್ಷಾಂತರ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸಿರುವ ಬಗ್ಗೆ ಹೊಸ ವಿವರಗಳು ಬಿಡುಗಡೆಯಾಗಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ಸಿಲಿಕಾನ್ ಸಿಟಿಯಿಂದ ಪ್ರಯಾಣಿಸುತ್ತಾರೆ.
ಬೆಂಗಳೂರು ವಿಮಾನ ನಿಲ್ದಾಣದ ಆಡಳಿತವು ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಸುಮಾರು 16.75 ಮಿಲಿಯನ್ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ ಎಂದು ಘೋಷಿಸಿತು.
ವಿಮಾನ ನಿಲ್ದಾಣದ ಆಡಳಿತವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 16.75 ಮಿಲಿಯನ್ ಪ್ರಯಾಣಿಕರಲ್ಲಿ 2.1 ಮಿಲಿಯನ್ ಪ್ರಯಾಣಿಕರು ಅಂತರಾಷ್ಟ್ರೀಯ ವಿಮಾನ ಸೇವೆಗಳ ಮೂಲಕ ಮತ್ತು 14.74 ಮಿಲಿಯನ್ ಪ್ರಯಾಣಿಕರು ದೇಶೀಯ ವಿಮಾನ ಸೇವೆಗಳ ಮೂಲಕ ಪ್ರಯಾಣಿಸಿದ್ದಾರೆ.

ಅಕ್ಟೋಬರ್ 9 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 97,040 ಜನರು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅಕ್ಟೋಬರ್ 9 ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಂಡ ಅತ್ಯಂತ ಜನನಿಬಿಡ ದಿನವಾಗಿದೆ.
ಎಲ್ಲಾ ದೇಶೀಯ ಪ್ರಯಾಣಿಕರಲ್ಲಿ ಶೇಕಡಾ 44 ರಷ್ಟು ಪ್ರಯಾಣಿಕರು ಬೆಂಗಳೂರು - ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿನ್ ಮತ್ತು ಪುಣೆಗಳ ನಡುವೆ ಪ್ರಯಾಣಿಸಿದ್ದಾರೆ. ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ 54% ಪ್ರಯಾಣಿಕರು ಬೆಂಗಳೂರು - ದುಬೈ, ದೋಹಾ, ಸಿಂಗಾಪುರ್, ಫ್ರಾಂಕ್‌ಫರ್ಟ್ ಮತ್ತು ಬ್ಯಾಂಕಾಕ್‌ಗಳಿಗೆ ಪ್ರಯಾಣ ಬೆಳೆಸಿದ್ದಾರೆ.

ಇನ್ನು ಉದ್ಘಾಟನೆಗೊಳ್ಳಲಿರುವ ಟರ್ಮಿನಲ್ 2 (ಗಾರ್ಡನ್ ಟರ್ಮಿನಲ್) ಪ್ರತಿ ವರ್ಷ ಸುಮಾರು 25 ಮಿಲಿಯನ್ ಜನರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಅಂತರರಾಷ್ಟ್ರೀಯ ಕಾರ್ಯಾಚರಣೆಗಳು 2023 ರಲ್ಲಿ ಟರ್ಮಿನಲ್ 2 ನಲ್ಲಿ ಪ್ರಾರಂಭವಾಗುತ್ತವೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನೂತನ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.












Click it and Unblock the Notifications